ವಿದ್ಯಾಭೂಷಣರ ಜೀವನ ಕಥನ
ಈ ಸಲ ಊರಿಗೆ ಹೋಗಿ ಬರುವಾಗ ಪುತ್ತೂರಿನ ಒಂದು ಪುಟ್ಟ ಪುಸ್ತಕದಂಗಡಿಯಿಂದ ಒಂದೆರಡು ಕನ್ನಡ ಪುಸ್ತಕಗಳನ್ನು ಕೊಂಡು ತಂದಿದ್ದೆ. ಪ್ಲಾಸ್ಟಿಕ್ ಇಲ್ಲದೆ ಪತ್ರಿಕೆಯ ಒಂದು ಹಾಳೆಯಲ್ಲಿ ಆ ಪುಸ್ತಕಗಳನ್ನು ಇಟ್ಟು ಚೆಂದಕೆ ಕಟ್ಟಿ ಕೊಟ್ಟಿದ್ದರು ಅಂಗಡಿಯವರು. ಪ್ರಯಾಣ ಮುಗಿಸಿ ಮನೆಗೆ ಬಂದು ಪುಸ್ತಕಗಳನ್ನು ಕಟ್ಟ ಬಿಡಿಸಿ ಜೋಡಿಸಿಕೊಂಡ ಮೇಲೆ, ಕನ್ನಡ ಪತ್ರಿಕೆಯ ಆ ಹಾಳೆಯನ್ನೆತ್ತಿಕೊಂಡೆ. ಚಿಕ್ಕಂದಿನಿಂದಲೇ ಸಕ್ಕರೆ ಮಿಠಾಯಿ ಕಟ್ಟಿಕೊಟ್ಟ ಪತ್ರಿಕೆಯ ಪೊಟ್ಟಣ ಎಷ್ಟು ಪುಟ್ಟದಿದ್ದರೂ ಅದನ್ನು ಇಷ್ಟ ಪಟ್ಟು ಓದುತ್ತಿದ್ದೆ, ಅದರಲ್ಲಿ ಕೀತಾಗಿ ಹೋದ ವಿಷಯಗಳು, ಉಳಿದ ವಿಷಯಗಳು, ಅರ್ಥವಾಗದ್ದು ಬಹಳಷ್ಟು, ಆದರೂ ಅದನ್ನು ಓದದೇ ಬಿಡುವುದು ಕಷ್ಟವೆ ಅಂದೆಲ್ಲ.
ನನ್ನ ಅದೃಷ್ಟಕ್ಕೆ ಕೈಗೆ ಸಿಕ್ಕಿದ ಆ ತುಣುಕು ಒಂದು ಪ್ರತಿಷ್ಠಿತ ಕನ್ನಡ ಪತ್ರಿಕೆಯ ಸಾಹಿತ್ಯ ಸಂಪುಟದ್ದು. ಅದರಲ್ಲಿ ವಿದ್ಯಾಭೂಷಣರ ಚಿತ್ರವಿದ್ದ ಒಂದು ಚಿಕ್ಕ ಲೇಖನವಿತ್ತು. ವಿದ್ಯಾಭೂಷಣರ ‘ನೆನಪೇ ಸಂಗೀತ’ ಪುಸ್ತಕದ ಬಗೆಗಿನ ಲೇಖನವದು. ಅವರ ಕಂಚಿನ ಕಂಠವೂ, ಭಕ್ತಿಯೂ, ಸರಳತೆಯನ್ನೂ ನೋಡಿದ್ದರಿಂದ ಆ ಪುಸ್ತಕ ಓದಲು ಮನಸ್ಸಾಯಿತು. ಅಥವಾ ಅವರ್ಯಾಕೆ ಸನ್ಯಾಸ ಬಿಟ್ಟರು ಎಂದು ತಿಳಿದುಕೊಳ್ಳುವ ಕುತೂಹಲವೂ ಇರಬಹುದು.
ವಿದ್ಯಾಭೂಷಣರ ಜೀವನ ಕಥನ
ಸರಿಯಾಗಿ ನೆನಪಿಲ್ಲ, 8-9 ನೆ ತರಗತಿಲ್ಲಿದ್ದಾಗ ನೋಡಿದ ಒಂದು ಮಲಯಾಳಂ ಚಲನಚಿತ್ರ ಇನ್ನೂ ಮನಸ್ಸಿನ್ನಲ್ಲಿ ಅಚ್ಚೋತ್ತಿಕೊಂಡು, ಯತಿಗಳನ್ನು ನೋಡಿದಾಗಲೆಲ್ಲ ಮನಃಪಟಲದಲ್ಲಿ ಪುನಃ ಪುನಃ ಮೂಡಿ ಬರುವ ಅದರ ಕಥೆ ಕೂಡ ಪುಸ್ತಕವನ್ನು ಓದಲು ಪ್ರೇರಣೆಯೂ ಹೌದು.
