ಕರ್ಣಾಟಕ ಸಂಗೀತ ಕಲಿಯುತ್ತಿರುವ ಮಗುವಿನೊಂದಿಗೆ “ಶ್ರೀಇs ಗಣನಾಥ ಸಿಂದುರಾಅs ವರ್ಣ” ಎಂದು ಗುನುಗುನಿಸುತ್ತಾ1ನಾನು ಕಲಿತವನಲ್ಲ…ಎಲಾ! ಗಣೇಶನಿಗೇಕೆ ಕೆಂಬಣ್ಣ, ಇದು ಸಿಂಧುರ = ಆನೆಯಿರಬೇಕು ಅನ್ನಿಸಿತು. ಹಾಗಾದರೆ ವರ್ಣ? ಕರ್ಣಾಟಕ ಸಂಗೀತದಲ್ಲಿ ಬಹುಕೃಷಿ ಮಾಡಿದ ಸ್ನೇಹಿತ ನಿಂದ ಸಾಹಿತ್ಯವನ್ನು ಪರೀಕ್ಷಿಸಿ ಹೇಳಿಸಿದೆ2ಅವನಿಗಾದ ಪಾಠವೂ ಸಿಂಧುರ ಆಗಿತ್ತು ಎಂದು ನೆನಪು. (ಟಿಪ್ಪಣಿಗಳಿಗೆ ಸಂಖ್ಯೆಗಳನ್ನು ಕ್ಲಿಕ್ಕಿಸಿ)
ಲಂಬೋದರ ಲಕುಮಿಕರ
ಅಂಬಾಸುತ ಅಮರ ವಿನುತ
ಶ್ರೀ ಗಣನಾಥ ಸಿಂಧುರ ವರ್ಣ
ಕರುಣ ಸಾಗರ ಕರಿವದನ |ಲಂ|
ಸಿದ್ಧ ಚಾರಣ ಗಣ ಸೇವಿತ
ಸಿದ್ಧಿ ವಿನಾಯಕ ತೇ ನಮೋ ನಮೋ |ಲಂ|
ಸಕಲವಿದ್ಯಾ ಆದಿ ಪೂಜಿತ
ಸರ್ವೋತ್ತಮ ತೇ ನಮೋ ನಮೋ |ಲಂ|
ಅಂತರ್ಜಾಲದಲ್ಲಿ 214 ಕಡೆ “ಸಿಂಧೂರ ವರ್ಣ” ಕಂಡು ಬಂತು, 28 ಕಡೆ “ಸಿಂಧುರ ವರ್ಣ” ಎಂದಿತ್ತು. ಎಲ್ಲಿಯೂ “ಕೆಂಪು ಬಣ್ಣ”ಕ್ಕೆ ಸರಿಯಾದ ಪದ ಪ್ರಯೋಗವಾದ “ಸಿಂದೂರ ವರ್ಣ” ಕಾಣಿಸಲಿಲ್ಲ. ಮಹಾಪ್ರಾಣ ದೀರ್ಘ ಧೂ ಇರುವ ಸಿಂಧೂರ ಶಬ್ದ ತಪ್ಪು, ಅದು ಸಿಂದೂರ ಶಬ್ದದ ಅಪಪ್ರಯೋಗ 3ಈಗಿನ ಕನ್ನಡದಲ್ಲಿ ನುಸುಳಿಬಿಟ್ಟಿದೆ, ಸಾಹಿತ್ಯ ಪರಿಶತ್ತಿನ ಕನ್ನಡ ನಿಘಂಟಿನಲ್ಲೂ “ಸಿಂದೂ(ಧೂ)ರ” ಎಂದು ಕಂಸದಲ್ಲಿ ಮಹಾಪ್ರಾಣ ಕೊಟ್ಟಿದ್ದಾರೆ, ಆದರೆ ಈ ಗೀತೆಯ ರಚನಾ ಕಾಲದಲ್ಲಿ ಇರಲಿಲ್ಲ ಎಂದು ಧೈರ್ಯವಾಗಿ ಹೇಳಬಹುದು. ಲಕುಮಿ ಶಬ್ದ ಬಿಟ್ಟರೆ ಉಳಿದಂತೆ ಗೀತೆ ಸಂಸ್ಕೃತದಲ್ಲೇ ಇದೆ. ಸಿಂದೂರ ಎಂದೇ ಸರಿಪಡಿಸಿಕೊಳ್ಳೋಣ ಈ ಪ್ರಯೋಗವನ್ನು. ಈ ಪಿಳ್ಳಾರಿ ಗೀತೆಯನ್ನು ಹಾಡುವಾಗ ಸಿಂಧುರs ವರ್ಣ 4ಅಥವಾ ಸಿಂಧೂsರ ಎಂದು ಹಾಡುವುದೂ ಕಾಣಸಿಗುತ್ತದೆ. ಇದು ಸಿಂದೂರ ಶಬ್ದವನ್ನುಚ್ಚರಿಸಲು ಮಾಡಿಕೊಂಡ ಮಾರ್ಪಾಟೆ, ಅಲ್ಲ ಹೀಗೆಯೇ ಪ್ರಯೋಗವಿತ್ತೆ? ತಿಳಿಯದು, ಎರಡೂ ವಿಡಿಯೋಗಳನ್ನು ಕೊನೆಯಲ್ಲಿ embed ಮಾಡಿದ್ದೇನೆಎಂದು ಎಳೆದು ತಾಳಕ್ಕೆ ತರಬೇಕಾದುದರಿಂದ, ನಮಗೆ ಹಾಡಿನಲ್ಲಿ ಸ್ಪಷ್ಟೀಕರಣ ಸಿಕ್ಕುವುದಿಲ್ಲ. ಸಿಂದೂರs ಎಂದು ಹಾಡಿದರೆ, (2+ನೇ ಕಾಲದಲ್ಲಿ) ದೂ ವನ್ನು ಸ್ವಲ್ಪ ಕತ್ತರಿಸಬೇಕಾಗುತ್ತದೆ. ಸಿಂಧುರs ಎಂದು ಹಾಡಿದರೆ ಈ ತೊಡಕಿಲ್ಲ. ಆದರೆ ಸಂಗೀತ ನಮಗೆ ಹೆಚ್ಚು ಪ್ರಯೋಜನಕಾರಿ ಮಾರ್ಗವಲ್ಲ, ಸಾಹಿತ್ಯವನ್ನು ಹಾಡಿನ ಗತಿಗೆ ಒಗ್ಗಿಸುವುದು ಬಗ್ಗಿಸುವುದು ಸಾಮಾನ್ಯ.
ಈಗ ನಮಗೆ ಎರಡು ಪ್ರಯೋಗಗಳು ಸಿಕ್ಕಂತಾದುವು
1. ಸಿಂದೂರ = ಕೆಂಪು ಚೂರ್ಣ(ಕುಂಕುಮ?), ಚಂದ್ರ, ಒಂದು ಜಾತಿಯ ಮರ
2. ಸಿಂಧುರ = ಆನೆ (ಸಿಂಧುಂ ಮದೋದಕಂ ರಾತಿ ಕಃ?)
ವರ್ಣ = ಬಣ್ಣ, ರೂಪ/ಆಕಾರ (ಜಾತಿಯ5 caste ಅಲ್ಲ, type, variety, ರೀತಿಯ, ತರಹೆಯ); ಆನೆಯ ಮೇಲೆ ಹಾಸುವ ರತ್ನಗಂಬಳಿ!
- ಸಿಂದೂರ ವರ್ಣ = ಕೆಂಪು ಬಣ್ಣ; ಚಂದ್ರ(ನ) ಬಣ್ಣ ಎಂಬ ಅರ್ಥಗಳು ಕಾಣಿಸುತ್ತವೆ. (ಕೆಂಪು ಆಕಾರ/ರೂಪ ಎಂಬ ಅರ್ಥ ಅಸಾಧು). 6ಕೆಂಪು ರತ್ನಕಂಬಳಿ ಹೊದೆದವ (ಆನೆಯಾದುದರಿಂದ) ಎಂಬ ಅಸಾಧಾರಣ ಅರ್ಥವೂ ಬರುತ್ತದೆ. ಚಮತ್ಕಾರಿಕವಾಗಿದೆಯೆಂಬುದು ಬಿಟ್ಟರೆ, ಈ ರತ್ನಗಂಬಳಿ ಹೆಚ್ಚು ಪ್ರಯೋಜನದ್ದಲ್ಲ, ಅದರ ಹಿಂದೆ ಹೋಗುವುದು ಬೇಡ
- ಸಿಂಧುರ ವರ್ಣ = ಆನೆಯ ರೂಪ; ಆನೆಯ ಬಣ್ಣ. ಆನೆಯೆಂದಮೇಲೆ ಆನೆಯ ಬಣ್ಣವೆನ್ನುವುದರಲ್ಲಿ ಹೆಚ್ಚಿಗೆಯೇನಿಲ್ಲ. ಆನೆಯ ರೂಪ, ಆಕಾರ ಎಂಬರ್ಥ ಅನ್ವಯಿಸುತ್ತದೆ.
