ಮೂರು ಹನಿ ಬಾಳು

ದೋಣಿಗ ಹುಟ್ಟಂಗ, ಗಾಲಿಗ ಕೀಲಂಗ
ಸಾಣಿಗ ಕಲ್ಲಿನ ಸೊಕ್ಕ !
ಕಾಣದ ಕಾಮನ ಬಿಲ್ಲಿಗ ಹೆದೆಯಂಗ
ಬಾಣಕ್ಕ ಇದ್ದ್ಹಂಗ ಪಕ್ಕ

ಬಿಚ್ಚಿದ್ರ ನೆರಳಾತು ನೆಚ್ಚಿದ್ದ ಸೆರಗಾತು
ಕೆಚ್ಚೆದಿಗೆ ಸರಿ ವೀರಗಚ್ಚಿ
ಕಚ್ಚಿದ್ದು ಕನಸಾತು, ಮುಚ್ಚಿದ್ದು ಮುನಿಸಾತು 
ಬಿಚ್ಚಿದ್ದು ಮನಸಾತು, ಹುಚ್ಚೇ!

ಮುಂದಕ್ಕ ಹರದಾಳ ಚಂದಕ್ಕ ಬರತಾಳ
ಹೊಂದಕ್ಕ ಯಲ್ಲವ್ನ ಕಾಲ
ಮಂದಿಯಾಗಿನ ಕುರಿ ದೊಂದಿಯಾಗಿನ ಉರಿ
ನಂದಕ್ಕ ಮೂರ್ಹನಿ ಬಾಳ.

ಕರುಬಿಟ್ಟ ಕೆಚ್ಚಲು, ಬತ್ತೈತಿ ಬಚ್ಚಲು
ಮರುಗಕ ಎಲ್ಲೈತಿ ತೇವ
ಮರದಂಗ ಇದ್ರಾತು ಬೇರೆ ಮರಿಯೋತಂಕ
ಹಾರ್ಯಾವ ಹೊಟ್ಟೆಯ ಜೀವ

ಗೆಳೆಯ ಕಳಿಸಿದ “ಚಿತ್ರಕ್ಕೆ ಪದ್ಯ”ದ ಸವಾಲು ಕೆಳಗಿನದು. ದೇವಸ್ತಾನದ ಕಟ್ಟೆಯಲ್ಲಿ ಕುಳಿತಿರುವ ವೃದ್ಧ ದಂಪತಿಗಳು.

ಕರಾವಳಿಯವನಾದರೂ ಚಿಕ್ಕಂದಿನಲ್ಲಿ ಆರು ವರ್ಷ ಹುಬ್ಬಳ್ಳಿಯಲ್ಲಿದ್ದುದನ್ನು ನೆನೆದು ಆ ಕಡೆಯಕನ್ನಡ ಸ್ವಲ್ಪ ಪ್ರಯೋಗಿಸಿ ಈ ಸಾಂಗತ್ಯವನ್ನು ಬರೆದೆ, ಚಿತ್ರವೇ ದಾಂಪತ್ಯದ ಸಾಂಗತ್ಯದ ಮೇಲಿರುವಾಗ….

