ಸೋಜುಗದ ಸೂಜು ಮಲ್ಲಿಗೆ

Read this english here

೨೦೨೦ ಫೇಬ್ರವರಿ ೨೧ ರ ಮಾಹಾಶಿವರಾತ್ರಿಗೂ ಮುನ್ನ ಈ ಪದ್ಯದ ಇರವಿನ ಅರಿವೇ ಇರಲಿಲ್ಲ. ಅಂದು ಈಶ ಪ್ರತಿಷ್ಠಾನದಿಂದ ಆಯೋಜಿಸಲ್ಪಟ್ಟ ಜಾಗರಣೆ ಮತ್ತು ಜಾಗೃತಿಯ ಕಾರ್ಯಕ್ರಮದಲ್ಲಿ ಅನನ್ಯಾ ಭಟ್ ಅವರು ಹಾಡಿದ “ಸೋಜುಗದ ಸೂಜುಮಲ್ಲಿಗೆ” ಹಾಡು ಕೇಳಿದಷ್ಟೂ ಸಾಲದಾಯಿತು. ಹಲವು ಸಲ ಕೇಳಿದ ಬಳಿಕ ಈ ಜಾನಪದ ಹಾಡಿನ ಸಾಹಿತ್ಯಕ್ಕಾಗಿ, ತಾತ್ಪರ್ಯಕ್ಕಾಗಿ ಹುಡುಕಿದೆ ಮನಸ್ಸಮಾಧಾನವಾಗುವಷ್ಟು ಸಿಗಲಿಲ್ಲ. ಅದಕ್ಕೆ ನಾನೇ ಬರೆಯುವ ಧಾರ್ಷ್ಟ್ಯ ಮಾಡುತ್ತಿದ್ದೇನೆ. ಕನ್ನಡ ಭಾಷೆಯೇ ಗೊತ್ತಿಲ್ಲದ ಹಲವರು ಭಾವುಕರಾಗಿ ಕಣ್ಣೀರಿಳಿಸಿದ ಈ ಹಾಡನ್ನು ಇಲ್ಲಿ ಕೇಳಿ. ಈ ಹಾಡನ್ನು ಹಾಡಿದ ಅನನ್ಯಾ ಭಟ್ ಅವರಿಗೂ, ಅದು ನನ್ನ ಕಿವಿಗೆ ತಲುಪಲು ಕಾರಣವಾದ ಮಹಾಶಿವರಾತ್ರಿ ಕಾರ್ಯಕ್ರಮಕ್ಕೂ ಅನಂತ ಕೃತಜ್ಞತೆಗಳು.

https://youtu.be/1ZlFTCz7t_w?t=29

ಪದ್ಯದ ಸಾಹಿತ್ಯವನ್ನು ಮತ್ತೆ ಮತ್ತೆ ಕೇಳಿಕೋಂಡು ಕೀಲಿಮಣೆಯಿಂದ ಇಳಿಸಿದ್ದೇನೆ. ಅದನ್ನು ಅನನ್ಯಾ ಅವರು ಹಾಡಿದಂತೆಯೂ, ಸಂಕ್ಷಿಪ್ತವಾದ ರೂಪದಲ್ಲಿಯೂ ಕೆಳಗೆ ಕೊಟ್ಟಿದ್ದೇನೆ. ಅದರ ನಂತರ ನನಗೆ ಕಂಡ ಧ್ವನಿಗಳನ್ನು, ಸಂಭವನೀಯ ಪಾಠಾಂತರಗಳ ಧ್ವನಿಗಳನ್ನೂ ಕೋಟ್ಟಿದ್ದೇನೆ. ಶಿವನ ಚಿತ್ರಗಳನ್ನು ಕೊಟ್ಟಿಲ್ಲ, ಮನಸ್ಸಿನಲ್ಲಿ ಚಿತ್ರ ಬರಿಸಿ/ಭರಿಸಿ ಕೊಳ್ಳುವುದು ಧ್ಯೆಯ, ನಿಮಗದರಲ್ಲಿ ಕಿಂಚಿತ್ತು ಸಹಾಯವಾದರೂ ಈ ಕೆಲಸ ಧನ್ಯ

ಸೋಜುಗದ ಸೂಜು ಮಲ್ಲಿಗೆ

ಸೋಜುಗದ ಸೂಜು ಮಲ್ಲಿಗೆ,
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ

ಅಂದಾವರೆ ಮುಂದಾವರೆ ಮತ್ತೆ ತಾವರೆ ಪುಷ್ಪ, ಚಂದಕ್ಕಿ ಮಾಲೆ ಬಿಲ್ಪತ್ರೆ ಮಾದೇವ ನಿಮ್ಗೆ
ಚಂದಕ್ಕಿ ಮಾಲೆ ಬಿಲ್ಪತ್ರೆ ತುಳಸಿದಳವ ಮಾದಪ್ನ ಪೂಜೆಗೆ ಬಂದು.

ಮಾದೇವ ನಿಮ್ಮ
ಸೋ|2|

ತಪ್ಪಳೆ ಬೇಳಗಿವ್ನಿ ತುಪ್ಪವ ಕಾಯ್ಸಿವ್ನಿ , ಕಿತ್ತಳೆ ಹಣ್ಣ ತಂದಿವ್ನಿ ಮಾದೇವ ನಿಮ್ಗೆ
ಕಿತ್ತಳೆ ಹಣ್ಣ ತಂದಿವ್ನಿ, ಮಾದಪ್ಪ. ಕಿತ್ತಡಿ ಬರುವ ಪರಸೆಗೆ, ಮಾದೇವ ನಿಮ್ಮ

ಮಾದೇವ ನಿಮ್ಮ
ಸೋ |2|

ಬೆಟ್ಟತ್ಕೋಂಡೋಗೋರ್ಗೆ ಹಟ್ಟಿ ಹಂಬಲವ್ಯಾಕ ಬೆಟ್ಟದ್ಮಾದೇವ ಗತಿಯೆಂದು ಮಾದೇವ ನೀವೆ
ಬೆಟ್ಟದ್ಮಾದೇವ ಗತಿಯೆಂದು ಅವರಿಂದು ಹಟ್ಟಿ ಹಂಬಲವ ಮರೆತಾರೋ. ಮಾದೇವ ನಿಮ್ಮ

ಮಾದೇವ ನಿಮ್ಮ
ಸೋ |2|

ಹುಚ್ಚೆಳ್ಳು ಹೂನಂಗೆ ಹೆಚ್ಚೇವೊ ನಿನ್ನ ಪರುಸೆ, ಹೆಚ್ಚಾಳಗಾರ ಮಾದಯ್ಯ ಮಾದಯ್ಯ ನೀನೆ
ಹೆಚ್ಚಳಗಾರ ಮಾದಯ್ಯ ಎಳು ಮಲೆಯ | ಹೆಚ್ಚೇವು ಗೌರಳ್ಳಿ ಕಣಿವೇಲಿ ಮಾದೇವ ನಿಮ್ಮ

ಮಾದೇವ ನಿಮ್ಮ
ಸೋ |2|



ಸೋಜುಗದ ಸೂಜು ಮಲ್ಲಿಗೆ (ಸಂಕ್ಷಿಪ್ತ, ರೂಪ)

ಸೋಜುಗದ ಸೂಜಿ ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ ||

ಅಂದವರೆ ಮುಂದವರೆ ಮತ್ತೆ ತಾವರೆ ಪುಷ್ಪ
ಚಂದಕ್ಕಿ ಮಾಲೆ ಬಿಲ್ಪತ್ರೆ, |ಮಾದೇವ ನಿಮ್ಗೆ| ತುಳಸಿದಳವ
ಮಾದಪ್ನ ಪೂಜೆಗೆ ಬಂದು. 
ಮಾದೇವ ನಿಮ್ಮ

ತಪ್ಪಳೆ ಬೇಳಗಿವ್ನಿ ತುಪ್ಪವ ಕಾಯ್ಸಿವ್ನಿ 
ಕಿತ್ತಳೆ ಹಣ್ಣ ತಂದಿವ್ನಿ, |ಮಾದೇವ ನಿಮ್ಗೆ| ಮಾದಪ್ಪ
ಕಿತ್ತಡಿ ಬರುವ ಪರಸೆಗೆ. 
ಮಾದೇವ ನಿಮ್ಮ

ಬೆಟ್ಟ್ಹತ್ಕೋಂಡ್ ಓಗೋರ್ಗೆ ಹಟ್ಟಿ ಹಂಬಲವ್ಯಾಕ 
ಬೆಟ್ಟದ್ಮಾದೇವ ಗತಿಯೆಂದು, |ಮಾದೇವ ನೀವೆ| ಅವರಿಂದು
ಹಟ್ಟಿ ಹಂಬಲವ ಮರೆತಾರೋ. 
ಮಾದೇವ ನಿಮ್ಮ

ಹುಚ್ಚೆಳ್ಳು ಹೂನಂಗೆ ಹೆಚ್ಚೇವೊ ನಿನ್ನ ಪರುಸೆ,
ಹೆಚ್ಚಳಗಾರ ಮಾದಯ್ಯ, | ಮಾದಯ್ಯ ನೀನೆ | ಎಳು ಮಲೆಯ
ಹೆಚ್ಚೇವು ಗೌರಳ್ಳಿ ಕಣಿವೇಲಿ. 
ಮಾದೇವ ನಿಮ್ಮ


ಸೋಜುಗಗಳು

ಇದು ಜಾನಪದ ಹಾಡು, ನೇರ ಅರ್ಥ, ಸರಳ ಧ್ವನಿ ಎಂಬ ಅಭಿಪ್ರಾಯವಿರಬಹುದು. ನನಗದು ಸಹಮತವಲ್ಲ. ಮುಗ್ಧ ಹಳ್ಳಿಗಾಡಿನ ಭಕ್ತೆಯ ಚಿತ್ರ ಕಣ್ಮುಂದೆ ಫಕ್ಕನೆ ಬರುತ್ತದಾದರೂ, ಸಾಹಿತ್ಯದ ಆಳಕ್ಕೆ ಕವಿಗಿಂತಲೂ ಹೆಚ್ಚು ಸಹೃದಯನು ಹೋಗಬಹುದಲ್ಲ? ಜಾನಪದ ಹಾಡುಗಳನ್ನು ಎಳೆದು ಜಗ್ಗಿ ಹಾಡುವಾಗ ಬರುವ ಶಬ್ದ ಅರ್ಥಗಳು ಅತಿಶಯ. ಇವೆಲ್ಲವೂ ಬೌದ್ಧಿಕ ಕಸರತ್ತೆಂದರೆ ಅದು ಜಾನಪದ ಕವಿಗಳ ಧೀಶಕ್ತಿಗೆ ಅವಮಾನಮಾತ್ರವಲ್ಲದೇ ನಮಗೇ ಆಗುವ ನಷ್ಟ. ಜಾನಪದ ಹಾಡು, ಮೂಲಕವಿ ಕಾವ್ಯಗಳು ಇಲ್ಲದಿದ್ದುದರಿಂದ, ಯಾರೂ ನನ್ನನ್ನು ತಿದ್ದಲಾಗದೆಂಬ “ಧೈರ್ಯ”ದಲ್ಲಿ ಕೆಲವು ಶಬ್ದಗಳ ಸಂಭಾವ್ಯ ಪರ್ಯಾಯಗಳನ್ನೂ ತೆಗೆದುಕೊಂಡಿದ್ದೇನೆ. ಈ ಹಾಡನ್ನು ಈ ಕೆಳಗಿನಂತೆ ನಾನು “ಕಂಡೆ”. 

ಶಿವಭಕ್ತೆಯೊಬ್ಬಳ (ಸ್ತ್ರೀ ಯಾಕೆಂದು ಕೆಳಗೆ ಇದೆ) ಕಣ್ಣಲ್ಲಿ ಮಲೆ ಮಹದೇಶ್ವರ ಬೆಟ್ಟ, ಅದರ ತಪ್ಪಲು/ಕಣಿವೆಯಿಂದ ಮೇಲ್ಮುಖವಾಗಿ, ಒಂದು ಸುಂದರ ಚಿತ್ರಪಟವನ್ನು ಈ ಹಾಡು ಬರೆಸುತ್ತದೆ. ಅವಳ ಉತ್ಕಟ ಭಕ್ತಿಭಾವ ನಮ್ಮೊಳಗೂ ಕೂಡಿಕೊಳ್ಳುತ್ತಲೇ ಹೊಸ ಒಂದು ಪ್ರಪಂಚದೆಡೆ ಕಣ್ಣು ತೆರೆಯುತ್ತದೆ. ಅವಳೇ ನಮ್ಮ ಹಾಡುಗಾತಿ.

..ಮಾದೇವ ನಿನ್ನ.. ಸೋಜುಗದ ಸೂಜಿ ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ.