ಯಾವುದು ಸರಿ?
ಗಣಪತಿಯನ್ನು ಕೆಂಪುಬಣ್ಣದವ ಎಂದು ಬಿಟ್ಟಿದ್ದಾರಲ್ಲ, ಇದನ್ನು ಆನೆಯ ಆಕಾರದವನೇ ಎಂದು ಬದಲಾಯಿಸಿಕೊಳ್ಳೋಣ, ಸರಿಹೋಯಿತಲ್ಲವೇ?
ಒಂದು ನಿಮಿಷ… ಮುಂದಿನ ಸಾಲಿನಲ್ಲಿಯೇ “ಕರಿ ವದನ” ಎಂದಿದೆ, ಆನೆಯ ಆಕಾರ, ಆನೆಯ ಮುಖ, ಪುನರುಕ್ತಿಯಾಗಲಿಲ್ಲವೇ? ಕೆಂಬಣ್ಣದ ಮಾತಿನಲ್ಲಿ ಹೊಸತನವಾದರೂ ಇದೆ.
ಇನ್ನು ಮಿತ್ರರೊಬ್ಬರು ಸಂಪೂರ್ಣ ಕುಂಕುಮದಲ್ಲಿ ಮುಳುಗಿದಂತಿದ್ದ ಸಿಂದೂರ ಬಣ್ಣದಲ್ಲಿ ಅಲಂಕರಿಸಿದ ಗಣೇಶನ ವಿಗ್ರಹದ ಚಿತ್ರಕಳುಹಿಸಿದರು7 ವರ್ಣ = ಕೆಂಪು ರತ್ನಗಂಬಳಿಯನ್ನೂ ಕಾಣಬಹುದು. ಕೆಂಪು ಗಣೇಶ ಮೂರ್ತಿಗಳು ಸಾಮಾನ್ಯವಾಗಿ ಕಾಣಿಸುವವೇ.
ಕುಂಕುಮ ಲೇಪಿತ ಮೂರ್ತಿ ಶಿವನದ್ದೂ ದೇವಿಯದ್ದೂ 8ಬಂಧೂಕಕುಸುಮಚ್ಛಾಯಾಂ ಸಿಂದೂರಾರುಣ ವಿಗ್ರಹಾಂ ।
ರಕ್ತಾವಸ್ತ್ರಾವೃತಾಂ ದೇವೀಂ ಸರ್ವಾಭರಣಭೂಷಿತಾಂ ॥
ಸಿಂದೂರಾರುಣ ವಿಗ್ರಹಾಂ = ಮುಂಜಾನೆಯ ಕೆಂಪಿನ ವಿಗ್ರಹದವಳೇ
ಎಂಬ ದೇವಿಯ ಸ್ತುತಿಕೂಡಾ ಕಾಣುತ್ತೇವೆ, ಗಣಪತಿಯೊಬ್ಬನಿಗೆ ಕೆಂಪು ವಿಶೇಷವೇ? ಈ ಗೀತೆಯನ್ನು ಬರೆಯುವಾಗ ಪುರಂದರದಾಸರ ಮುಂದಿದ್ದ ಮೂರ್ತಿ ಕುಂಕುಮ ಲೇಪಿತವಾಗಿದ್ದಿರಬಹುದೇ? ಇಲ್ಲಿಯೂ ಸ್ವಾರಸ್ಯವಿದೆ.
ಯೋಗಪಟುಗಳಾದ ಮಿತ್ರರೊಬ್ಬರು ಮೂಲಾಧಾರ ಚಕ್ರದ ಬಣ್ಣ ಕೆಂಪು, ಗಣಪತಿ ಅದರ ದೇವತೆಯೆಂದು ಸೂಚಿಸಿದರು. “ವಾತಾಪಿಗಣಪತಿಂ ಭಜೇ …. ಮೂಲಾಧಾರ ಕ್ಷೇತ್ರ ಸ್ಥಿತಂ….” ಎಂಬ ಕೀರ್ತನೆ ನೆನಪಿಗೆ ಬರುತ್ತದೆ. ಈ ಕೆಳಗೆ ಶ್ರೀ ಬನ್ನಂಜೆ ಗೋವಿಂದಾಚಾರ್ಯರು ಗಣಪತಿಗೂ, ಕೆಂಪಿಗೂ, ಮೂಲಾಧಾರಕ್ಕೂ ಇರುವ ನಂಟನ್ನು ವಿವರಿಸಿದ್ದಾರೆ (ಪ್ರೌಢ ವಸ್ತು), 5 ನಿಮಿಷ ಕೇಳಿ.
