ರಾತ್ರಿ ಎಂಟು ಗಂಟೆಯ ಸುಗಮ ಬಸ್ ನಿಧಾನಕ್ಕೆ ಬೆಂಗಳೂರಿನ ಎಲ್ಲ ದಾರಿ ಮೂಸಿಕೊಂಡು, ಪೇಟೆ ಬಿಟ್ಟು ಮಂಗಳೂರಿನ ಕಡೆಗಿರುವ ಹೆದ್ದಾರಿಗೆ ಸೇರುವಾಗ ಹತ್ತೂವರೆ ಆಗಿಯೇ ಆಗುತ್ತಿತ್ತು. ಬೆಳಗ್ಗಿನ ಮೈಂದು ಬೀಳುವ ಸಮಯಕ್ಕೆ ಸರಿಯಾಗಿ ಮಂಗಳೂರಿನ ಪಂಪವೆಲ್ ತಲುಪಿ ಇಳಿಯುವಾಗ, ಘಟ್ಟದ ತಿರುವುಗಳಲ್ಲಿ ಅಲುಗಾಡಿದ ಜೀವ ಒಮ್ಮೆಲೇ ಮೈಯೊಳಗೆ ಬಂದುಬಿಡುವುದು. ಗಡಿಬಿಡಿಯಲ್ಲಿ ಭಾರದ ಬ್ಯಾಗನ್ನು ಬೆನ್ನಿಗಿಡಲು ಪುರುಸೊತ್ತಿಲ್ಲದೆ ಬಸ್ಸಿನಿಂದ ಕೆಳಗಿಳಿಯುವ ಆತುರದಲ್ಲಿ, ಬ್ಯಾಗ್ ಇಳಿಸಿಕೊಡುತ್ತೇನೆನ್ನುವ ಬಸ್ನವರಿಗೆ ಖುಷಿಯಲ್ಲೇ ಬೇಡ ಎನ್ನುತ್ತಾ ಬಸ್ಸಿಳಿದು ಮಂಗಳೂರಿನ ಬಿಸಿ ಬಿಸಿಗೆ ಮುಖವೊಡ್ಡಿದಾಗ ಆಗುವ ಹಿತ, ರುಚಿಯಾದ ಖಾರದ ಚಟ್ನಿಯೊಟ್ಟಿಗೆ ಕಾಪಿ ಕುಡಿದ ಹಾಗಿಯೇ ಅನಿಸುತ್ತದೆ.
ಆಗೋ ಬಂತು, ಕೇರಳ ಸ್ಟೇಟ್ ಬಸ್, ಸ್ಟೇಟ್ ಬಸ್ ಎಂದೇ ಅಡ್ಡ ಹೆಸರಿನ ಕಾಸರಗೋಡು ಬಸ್. ಯಾರೋ ಒಬ್ಬರು ಹೇಳಿದ ಹಾಗೆ ಮಂಗಳೂರು ನಿಲ್ದಾಣದಲ್ಲಿ ಘಂಟೆ ಢಣ್ ಎಂದ ಕೂಡಲೇ ಬಿಟ್ಟರೆ, ಕಾಸರಗೋಡು ನಿಲ್ದಾಣದಲ್ಲಿ ಘಂಟೆ ಹೊಡೆಯುವ ಹೊತ್ತಿಗೆ ತಲುಪುವ ಶಿಸ್ತಿನ ಸವಾರಿದಾರ. ಎರಡು ದಳಿಗಳ ಕಿಟಿಕಿಗೆ ಗಾಜಿನ ಗೋಜಿಲ್ಲ, ಹೆದ್ದಾರಿಯಲ್ಲಿ ರಭಸದಲ್ಲಿ ಸಾಗುವಾಗ ಗಾಳಿ ಬೀಸಿ ಬೀಸಿ ರಾಟೆ ತೊಟ್ಟಿಲಲ್ಲಿ ತೂಗಾಡಿದ ಅನುಭವ ನಮಗೆಲ್ಲ. ಖಾಲಿ ಬಸ್ ಆದರೂ ಬಲಬದಿಯಲ್ಲಿರುವ ಹೆಂಗಸರಿಗೆಂದೇ ಮೀಸಲಾದ ಸೀಟಿನಲ್ಲಿ ಕುಳಿತು ರಸ್ತೆ ಬದಿಯ ಚಂದ ನೋಡುವುದು, ಅದರ ಮಧ್ಯೆ ಕಂಡಕ್ಟರ್ ಕೈಯಿಂದ ಬಣ್ಣ ಬಣ್ಣದ ₹5,₹10 ರಂತೆ ಎರಡು ಮೂರು ಟಿಕೆಟ್ ತೆಕ್ಕೊಂಡರೆ ಮತ್ತೆಂತ ತಲೆಬಿಸಿಯಿಲ್ಲ. ದಾರಿ ಶುರುವಾಗುವುದೇ ತಡ, ಕಣ್ಣುಗಳನ್ನೇ ಕ್ಯಾಮರಾ ಮಾಡಿಕೊಂಡು ಕಾಯುವುದು, ನೇತ್ರಾವತಿಯ ಉದ್ದದ ಸೇತುವೆ ಮೇಲೆ ಬಸ್ ಹಾದು ಹೋಗುವಾಗ ಕಾಣುವ ಆ ಸಮುದ್ರ, ನದಿ, ಹಸಿರು, ಎಷ್ಟು ಚೆಂದ!! ಮುಖದ ಮೇಲಾಗಿ ಹಾಯ್ದು ಹೋಗುವ ಬೆಳಗ್ಗಿನ ಗಾಳಿ. ಬೆಂಗಳೂರಿನಿಂದ ಬಂದಿಳಿದಾಗ ಅದು ಶೀತಲವಲ್ಲ, ಬೆಚ್ಚಗಿನ ಜೀವತುಂಬಿದ ಸ್ಪರ್ಶ.
ನದಿಯು ತಾನಾಗಿಯೇ ಹರಿದು ಬಂದು ಸಮುದ್ರ ಸೇರುವ ಈ ಸ್ಥಳ, ಅದೆಷ್ಟು ಸೌಂದರ್ಯವಿದ್ದರೂ ನದಿಯನ್ನು ಸಂಕದ ಮೇಲಿಂದ ಒಮ್ಮೆ ನೋಡಿದರೆ ಭಯ ಹುಟ್ಟಿಸುವುದು. ಇಂಥಹ ಜಾಗದಲ್ಲಿ ನಿಂತು ದೈವೀಕವಾದ ನೇತ್ರಾವತಿಗೆ ಧುಮುಕಲು ಸಿದ್ಧಾರ್ಥರನ್ನು ಪ್ರೇರೇಪಿದ ಮನಸ್ಸಿನೊಳಗಿನ ಭಾವನೆಯನ್ನು ಊಹಿಸಿದರೆ ನಿಟ್ಟಿಸುರೊಂದು ತಾನಾಗಿಯೇ ಬಂದು ಬಿಡುತ್ತದೆ. ಹೆದ್ದಾರಿಗಳ ಉದ್ದಕ್ಕೂ ಒಂದಿಷ್ಟು ಹೊತ್ತು ದಣಿವಾರಿಸಿಕೊಳ್ಳಲು ಸಹಾಯ ಮಾಡುತ್ತಿದ್ದ ಸಿಸಿಡಿಯಂತಹ ಉತ್ತಮ ಗುಣಮಟ್ಟದ ಸೇವೆಯನ್ನು ಕಲ್ಪಿಸಿದ ಅವರಿಗೆ ಬದುಕಿನ ದಾರಿಯ ಮಧ್ಯೆ ಸುಧಾರಿಸಿಕೊಳ್ಳಲು ಸಾಧ್ಯವಾಗದೇ ಹೋಯಿತೆ! ಒಮ್ಮೆ ರಾತ್ರೆ ಹತ್ತು ಗಂಟೆ ಸುಮಾರಿಗೆ ಬೆಂಗಳೂರು ತಲುಪಿದಾಗ ಅಲ್ಲಿದ್ದ ಸಿಸಿಡಿಗೆ ಹೋದಾಗ ಅಲ್ಲಿ ಎಂಜಿನೀರಿಂಗ್ ಓದುತ್ತಿದ್ದ ಹುಡುಗರು ಸಂಜೆಯ ಪಾಳಿ ಕೆಲಸ ಮಾಡುತ್ತಿದ್ದರು. ಅವರು ಚಿಕ್ಕಮಗಳೂರು ಕಡೆಯ ಹುಡುಗರು, ಅಲ್ಲಿ ದುಡಿದು ಬಂದದ್ದರಲ್ಲಿ ಪ್ರತಿಷ್ಠಿತ ಕಾಲೇಜಿನ ಶುಲ್ಕ, ವಸತಿಗೆ ಉಪಯೋಗಿಸುತ್ತಿದ್ದರು. ಅಷ್ಟೊಂದು ಚಿಕ್ಕ ವಯಸ್ಸಿನಲ್ಲಿ ಸ್ವಂತ ಬಲದಲ್ಲಿ ಕಲಿಯುತ್ತಿದ್ದರು. ಅವರ ಮೇಲೆ ವಿಶ್ವಾಸವಿಟ್ಟು, ಅವರಿಗೆ ಉದ್ಯೋಗಾವಕಾಶ ಒದಗಿಸಿದ ಪುಣ್ಯ ಸಿದ್ಧಾರ್ಥರಿಗೆ ಸೇರುತ್ತದೆ ಅಲ್ಲವೆ..
ಸಿದ್ಧಾರ್ಥರ ಸಾಧನೆ, ಸಹಾಯದ ಬಗ್ಗೆ ಇಷ್ಟರ ವರೆಗೆ ಎಲ್ಲಿಯೂ ಓದಿರಲಿಲ್ಲ, ನೋಡಿರಲಿಲ್ಲ. ಪ್ರಚಾರ, ಹೊಗಳಿಕೆ ಬಗ್ಗೆ ಅವರಿಗೆ ಒಲವಿರಲಿಲ್ಲ ಎಂದು ಕೇಳಿದ್ದೆ. ಇಂದು ಅವರ ಬಗ್ಗೆ ಬರೆದದ್ದನ್ನು ಓದುವಾಗ ಹೆಮ್ಮೆಯೆನಿಸುತ್ತದೆ. ಸಂಜೆಯ ಸಮಯದಲ್ಲಿ ನೇತ್ರಾವತಿಯ ಸೇತುವೆಯ ಮೇಲಿಂದ ಕಾಣುವ ಕಡಲು ಫಳಫಳ ಸುಂದರ. ಇನ್ನೊಮ್ಮೆ ನೇತ್ರಾವತಿ ಸೇತುವೆ ಮೇಲೆ ಹಾದು ಹೋಗುವಾಗ ಸಿದ್ಧಾರ್ಥರ ಶ್ರಮ ಸಾಧನೆಗಳು, ಸಹಾಯಗಳು ನಮ್ಮ ನೆನಪಿಗೆ ಬರಲಿ, ಬೆಳಗಿನ ಬಿಸಿಲು ಕಿಟಿಕಿಯಿಂದಾಗಿ ನಮ್ಮ ಮೇಲೆ ಬಿದ್ದಂತೆ, ಅವೆಲ್ಲವೂ ನಮ್ಮ ಪಯಣದ ಮೇಲೂ ಪ್ರಭಾವ ಬೀರಲಿ. ನಮಸ್ಕಾರ.
– ಶ್ವೇತಾ ಕಕ್ವೆ, ಜುಲೈ 31, 2019
This work is licensed under a Creative Commons Attribution-NonCommercial-NoDerivatives 4.0 International License.