ಅರ್ಥ: ಮಹದೇವ, ನಿನ್ನ ತಲೆಯ ಮೇಲೆ ವಿಸ್ಮಯಕರವಾದ ಸೂಜಿಮಲ್ಲಿಗೆ, ದುಂಡುಮಲ್ಲಿಗೆ (ಗಳ ಅರ್ಪಣೆ)

ಸೋಜುಗ = ಸೋಜಿಗ =ವಿಸ್ಮಯ
ಮಂಡೆ = ತಲೆಯ ಮೇಲ್ಭಾಗ

ಮಲೆ ಮಹಾದೇವ ಸ್ವಾಮಿಗೂ ಮಲ್ಲಿಗೆಗೂ ಎಲ್ಲಿಲ್ಲದ ಸಂಬಂಧ. ಶಿವನ ಅವತಾರವೆಂದೇ ಪರಿಗಣಿಸಲ್ಪ ಮಾದಪ್ಪ ನ ಬಗೆಗಿನ “ಮಲ್ಲಿಗೆ ಹೂವಾಗಿ ಚೆಲ್ಲಿತು ನಿನ್ ಪರದಿ ಚೆಲ್ಲಾಟಗಾರ ಮಾದಪ್ಪ. . .”, “ಚೆಲ್ಲಿದರು ಮಲ್ಲಿಗೆಯಾ, ಬಾನಸುರೇರಿ ಮ್ಯಾಲೆ, ಅಂದದ ಚಂದದ ಮಾಯ್ಕಾರ ಮಾದೇವ್ಗೆ…” ಹಾಡುಗಳು ಜ್ಞಾಪಕಕ್ಕೆ ಬರುತ್ತವೆ. ಪದ್ಯದ ಆರಂಭದಲ್ಲೇ ಶಿವಲಿಂಗ, ಅದರ ಮೇಲೆ ಬಿಳಿ ಮಲ್ಲಿಗೆಗಳ ಚಿತ್ರ. ಸೂಜಿ ಮಲ್ಲಿಗೆಯಂಥಾ ನಕ್ಷತ್ರಗಳಡಿಯಲ್ಲಿ ದುಂಡುಮಲ್ಲಿಗೆ ಚಂದ್ರನ ಬೆಳಕಿನಲ್ಲಿ ಹಿಮಾಚ್ಛಾದಿತ ಕೈಲಾಸಪರ್ವತದಂತೆ.

ಸೂಜಿ ಮಲ್ಲಿಗೆಯಲ್ಲಿ ವಿಸ್ಮಯಕರವಾದುದೇನಿದೆ? ಅಭಿಷೇಕ ಪಾತ್ರೆಯಿಂದಿಳಿಯುವ ಜಲಧಾರೆಯೆ? ವ್ಯೋಮಕೇಶನ ಜಟೆಯಿಂದ ಜಾಹ್ನವಿ ಚಿಮ್ಮುತ್ತಿರುವುದೇ? ಮಾದೇವನ ಮಂಡೆಯ ಮೇಲೇ ಮನೆಮಾಡಿರುವ ಚೂಪು ಅಂಚುಗಳ ಬಿದಿಗೆ ಚಂದ್ರನೇ? ಹಾಗಾದರೆ ದುಂಡು ಮಲ್ಲಿಗೆ ಏನು, ಆ ದಿನ ಬಿದಿಗೆಯಲ್ಲ ಪೂರ್ಣಿಮೆಯಿದ್ದಿರಬೇಕು. ಧ್ಯಾನಾಸಕ್ತ ಶಿವನ ಚಿತ್ರ ಕಣ್ಣಿನೊಳಪದರದ ಮುಂದೆ ಕಟ್ಟುತ್ತದೆ. ಅವನ ಮುಂದೆ ಹಾಡುಗಾತಿ ಶರಣಾಗಿ ನಿಂತಿದ್ದಾಳೆ. 

ಅಂದಾವರೆ ಮುಂದಾವರೆ ಮತ್ತೆ ತಾವರೆ ಪುಷ್ಪ
ಚಂದಕ್ಕಿ ಮಾಲೆ ಬಿಲ್ಪತ್ರೆ |ಮಾದೇವ ನಿಂಗೆ| ತುಳಸಿದಳವ,
ಮಾದಪ್ನ ಪೂಜೆಗೆ ಬಂದು

ಅರ್ಥ: ಹಲವು ವಿಧದ ತಾವರೆ ಪುಷ್ಪಗಳು, ಅವುಗಳ ಮಾಲೆ,ಎಕ್ಕದ ಹೂವಿನ ಮಾಲೆ, ಬಿಲ್ವಪತ್ರೆ ತುಳಸಿದಳ ಮಹದೇವನ ಪೂಜೆಗೆ ಅರ್ಪಣೆ

ಅವರೆ = ಅಪ್ಸರೆ
ಚಂದಕ್ಕಿ =ಬಿಳಿ ಎಕ್ಕದ ಹೂ, ಚಂದ್ರ, ಚಂದಕ್ಕಾಗಿ

ಅಂದಾವರೆ ಮುಂದಾವರೆ ಶಬ್ದಗಳಿಗೆ ನಿಘಂಟಿನಲ್ಲಿ ಹೂಗಳೆಂದಾಗಲಿ, ಬೇರೇನಾಗಲಿ ಅರ್ಥ ಸಿಕ್ಕಲಿಲ್ಲ. ತಾವರೆಯಂತಿರುವ ಹೂಗಳೆನ್ನಬಹುದು, ಸೇವಂತಿಗೆ ಎರವಂತಿಗೆ ಇದ್ದಂತೆ ಇವುಗಳೂ ಕೂಡ. ಹಲವು ವಿಧದ ಹೂವುಗಳು ಪೂಜೆಗೆ ಒದಗಿ ಬಂದುವು ಎಂದು ನೇರವಾಗಿ ಅರ್ಥೈಸಿಕೊಳ್ಳಬಹುದು. ಉತ್ತರ ಕನ್ನಡದ ಕಡೆ ತಾವರೀ ಎಂದು ಹೇಳುತ್ತಾರೇ, ಹಾಗೇ ಅಂದಾವ-ರೀ ಮುಂದಾವ-ರೀ ಗೆ ಹಲವು ಹೊಸ ಅರ್ಥಗಳು ಬರುತ್ತವೆ.