ನಿರ್ಣಯ
ವಸ್ತುತಃ ಯಾವುದು ಸರಿಯೆಂಬ ಪ್ರಶ್ನೆಯೇ ಸರಿಯಲ್ಲ ಅನ್ನಿಸುತ್ತದೆ. ಇವೆರಡೂ ಪ್ರಯೋಗಗಳೂ ಗಣಪತಿಯ ಕುರಿತು ಸಾರ್ಥಕವಾಗಿರುವ ಕಾರಣ ಎರಡೂ ರೀತಿಯಲ್ಲಿ ಓದಿಕೊಳ್ಳಬಹುದಲ್ಲ. ಹಾಡುವ ಪರಂಪರೆಯಲ್ಲೂ ಎರಡೂ ಪ್ರಯೋಗಗಳಿವೆ. ಗೀತೆ ರಚಿಸಿದವರೂ ಹೀಗೆಯೆ ಶ್ಲೇಷೆ 9 ಒಂದೇ ಪದಕ್ಕೆ ಬೇರೇ ಬೇರೇ ಆರ್ಥ ಬರುವಂತೆ ಪ್ರಯೋಗಿಸುವ ಅಲಂಕಾರಮಾಡಿರಬೇಕು. ಹಾಡುವಾಗ ಬರುವ ಸಹಜ ಬದಲಾವಣೆಯಲ್ಲಿ ಅನೇಕ ಅರ್ಥಗಳನ್ನು ಅಡಕ ಮಾಡಿರಬೇಕು10ಜಾನಪದ ಗೀತೆಗಳಲ್ಲಿ, ಬೇಂದ್ರೆಯವರ ಕವನಗಳಲ್ಲಿ ಇದು ಸರ್ವೇ ಸಾಮಾನ್ಯ. auditory clues ಕೂಡ, ಇಲ್ಲದ ಶಬ್ದಗಳು ಇದ್ದಂತೆ ಕೇಳುವುದು…. ಮಾಡಿರದಿದ್ದರೂ ತೊಂದರೆಯಿಲ್ಲ. ಬರೆದವರ ಇಂಗಿತ ಮುಖ್ಯವೇ ಆದರೂ, ಓದುಗರೊಳಗಿನ ಸ್ಫುರಣೆಗಳೂ ಮುಖ್ಯ.
ಉಳಿದ ಸ್ವಾರಸ್ಯಗಳು
- ಈ ಗೀತೆಯಲ್ಲಿ ಒಂದು ಪದ ಮಾತ್ರ ಕನ್ನಡದಲ್ಲಿದೆ. ಲಕುಮಿ ಕರ = ಲಕ್ಷ್ಮಿ- ಕರ ಮಾತ್ರ ಕನ್ನಡ11ಲಕುಟಕರ ಎಂದು ಪಾಶ ಅಂಕುಶ ದಂತಗಳೊಂದಿಗೆ ಗದೆಯನ್ನು ಹಿಡಿಸಿದರೆ ಸಂಪೂರ್ಣ ಸಂಸ್ಕೃತವಾಯಿತು. ಇದನ್ನು ಸಂಸ್ಕೃತ ಪದದೊಂದಿಗೆ ಸಮಾಸ ಮಾಡಿಬಿಡಲಾಗಿದೆ!
- “ಸಿದ್ಧ ಚಾರಣ ಗಣ ಸೇವಿತ” ಇದು ಸಿದ್ಧಚಾರಣಗಣಸೇವಿತ ಒಂದೇ ಸಮಸ್ತಪದ! ಸಿದ್ಧರಾದ ಚಾರಣ(= ದೇವಗಾಯಕ/ಗಂಧರ್ವ) ಗಣದಿಂದ(ಗುಂಪು) ಸೇವೆಮಾಡಿಸಿಕೊಳ್ಳುವವನು ಎಂದು ಅಥವಾ ಸಿದ್ಧರಿಂದ, ಚಾರಣರಿಂದ, (ಶಿವ)ಗಣಗಳಿಂದ ಸೇವಿತ ಎಂದು ಅರ್ಥ ಅಥವಾ ಸಿದ್ಧರಗಣ ಮತ್ತು ಚಾರಣರಗಣ ಗಳಿಂದ ಸೇವಿತ ಎಂದರೆ ಇನ್ನೂ ಸಮರ್ಪಕ.