ದೇಶಾಟನಂ(ದೇಶಾಡನಂ) https://en.wikipedia.org/wiki/Desadanam
https://youtu.be/HsQZZmzSW_w
ಇದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಲನಚಿತ್ರ, ಹಾಲುಗೆನ್ನೆ ಆರದ ಪುಟ್ಟ ಹುಡುಗನನ್ನು ಸನ್ಯಾಸ ಪಟ್ಟಕ್ಕೇರಿಸುವಂತಹ ಸೂಕ್ಷ್ಮ ವಿಷಯ, ಆ ಸಮಯದಲ್ಲಿ ಮಾತಾ ಪಿತರ ಮನಸ್ಥಿತಿ, ಅವರ ಒಪ್ಪಿಗೆ ಎಲ್ಲವೂ ಚಲನ ಚಿತ್ರದ ವಸ್ತುವೆ..
‘ನೆನಪೇ ಸಂಗೀತ’ದ ಪುಟಗಳನ್ನೋದಲು ಶುರುಮಾಡಿದೆ, ಮನಸ್ಸಿನಲ್ಲಿ ನಾನೇ ಓದಿಕೊಳ್ಳುತ್ತಿದ್ದರೂ ಹಿನ್ನಲೆಯಲ್ಲಿ ವಿದ್ಯಾಭೂಷಣರ ಧ್ವನಿಯಲ್ಲಿ ಅವರೇ ಓದಿ ಹೇಳುತ್ತಿದ್ದಂತೆ ಕೇಳುತ್ತಿತ್ತು. ಶುರುಶುರುವಿನ ಪುಟಗಳಲ್ಲಿ ಅವರೇನು ಹೇಳಲು ಕಷ್ಟ ಪಟ್ಟರೋ ಎಂದೆನಿಸಿದರೂ, ಎಷ್ಟೊಂದು ಪುಟಗಳಲ್ಲಿ ಅವರ ಮಾತುಗಳು, ಮುಗ್ಧತೆ, ಮನಸಿನ ದ್ವಂದ್ವ, ಕಷ್ಟ, ಸಾಧನೆ, ಭಕ್ತಿ, ಸಂಗೀತ ಎಲ್ಲವನ್ನೂ ಅತ್ಯಂತ ನೈಜವಾಗಿಯೂ ಸಹಜವಾಗಿಯೂ ಕಥಿಸಿದ್ದಾರೆ. ಹಲವು ದ್ವಂದ್ವಗಳ ಮಧ್ಯೆ ಸಿಲುಕಿ, ನಲುಗುವ ಮನಸ್ಥಿತಿ, ಅಲ್ಲಲ್ಲಿ ಗಂಟಲು ಕಟ್ಟಿಸುವಂತಹ ಜೀವನ ಸನ್ನಿವೇಶಗಳು ನನ್ನನ್ನು ಗದ್ಗದಿತವಾಗಿಯೇ, ‘ಕಣ್ಣ ನೀರ ಹನಿ’ ಹನಿಸಿಕೊಂಡು ಗೆರೆಗಳೆರಡು ತಾಗಿಕೊಂಡಂತೆ ಓದಿಸಿತು. ಮಲೆನಾಡಿನ ಸೊಗಡೂ, ಸೊಬಗೂ, ಕುಕ್ಕೆಯ ಸೌಂದರ್ಯವೂ, ಕಾರ್ಪಾಡೂ, ಉಡುಪಿಯ ಪರಂಪರೆಯೂ ಎಲ್ಲವೂ ತುಂಬಾ ಆಪ್ಯಾಯಮಾನವಾಗಿ ಬರವಣಿಗೆಯಲ್ಲೇ ತೋರಿಸದ್ದಾರೆ. ಅಲ್ಲಲ್ಲಿ ಬರುವ ದಾಸರ ಪದಗಳು, ಸಂಸ್ಕೃತದ ನುಡಿಗಳು, ಕನ್ನಡದ ಸೊಲ್ಮೆಗಳೂ; ಪಾಯಸದಲ್ಲಿ ಸಿಕ್ಕುವ ದ್ರಾಕ್ಷಿ!
ಸರಸ್ವತಿಯ ಪುತ್ರರು, ಜನಮಾನಸದ ಪ್ರೀತಿ ಪಾತ್ರರಾದ ವಿದ್ಯಾಭೂಷಣರ ಸ್ವರ, ಸಂಗೀತ ನಮ್ಮ ನೆನಪಲ್ಲಿ ಸದಾ ಇದ್ದುಕೊಂಡು, ಭಕ್ತಿಯನ್ನು ಬೆಳಗಿಸಲಿ.
- ಶ್ವೇತಾ ಕಕ್ವೆ
This work is licensed under a Creative Commons Attribution-NonCommercial-NoDerivatives 4.0 International License.
ಶ್ವೇತಾ, ಬಹಳ ಸೊಗಸಾಗಿ ನಿಮ್ಮ ಅನಿಸಿಕೆಯನ್ನ ವರ್ಣಿಸಿದ್ದೀಲ. 🙏
ಧನ್ಯವಾದಗಳು ಸೌಮ್ಯ 🙂