“ಅವರೆ” ಶಬ್ದಕ್ಕೆ ಅಪ್ಸರೆ ಎಂಬರ್ಥವಿದೆ! ಅಂದದ ಅಪ್ಸರೆಯರು ಮುಂದೆ ಇದ್ದಾರೆ, (ಮುಂದೆ ಅವ ರೀ), ಮಾದಪ್ನ ಪೂಜೆಗೆ ಬಂದು ಸರತಿ ನಿಂತಿದ್ದಾರೆ, ಶಿವನ ಮೇಲೆ ಏರಿಸಲು ತಾವರೆ ತಂದಿದ್ದಾರೆ, ಬಿಲ್ವ ತುಳಸೀದಳಗಳನ್ನು ಚಂದ್ರಚೂಡನಿಗರ್ಚಿಸುವಾಗ ಚಂದ್ರನ (ಚಂದಕ್ಕಿ ಮ್ಯಾಲೆ) ಮೇಲೂ ಬಿಳದಿದ್ದಾವೇ? 

ಅಂದಿದ್ದಾರೆ ಹಿಂದಿನ ಹಿರಿಯರು (ಅಂದವ್ರೆ ಮುಂದವ್ರು.) ಎಂದು ಅರ್ಥ ಸೆಳೆದರೆ ಇನ್ನೊಂದು ತೆರನಾದ ಚಿತ್ರಣ. ಚಂದಕ್ಕಾಗಿ ಈ ಮಾಲೆ, ಶಿವನಿಗೆ ಬಿಲ್ವ ತುಳಸಿಗಳೇ ಸಾಕಲ್ಲವೇ? ಅಲಂಕಾರ ಪ್ರಿಯೋ ವಿಷ್ಣುಃ ಅಭಿಶೇಕ ಪ್ರಿಯೋ ಶಂಕರಃ ಎಂಬ ಪುಸ್ತಕದ ಬದನೇಕಾಯಿ ತಿಳಿಯದ್ದು ಅವಳಿಗೆ ಅನುಕೂಲವೇ ಆಯಿತು.

ಇಲ್ಲಿ “ತುಳಸಿದಳ” ಬದಲು “ಗರಿಕೆದಳ” ಎಂದೂ, “ಪೂಜೆಗೆ ಬಂದು” ಬದಲು “ಪೂಜೆಗೆ ಬಿರಿದು” ಎಂದೂ ಪಾಠಾಂತರಗಳನ್ನು ಕೇಳಿದ್ದೇನೆ. ಬಿರಿದು = ಅರಳಿ.
“ಅಂದಾವರಿ ಮಂದಾವರಿ” ಎಂಬ ಪಾಠಾಂತರ ಇಲ್ಲಿದೆ, ಅಂದ ಅವರಿ ಮಂದಿ (ಜನ, ತುಂಬಾ ಜನಗಳು) ಅವ ರೀ (ಮಂದಿ ಅದಾರ ದಂತೆ). ಮಂದಾರ ಹೂವಿಗೆ ಗ್ರಾಮ್ಯ ಪ್ರಯೋಗವೂ ಇರಬಹುದು.

ತಪ್ಪಳೆ ಬೆಳಗಿವ್ನಿ ತುಪ್ಪವ ಕಾಯ್ಸಿವ್ನಿ 
ಕಿತ್ತಳೆ ಹಣ್ಣ ತಂದಿವ್ನಿ |ಮಾದೇವ ನಿಮ್ಗೆ| ಮಾದಪ್ಪ,
ಕಿತ್ತಡಿ ಬರುವ ಪರಸೆಗೆ.

ಅರ್ಥ: ಶುದ್ಧ ಪಾತ್ರದಲ್ಲಿ ಕಾಸಿದ ತುಪ್ಪ ತಂದಿದ್ದೇನೆ, ಕಿತ್ತಳೆ ಹಣ್ಣುಗಳಿವೆ ಋಷಿ ಮುನಿಗಳು ಬರುವ ಮಹದೇವನ ಜಾತ್ರೆಗೆ

ತಪ್ಪಳೆ = ತಪಲೆ = ಲೋಹದ ಪಾತ್ರೆ
ಬೆಳಗಿವ್ನಿ = ಬೆಳಗಿದ್ದೇನೆ = ತಿಕ್ಕಿ ತೊಳೆದಿದ್ದೇನೆ
ಕಿತ್ತಡಿ = ಋಷಿ, ಮುನಿ, ಸಂತ
ಪರಿಸೆ = ಪರಿಶೆ = ಜಾತ್ರೆ, ಸಂತೆ

ಸ್ವಾರಸ್ಯವೇನೆಂದರೆ ಇಡೀ ಪದ್ಯದಲ್ಲಿ ಹಾಡುಗಾರ/ರ್ತಿ ಗಂಡೋ ಹೆಣ್ಣೋ  ತಿಳಿಯುವುದಿಲ್ಲ. ಪಾತ್ರೆ ತೊಳೆಯುವ ಕೆಲಸ ಹೆಣ್ಣುಮಕ್ಕಳದು ಎಂದು ಈಕಾಲಕ್ಕೆ ಒಪ್ಪಿಕೊಳ್ಳಲಾಗದು, ಅಂದು ಹೆಚ್ಚಾಗಿ ಹೆಣ್ಮಕ್ಕಳೇ, ಹಾಡಿದವಳು ಹೆಣ್ಣೆನ್ನಬಹುದು. ಅದು ಬಿಡಿ, ಪದ್ಯದಲ್ಲೆಲ್ಲಾ ಇರುವ ಸೌಮ್ಯ ಸುಮನೋಹರ ಉಪಮೆಗಳೂ ಇದನ್ನೇ ಬಿಂಬಿಸುತ್ತವೆ.  ಇಲ್ಲಿ ಪಾತ್ರೆಯು ಶರೀರಕ್ಕೂ, ಕಾಸಿದ ತುಪ್ಪ ಪಾಕಗೊಂಡ ಜೀವಕ್ಕೂ ಉಪಮೆಗಳಂತಿವೆ. ಮುಂದಿನ ಚರಣದಲ್ಲಿ ಬರುವ ಶಿವ ಸಾನ್ನಿದ್ಧ್ಯ ಸೇರುವಿಕೆಗೆ ಪೂರ್ವಸಾಧನೆಗಳಂತೆ. ಬೂದಿ ಇಜ್ಜಲು ಹುಣಸೇಹುಳಿಗಳಿಂದ ಉಜ್ಜಿಸಿಕೊಂಡು ಪಾತ್ರೆ ಬೆಳಗುತ್ತದೆ, ಕಾಯಕ ಮಾಡಿಯೇ ದೇಹಶುದ್ಧಿ. ಹಾಲಿಂದ ಮೊಸರು, ಮೊಸರು ಕಡೆದು ಬೆಣ್ಣೆ, ಬೆಣ್ಣೆ ಕಾಸಿ ತುಪ್ಪ. ಅಂತರಂಗವೂ ಹಲವು ಮಜಲುಗಳನ್ನು ದಾಟಿದಮೇಲೆ (ಬೆಟ್ಟದ) ಮೇಲಕ್ಕೆ ಹೋಗಲು ತಯಾರಾದೀತೇನೋ.