- “ಸಕಲವಿದ್ಯಾ ಆದಿ ಪೂಜಿತ” = ಸಕಲವಿದ್ಯಾssದಿಪೂಜಿತ ಇದ್ದಿರಬೇಕು, ಪದ್ಯದಲ್ಲಿ ಸಂಧಿ ಮಾಡಬಹುದಾದಲ್ಲಿ ಮಾಡಲೇಬೇಕಾಗಿರುವುದರಿಂದ, ಅಂತೆಯೇ “ಅಂಬಾಸುತಾsಮರ ವಿನುತ” ಆಗುತ್ತದೆ. ಇವೆರಡೂ ಸರಿಕಾಣುತ್ತಿಲ್ಲ. ಗಣಪನ ಪ್ರತೀ ಸಂಬೋಧನೆಯನ್ನೂ ಅದರದ್ದೇ ಪಾದದಲ್ಲಿದೆ ಎಂದು ಪರಿಗಣಿಸಿಬಹುದು, ಪಾದಗಳ ಮಧ್ಯೆ ಸಂಧಿ ಐಚ್ಛಿಕವಾದ್ದರಿಂದ. ಪ್ರತೀ ಪಾದವೂ ರೂಪಕ ತಾಳದ ಒಂದು ಆವರ್ತಕ್ಕೆ ಸರಿಯಾಗಿದೆ.
... ಅಂಬಾಸುತ ಅಮರ ವಿನುತ ... ಸಕಲವಿದ್ಯ ಆದಿಪೂಜಿತ ...
ಏನೇ ಇರಲಿ; ಈ ಡುಕೃಞ್ಕರಣ ಬದಿಯಲ್ಲಿರಿಸುತ್ತಾ, ಸಿಂಧುರವದನ ಸಿಂದೂರವರ್ಣ ನಮಗೆ ಮಂಗಳವನ್ನುಂಟುಮಾಡಲಿ ಎಂದು ಪ್ರಾರ್ಥಿಸುವ.
I tweet @ganeshkrishna. ನಿಮ್ಮ ಅನಿಸಿಕೆ, ತಿದ್ದುಪಡಿಗಳನ್ನು ಕೆಳಗೆ ಹಂಚಿಕೋಳ್ಳಿ 12 comments are moderated to block spam bots. may take a while to appear on page
ಮಾನ್ಯರೇ,
ಗಣಪತಿಗೂ ಕೆಂಪು ಬಣ್ಣಕ್ಕೂ ಇರುವ ಸಂಬಂಧದ ಬಗೆಗಿನ ನಿಮ್ಮ ಚರ್ಚೆಗೆ ಗಣಪತ್ಯಥರ್ವಶೀರ್ಷೋಪನಿಷತ್ತಿನ ಈ ವೈದಿಕಶ್ಲೋಕ ವಿಷಯವೊದದಗಿಸಬಲ್ಲದು.
“ರಕ್ತಂ ಲಂಬೋದರಂ ಶೂರ್ಪಕರ್ಣಕಂ ರಕ್ತವಾಸಸಂ!
ರಕ್ತಗಂಧಾನುಲಿಪ್ತಾಂಗಂ ರಕ್ತಪುಷ್ಪೈಃ
ಸುಪೂಜಿತಮ್!!
ಈ ರಕ್ತ ಶಬ್ದವು ಬಣ್ಣದ ಸಂಕೇತವಷ್ಟೇ.🙏🚩
ನಮಸ್ತೇ, ತಮ್ಮ ಟಿಪ್ಪಣಿಯಿಂದ ಮೂಲಾಧಾರಾಕ್ಷೇತ್ರಸ್ಥಿತನಾಗಿ ರಕ್ತವರ್ಣನಾದವನು ಎಂಬುದು ಪುಷ್ಟೀಕರಿಸಿದಂತಾಯಿತು. ಧನ್ಯವಾದಗಳು.