ಇಲ್ಲಿ ಇನ್ನೊಂದು ಸ್ವಾರಸ್ಯವೂ ಇದೆ. ಕೊನೆಯ ಚರಣಕ್ಕೆ ಸಂಬಂಧಿಸಿದ್ದು. ಹಾಡುಗಾತಿಯ ಕುಟುಂಬ, ಕೇರಿ/ಊರಿನ ಜನರ ಪ್ರಾಪಂಚಿಕ ಅಭ್ಯುದಯವೂ ಮಲೆ ಮಹದೇಶ್ವರನ ಜಾತ್ರೆಯ ಮೇಲೆ ಅವಲಂಬಿಸಿರಬಹುದು. ಹಾಲು ತುಪ್ಪ ಹಣ್ಣುಗಳು ಸಂತೆಯಲ್ಲಿ ಮಾರಾಟವಾಗಲೂ ಮಾದೇಶನ ಕೃಪೆಯಿರಬೇಕು. ಮಲೆ ಮಹದೇಶ್ವರ ಬೆಟ್ಟದ ಬಳಿ ಕಿತ್ತಳೆ ಮರಗಳೂ ಬಹಳ ಇದ್ದಾವು (ಬಲ್ಲವರು ಹೇಳಿ, ಎಂದೂ ಹೋಗದಿದ್ದುದನ್ನು ಬಹಳ ಹಳಿದುಕೊಂಡೆ).

ಬೆಟ್ಟ್ಹತ್ಕೋಂಡ್ ಓಗೋರ್ಗೆ ಹಟ್ಟಿ ಹಂಬಲವ್ಯಾಕ 
ಬೆಟ್ಟದ್ಮಾದೇವ ಗತಿಯೆಂದು |ಮಾದೇವ ನೀವೆ| ಅವರಿಂದು
ಹಟ್ಟಿ ಹಂಬಲವ ಮರೆತಾರೋ

ಅರ್ಥ: ಬೆಟ್ಟ ಹತ್ತುವವರಿಗೆ ಮನೆಯ ಸೆಳೆತವೇಕೆ? ಮಲೆ ಮಹದೇಶ್ವರನೇ ಶರಣೆಂದು ತಮ್ಮ ಬಂಧನಗಳಿಂದ ವಿಮುಕ್ತರಾಗುತ್ತಾರೆ

.

ಹಟ್ಟಿ = ಬಡವರ ಪುಟ್ಟ ಮನೆ, ಗುಡಿಸಲು
ಹಿಟ್ಟು = ಅನ್ನ, ರೊಟ್ಟಿ, ಹೊಟ್ಟೆಗೆ ತಿನ್ನುವಂತದ್ದು
ಅಂಬಲಿ = (ರಾಗಿಯ) ಗಂಜಿ
ಇಕ್ಕು = ಬಡಿಸು, ಈವೆ = ಬಡಿಸುವೆ
ಮಾದೇವನೆ ಈವೆ (?)

ಶಿವಸಾನ್ನಿಧ್ಯದ ತವಕವಿರುವವರಿಗೆ ಮನೆ ಯಾಕೆ? ಹಂಬಲ, ಆಸೆ, ಯಾಕೆ? . ಮಹಾದೇವನೇ ಶರಣೆಂದಾಗ ತನ್ನಿಂದತಾನೆ ಮನೆ,ಅಂದರೆ ಸಂಸಾರದ, ಬಂಧನವನ್ನು ಮರೆತು ಬಿಡುತ್ತಾರೆ. ಇಲ್ಲಿ ಮೊದಲಸಾಲಿನಲ್ಲಿ “ಹಟ್ಟಿ, ಹಂಬಲ”ವೆಂದೂ, ಕೊನೆಯ ಸಾಲಿನಲ್ಲಿ “ಹಟ್ಟಿಯ ಹಂಬಲ”ವೆಂದೂ ತೆಗೆದುಕೊಳ್ಳಬೇಕು. ಕನ್ನಡದಲ್ಲಿ ವಿಭಕ್ತಿಯ ಪ್ರತ್ಯಯಗಳನ್ನು ನುಂಗುವುದು ವಾಡಿಕೆ, ಇದನ್ನು ಬಹಳ ಚಾಣಾಕ್ಷನಾಗಿ ಉಪಯೋಗಿಸಿದ್ದಾನೆ ಕವಿ (ಕವಯಿತ್ರಿ)

ಸಂಭಾವ್ಯ ಶಬ್ದಾಂತರ: “ಹಟ್ಟಿ ಹಂಬಲವ್ಯಾಕ” ಬದಲು “ಹಿಟ್ಟು ಅಂಬಲಿಯಾಕ”. ಹಾಡಿನಲ್ಲಿ ಬೇರೆ ಯಾವ ಚರಣದಲ್ಲೂ “ಹಟ್ಟಿ ಹಂಬಲ” ಎಂಬಷ್ಟು ದೊಡ್ಡ ವಿಷಯದ ಪುನರುಕ್ತಿ ಮಾಡಿಲ್ಲ, ಇಲ್ಲಿ ಮಾಡಿದೆಯಾದರೂ ಬೇರೆ ಬೇರೆ ಆರ್ಥದಲ್ಲಿ. ಈ ಚರಣದಲ್ಲಿ ಕೋನೆಯ ಪಾದದ ಗುಟ್ಟನ್ನು ಮೊದಲೇ ಬಿಟ್ಟುಕೊಡದೇ ಇರಬಹುದೇ? ಇದು ನನ್ನ ಸೇರ್ಪಡೆ ಎನ್ನುವುದಕ್ಕಿಂತ ಹೀಗೆಯೂ ಪಾಠಾಂತರ ಇದ್ದಿರಬಹುದು ಅನ್ನಿಸುತ್ತದೆ.

ಹಾಡುಗಾರ್ತಿಯ ಮನೆ ಮಲೆ ಮಹದೇಶ್ವರನ ಯಾತ್ರೆಯ ಪಥದಲ್ಲಿದ್ದಂತೆ ಚಿತ್ರಿಸಿಕೊಳ್ಳುತ್ತಿದ್ದೇನೆ. ಹಿಟ್ಟು ಅಂಬಲಿ ಪರಿವೆಯಿಲ್ಲದೇ ಬರುವ ಯಾತ್ರಿಗಳಿಗೆ ಬಡಿಸುತ್ತಾಳೆ, ತನ್ನ ಸ್ವಂತ ಸ್ಥಿತಿಯನ್ನು ಅವಲಕ್ಷಿಸಿ.

ಹುಚ್ಚೆಳ್ಳು ಹೂನಂಗೆ ಹೆಚ್ಚೇವೊ ನಿನ್ನ ಪರುಸೆ,
ಹೆಚ್ಚಳಗಾರ ಮಾದಯ್ಯ | ಮಾದಯ್ಯ ನೀನೆ | ಎಳು ಮಲೆಯ
ಹೆಚ್ಚೇವು ಗೌರಳ್ಳಿ ಕಣಿವೇಲಿ

ಅರ್ಥ: ಹುಚ್ಚೆಳ್ಳಿನ ಪುಟ್ಟ ಪುಟ್ಟ ಹಳದಿ ಹೂಗಳಂತೆ ನೀನು ಮುಟ್ಟಿದ ಜನರೊಳಗೆ ಭಕ್ತಿ ಅರಳಿದೆ, ಉದ್ಧಾರಕನೇ ಎಳುಮಲೆ ಮಾದಯ್ಯ, ಈ ಗೌರಿ ಹಳ್ಳಿ ಕಣಿವೆಯಲ್ಲಿ ನಿನ್ನ ಜನರು ಉಕ್ಕಿ ಹರಿದಿದ್ದಾರೆ

ಪರಿಸೆ = ಯಾತ್ರಾರ್ಥಿ/ಭಕ್ತ
ಪರುಸೆ = ಸ್ಪರ್ಷ, ಸಂಪರ್ಕ, ಪಾರಸ ಮಣಿಯಿಂದ ಬಂದ ಶಬ್ದ
ಹುಚ್ಚೆಳ್ಳು = ಒಂದು ರೀತಿಯ ಕಪ್ಪು ಎಳ್ಳು. ಗುರೆಳ್ಳು
ಹೆಚ್ಚು = ಉಕ್ಕಿಹರಿ, ದೊಡ್ಡದಾಗು, ಭರತ (ಕಡಲ ಭರತ)

ಹಾಡುಗಾತಿಯ ನಿತ್ಯಜಿವನದಲ್ಲಿ ಹುಚ್ಚೆಳ್ಳು ಹಾಸುಹೊಕ್ಕಂತಿದೆ. ಹುಚ್ಚೆಳ್ಳಿನ ಎಣ್ಣೆ ಬಡವರ ತುಪ್ಪ ಎನ್ನುತ್ತಾರೆ. ಊಟಕ್ಕೆ ಹುಚ್ಚೆಳ್ಳಿನ ಅಡುಗೆ, ದೇವರಿಗೂ ಅದರ ಹಳದಿ ಹೂವಿನ ಅಲಂಕಾರ. ಹುಚ್ಚೆಳ್ಳು ಸಮೃದ್ಧವಾಗಿ ಬೆಳೆದರೆ ಲೋಕಕ್ಷೇಮ, ಅವಳ ದೃಷ್ಟಿಯಲ್ಲಿ.

ಹೂ ಬಿಡುವುದೆಂದರೆ ಫಲದ ಮುನ್ಸೂಚನೆ. ಕಣಿವೆಯಲ್ಲೆಲ್ಲಾ ಹುಚ್ಚೆಳ್ಳಿನ ಪುಟ್ಟ ಪುಟ್ಟ ಹಳದಿ ಹೂವುಗಳ ಚಿತ್ರಣ, ಆಹಾ! ನಾನು ನೋಡಿಲ್ಲ, ಅದರೆ ಉಹಿಸಿಕೊಳ್ಳಬಲ್ಲೆ, ಗದ್ದೆಯ ತುಂಬಾ ಎಳ್ಳಿನ ಗಿಡಗಳು, ಎಲ್ಲಾ ಹಸಿರು, ಒಂದು ದಿನ ಕೆಲವೇ ಕೆಲವು ಹಳದಿ ಚುಕ್ಕೆಗಳು, ಮರುದಿನ ಇನ್ನಷ್ಟು, ಮರುದಿನ ಮತ್ತಷ್ಟು ಹಳದಿ ನೋಡ ನೋಡುತ್ತಿದ್ದಂತೆ ಹೊಲವಿಡಿ ಹಳದಿಯಾಗುವುದನ್ನು ಸಮುದ್ರದ ಭರತಕ್ಕೆ ಹೋಲಿಸುತ್ತಾಳೆ. ತನ್ನೊಳಗಿನ ಭಕ್ತಿಯೂ ಹೀಗೇ ಉಕ್ಕುತ್ತಿರುವುದನ್ನು ಅನುಭವಿಸಿದ್ದಾಳೆ. ಭಕ್ತಿ ಉಕ್ಕುವ ವ್ಯಕ್ತಪಡಿಸಲಾಗದ ಸ್ಥಿತಿಯನ್ನು ತನ್ನ ಪೈರು ಸಮೃದ್ಧವಾಗಿದ್ದುದನ್ನು ಕಂಡಾಗ ಅನುಭವಿಸಿದ್ದಕ್ಕೆ ಹೋಲಿಸಿದ್ದಾಳೆ. ಉಕ್ಕಿಸುತ್ತಿರುವ ಮಾದೇವ ಮನದ ಮಜ್ಜಿಗೆ ಕಡೆದು ಬೆಣ್ಣೆ ಉಕ್ಕಿಸಿದ್ದಾನೆ, ಕಾಸಿ ತುಪ್ಪವಾಗಿದೆ, ಬೆಟ್ಟ ಹತ್ತಿ, ದೀಪದ ಬತ್ತಿಯಲ್ಲಿ ಸುಟ್ಟು ಹೋಗಲು ಅನುಕೂಲವಾಯಿತು, ಈ ಹಾಡಿನ ರೂಪಕಗಳ ಗೊಂಚಲು ಇಡಿಯಾಯಿತು.

ಹೂಬಿಟ್ಟಿರುವ ಹುಚ್ಚೇಳ್ಳಿನ ಗಿಡಗಳ ಸಾಲುಗಳು ಬೆಟ್ಟ ಹತ್ಕೊಂಡೋಗೋರ ಮಾರ್ಗದರ್ಶಿಯಾಗಿ, ಹುಚ್ಚೆಳ್ಳಿನ ಎಣ್ಣೆಯ ದೀವಟಿಗೆಗಳು ದಾರಿದೀಪವಾಗಿ ಯಾತ್ರೆಗೂ ಶಿವರಾತ್ರಿಯ ಜಾಗರಣೆಗೂ ವಿನಿಯೋಗವಾಗುತ್ತಿರುವ ಸುಂದರ ಚಿತ್ರಣ!

ಮಹಾದೇವನೆಂಬ ಮುಟ್ಟಿದ್ದೆಲ್ಲವ ಪಾವನವಾಗಿಸುವ ಪಾರಸ ಮಣಿಯ ಸಂಪರ್ಕದಿಂದ ಹಾಡುಗಾತಿಯ ಕುಲಜನರೆಲ್ಲಾ ಉದ್ಧಾರವಾಗಿ, ಸಮೃದ್ಧವಾಗಿ ಬೆಳೆದಿದ್ದಾರೆ. ಹುಚ್ಚೆಳ್ಳು ಕಾಳುಗಳಾಗಿ, ಹೂವಿನ ಪಕಳೆಗಳೆಲ್ಲಾ ಉದುರಿದಾಗ ಕಪ್ಪಗೆ ಮನುಷ್ಯರ ಕರಿತಲೆಗಳಂತೆ ಕಾಣುತ್ತದಂತೆ, ಮಾದೇವ ಮೇಲಿಂದ ನೋಡಿದಾಗ, ಬುಡದಲ್ಲಿ ಬೆಟ್ಟ ಏರಲು ಕೂಡಿದ ಶಿವನ ಜನರು ಹುಚ್ಚೇಳ್ಳಿನ ಪೈರಿನಂತೆ ಕಂಡಾರು.

ಗೌರಿ ಕಣಿವೆ ಬದಲು ಬೇರೆ ಊರಿನ ಹೆಸರಿದೆ ಇನ್ನೊಂದೆಡೆ. ಇಲ್ಲಿ ಪ್ರಾಯಶಃ ಹಾಡುವವರು ತಮ್ಮ ಊರಿನ ಹೆಸರನ್ನು ಸೇರಿಸುವುದು ವಾಡಿಕೆ ಇರಬೇಕು. ಬಲ್ಲವರು ಹೇಳಿ.

ಇಲ್ಲೊಂದು ಕಡೆ ಶಿವನನ್ನು “ನೀನೆ” ಎಂದು ಏಕವಚನದಲ್ಲಿ ಸಂಬೋಧಿಸಿದ್ದಾಳೆ. ಜಾನಪದ ಗೀತೆಗಳಲ್ಲಿ ಹೆಚ್ಚಾಗಿ ಕಾಣುವಂತೆ, ಇಷ್ಟದೇವರೊಂದಿಗಿನ ಸಲುಗೆಯನ್ನು ಬಿಂಬಿಸಲು ಏಕವಚನವೇ ಸೂಕ್ತವೆಂದು ತೋರುತ್ತದೆ. ಆದರೂ ಶಿವನ ಮಂಡೆ ಎಂದಾಗ ಬಂದ ಸಲಿಗೆ ಮುಂದಿನೆಲ್ಲಾ ಸಾಲುಗಳಲ್ಲೂ ಉಕ್ಕೆದ್ದು ಕಾಣುತ್ತದೆ. ಮತ್ತೆ, ಹಾಡುಗಾತಿ ಶಿವನಿಗೆ ಕೊಡುವ ಎಲ್ಲಾ ವಸ್ತುಗಳೂ ಅತಿಶಯಾವಾದುವು. ಮಲ್ಲಿಗೆ ಸೋಜುಗದ್ದು, ಹೂಗಳಲ್ಲೆ ಉತ್ತಮವಾದ ತಾವರೆ ಹೂ, ತುಪ್ಪ ದೊಡ್ಡದಾದ ತಪ್ಪಲೆಯಲ್ಲಿ, ಹೀಗೆ ಎಲ್ಲದರಲ್ಲೂ ಸರ್ವೋತ್ತಮವಾದುದು ಮಾತ್ರ ಶಿವನಿಗೆ…

ಹುಚ್ಚೆಳ್ಳಿನ ಹೂಗಳು, ಕೃಪೆ

– ಗಣೇಶಕೃಷ್ಣ ಶಂಕರತೋಟ, ೨೩ ಫೆ ೨೦೨೦

ಪ್ರಕಟಿಸಿದ ನಂತರದ ಬದಲಾವಣೆಗಳು
೧) ಹಲವು ಕಾಗುಣಿತ ತಪ್ಪುಗಳನ್ನು ತಿದ್ದಿದ್ದೇನೆ, ತೋರಿಸಿಕೊಟ್ಟ ಸ್ನೇಹಿತರಿಗೆ ಧನ್ಯವಾದಗಳು. ೨೩-೨-೨೦೨೦
೨) ಹಟ್ಟಿ ಹಂಬಲ ವಿಷಯವಾಗಿ ಇನ್ನಷ್ಟು ವಿವರ ಬರೆದಿದ್ದೇನೆ, ೨೪-೨-೨೦೨೦
೩) ಮಹದೇಶ್ವರ ಸ್ವಾಮಿಗಳು ಶಿವನ ಅವತಾರವೆಂಬ ಸೂಕ್ಷ್ಮ ಬಿಟ್ಟು ಹೋಗಿತ್ತು, ಸೇರಿಸಿದ್ದೇನೆ ೨೫-೨-೨೦೨೦
೪) ಮಂದಾವರಿ ಪಾಠಾಂತರ ೨೫-೨-೨೦೨೦
೫) ಚಂದಕ್ಕಿ = ಎಕ್ಕದ ಹೂ. ಹುಚ್ಚೆಳ್ಳಿನ ಪೈರು ತಲೆಯಂತೆ ಎಂಬ ಜನಪದ ಉಕ್ತಿ ತಿಳಿಸಿದ ಉತ್ತರಕನ್ನಡದ ಮಿತ್ರನಿಗೆ ಪ್ರಣಾಮ. ೨೫-೩-೨೦೨೦
೬) ಪ್ರಥಮ ಹಸ್ತಪ್ರತಿಯನ್ನು ವಿಮರ್ಶಿಸಿದ ಸ್ನೇಹಿತರಿಗೆ ಪ್ರಣಾಮ. ಅವರಲ್ಲೊಬ್ಬನ, ಪದ ಪದರಗಳಲ್ಲಿ ವಿವಿಧ ಧ್ವನಿಗಳಿರುವ ಕವನಗಳು ಇಲ್ಲಿವೆ ( ಜ್ಞಾನಸೂತಕ.com)

Creative Commons License
This work is licensed under a Creative Commons Attribution-NonCommercial-NoDerivatives 4.0 International License.

I tweet @ganeshkrishna

Quote this blog with author name and link. ex: “<tittle> by ಗಣೇಶಕೃಷ್ಣ ಶಂಕರತೋಟ, manjati.net/sojugada “

18 Replies to “ಸೋಜುಗದ ಸೂಜು ಮಲ್ಲಿಗೆ”

  1. ಗಣೇಶಕೃಷ್ಣ ಅವರೆ, ಬಹಳ ಸಂತೋಷ ಆಯಿತು ನೀವು ಬರೆದಿರುವುದನ್ನ ಓದಿ. ತುಂಬಾ ಪರಿಶೀಲಿಸಿ ಬರೆದಿದ್ದೀರಿ.👏👏

  2. ಅತ್ಯಂತ ಉಪಯುಕ್ತ ಲೇಖನ. ಅವರು ಹಾಡಿಗೆ subtitle ಕೊಟ್ಟಿದ್ದರೆ ಹಾಡು ಅರ್ಥ ವಾ ಗ್ತಿತ್ತು. ಇಲ್ಲಿ ಎ ಲ್ಲ ವೂ ಕ್ಲಿಯರ್ ಆಯ್ತು, ಸಂತೋಷ,ಅಭಿನಂದನೆಗಳು. ಜಾನಪದ ಲೋಕ ತುಂಬಾ ಶ್ರೀಮಂತ ವಾಗಿದೆ.

    1. ಧನ್ಯವಾದಗಳು ನರಸಿಂಹಮೂರ್ತಿಗಳೇ.

  3. ತುಂಬಾ ಚೆನ್ನಾಗಿ ಬರೆದಿದ್ದೀರಿ. ” ಮೂಡಲ್ ಕುಣಿಗಲ್ ಕೆರೆ ನೋಡೋಕೊಂದೈಭೋಗ ” ನೆನಪು ಮಾಡಿಕೊಂಡೆ.

    ೧. ಅಂದಾವರೆ ಅಂದರೆ ಅಂದದ ತಾವರೆ, ಮುಂದಾದರೆ ಅಂದರೆ ಮುಂದಿರುವ ತಾವರೆ ಎನ್ನಬಹುದೆ?

    1. ಧನ್ಯವಾದಗಳು. ಪದ್ಯ ಆಸ್ವಾದಿಸಲು ಅನುಕೂಲವಾಗುವಂತೆ, ನೀವೆಂದಂತೆ ತೆಗೆದುಕೊಳ್ಳಲು ಅಡ್ದಿಯಿಲ್ಲ ಅನ್ನಿಸುತ್ತದೆ.

  4. ಅತ್ಯುತ್ತಮ ಲೇಖನ ಗಣೇಶ ಕೃಷ್ಣ..
    “ಹುಚ್ಚೆಳ್ಳು ಹೂನಂಗೆ” ಈ ಪದ್ಯ ಸರಿಯಾಗಿ ಗೊತ್ತಾಗಲಿಲ್ಲ. ಇದರಲ್ಲಿ ಸಮುದ್ರದ ವಾಚಕ ಪದ ಯಾವುದು?

    1. ತುಂಬಾ ಧನ್ಯವಾದಗಳು ಪವಮಾನರೇ. ಹೆಚ್ಚು = ಉಬ್ಬರ, ಉಕ್ಕು, ಉಕ್ಕಿ ಹರಿ (ಪೆರ್ಚು) ಇತ್ಯಾದಿ ಅರ್ಥಗಳಿವೆ. ಭಾವೋದ್ವೇಗವನ್ನು ತಿಳಿಸುವಲ್ಲಿ ನದಿಯೋ ಸಮುದ್ರವೋ ಉಕ್ಕಿಹರಿದಂತೆ ಎಂದಂತೆ ಅನ್ನಿಸುತ್ತದೆ. ಅದಕ್ಕಾಗಿ ವಾಚ್ಯಾರ್ಥದಡಿಯಲ್ಲಿ ‘ಕಡಲು’ ಕಂಸದಲ್ಲಿದೆ. ಧ್ವನಿಯನ್ನು ವಿವರಿಸುವಲ್ಲಿ ಉಪಯೋಗಿಸಿಕೊಂಡಿದ್ದೇನೆ.

  5. ಹಾಡಿಗೇ ಏನು ಅರ್ಥ ಎಂದು ನನ್ನತಮ್ಮ ಕರೆಮಾಡ್ದ ನೀವು ಬರೆದ ಈ ಲೇಖನವನ್ನ ಅವನಿಗೆ ಕಳುಹಿಸಿದ್ದೇನೆ ಧನ್ಯವಾದಗಳು ಸರ್ ಚೆಂದವಾಗಿ ವಿವರಿಸಿದ್ದೀರಿ

  6. ಈ ಜಾನಪದ ಗೀತೆಯನ್ನು ಅರ್ಥೈಸಿಕೊಂಡವರಿಗೆ ಮಾತ್ರ ಇದರ ತಾತ್ಪರ್ಯ ತಿಳಿಯಲಿದೆ,

    ಅರ್ಥವಾಗುವ ಹಾಗೆ ವಿವರಿಸಿದ ತಮಗೆ ಧನ್ಯವಾದಗಳು

  7. ಹಾಡು ತರಹ ನಿಮ್ಮ translation ಚೆನ್ನಾಗಿದೆ. ಧನ್ಯವಾದಗಳು.

  8. ನಾನು ಅರಿಜೋನ ಕನ್ನಡಿಗನಾಗಿದ್ದೂ, ನಿಮ್ಮ ಭೇಟಿಯ ಸದವಕಾಶ ಸಕ್ಕಿಲ್ಲ. ಖೇದವಿದೆ.
    ನಿಮ್ಮ ಸಂಶೋಧಾತ್ಮಕ,ಶ್ರಧ್ಧಾ- ಭಕ್ತಿ ಪೂರ್ಣ ಲೇಖನ ಓದುವಾಗ, ಕಂಠ ಗದ್ಗದಿತವಾಯಿತು. ಭಾವ- ಅಶ್ರು ಹರಿಯಿತು. ತುಮಬಾ ಸುಂದರ ಲೇಖನ.
    ಹಾರ್ದಿಕ ಅಭಿನಂದನೆ.
    ಅಭಿಮಾನಿ

    1. ತಮ್ಮ ಸಹೃದಯತಾಪೂರಿತ ಸಂದೇಶಕ್ಕೆ ಆಭಾರಿಯಾಗಿದ್ದೇನೆ
      -ಗಣೇಶಕೃಷ್ಣ

Leave a Reply

Your email address will not be published. Required fields are marked *