ತಾತ್ಪರ್ಯ
ಹುಟ್ಟು, ದೋಣಿಗೆ ಮುಂದಕ್ಕೆ ಹೋಗಲು ಬಲವನ್ನೂ ದಿಕ್ಕನ್ನೂ ಕೊಡುತ್ತದೆ. ಗಾಡಿಯ ಚಕ್ರಕ್ಕೆ ಕೀಲು ಹಾಕದಿದ್ದರೆ ಬಿಚ್ಚಿ ಹೋಗುತ್ತದೆ ಕೈಕೇಯಿ ಕಿರುಬೆರಳನ್ನೇ ಕೀಲಾಗಿಸಿ ದಶರಥನ ರಥವು ದಿಕ್ಕಾಪಾಲಾಗುವುದನ್ನು ತಪ್ಪಿಸಿದಳಲ್ಲದೇ, ವರಗಳನ್ನೂ ಪಡೆದು ರಾಮಾಯಣಕ್ಕೇ ಕಾರಣಳಾದಳು. ಸತ್ಯಭಾಮೆ ಕೃಷ್ಣಿನಿಗೆ ನರಕಾಸುರ ಸಂಹಾರದಲ್ಲಿ ರಥಯುದ್ಧದ ಸಾಥಿಯಾದದ್ದೂ ಸ್ಮರಣೀಯ. ರಥದ ಗಾಲಿ ತಿರುಗಿ ದಾರಿಯನ್ನು ಸವೆಸಿದರೆ, ಸಾಣೇ ನಿಂತಲ್ಲೇ ತಿರುಗಿ ಉಕ್ಕನ್ನೇ ಸವೆಸುತ್ತದೆ. ಸಾಣೆಗೆ ತನ್ನ ಕಲ್ಲಿನ ಮೇಲೆ ಪ್ರೀತಿಯೂ ಹೆಮ್ಮೆಯೂ ಯಾಕಿರಬಾರದು? ಬಿಲ್ಲಿನ ಸೊಕ್ಕನ್ನು ಬಗ್ಗಿಸಿ ಹಿಡಿಯುವುದು ಅದರ ಹೆದೆ. ಹೆದೆಯಿಲ್ಲದೆ ಬಿಲ್ಲು ಅಪ್ರಯೋಜಕ. ಕಾಮನ ಬಿಲ್ಲಿನ ಹೆದೆಯಾವುದು? ಕಾಮವೂ ಕಾಣಿಸದು, ಹೆದೆಯೂ ಕಾಣಿಸದು, ಆದರೆ ಭೂಮಿಯೇ ಅಲ್ಲವೆ ಕಾಮನ ಬಿಲ್ಲಿನ ಎರಡು ತುದಿಗಳನ್ನು ಕಟ್ಟಿ ಹಿಡಿದಿರುವುದು? ಧರಣಿಯಂತಿರಬೇಕು, ಯೌವ್ವನದ ಸೊಕ್ಕನ್ನು, ಬಲವನ್ನು ಆಳಿಸಲು. ಬಿಲ್ಲಿನಿಂದ ಬಿಟ್ಟ ಬಾಣಕ್ಕೆ ಪುಕ್ಕವೇ ನೇರವಾದ ದಾರಿಯನ್ನು ಕೊಡುತ್ತದೆ. ಈ ಸಾಲನ್ನು “ಅಂಬಿಗ ಇದ್ದಂಗ ಪಕ್ಕ” ಎಂದು ಬರೆದಿದ್ದೆ, ಪ್ರಾಸಕ್ಕೋಸ್ಕರ “ಬಾಣಕ್ಕ” ಮಾಡಿದೆ. ಅಂಬು-ಇಗೆ ಕಟ್ಟಿದ ಗರಿಗಳೆಂದು ಒಂದು ಅರ್ಥವೂ, ಪಕ್ಕದಲ್ಲೇ “ದಾಟಿಸುವ ಅಂಬಿಗ” ಇದ್ದಂತೆ ಎಂದೂ ಅರ್ಥಗಳಾಗುತ್ತವೆ. ಏನೇ ಆಗಲಿ, ಈ ೪ ಸಾಲುಗಳಲ್ಲಿ ಯೌವ್ವನವನ್ನು ಬಿಂಬಿಸುವ, ನೆನಪಿಸುವ ಶಬ್ದಗಳು ಕಿವಿಗೆ ಬೀಳುತ್ತವೆ, ಹುಟ್ಟು, ಸೊಕ್ಕು, ಕಾಮ ಇತ್ಯಾದಿ.

ಬಿಚ್ಚಿ ಹರಡಿದರೆ ಚಪ್ಪರದ ನೆರಳು ಕೊಡಬಲ್ಲುದು, ಪ್ರೀತಿಯ ಅಪ್ಪುಗೆಯ ಮಧ್ಯದ ವಿಭಾಜಕವೂ ಆಗಬಲ್ಲುದಾದ ಸೀರೆ ಬದುಕನ್ನಿದಿರಿಸುವ ಕೆಚ್ಚಿರುವವರ ವೀರಗಚ್ಚೆಯೂ ಆಗುತ್ತದೆ. ವಾತ್ಸಲ್ಯ/ಮಮತೆ ಮತ್ತು ಪ್ರೇಮಗಳೇ ಜೀವನೋತ್ಸಾಹಕ್ಕೆ ಇಂಬು. ಕಷ್ಟಗಳಿಗೆ ಸಡ್ಡು ಹೊಡೆದು ನಿಲ್ಲಲು ಬಲ ಬರುವ ಭಾವನೆಗಳ ಮೂಲ ಬಹಳ ಮೃದು, ನವಿರು. (ಮುಂದಿನೆರಡು ಸಾಲುಗಳನ್ನು ವಿವರಿಸುವುದು ಕಷ್ಟ, ಬರೆಯುವಾಗಲೂ ಹಲವು ರೀತಿಯಲ್ಲಿ ಬರೆದಿದ್ದೆ). ಮಾಡಲಾಗದೇ ಅವುಡು ಕಚ್ಚಿ ನುಂಗಿದ್ದೆಲ್ಲವೂ ಕನಸಾಗಿಯೇ ಉಳಿದವು. ಹೇಳಲಾಗದೇ ಬೆಳೆಯಲು ಬಿಟ್ಟದ್ದೆಲ್ಲ ದೊಡ್ಡ ಮುನಿಸುಗಳಾದುವು. ಬಾಯಿ ಮನಸ್ಸುಗಳಿಂದ ಬಿಚ್ಚಿ ಬಂದದ್ದು ನಮ್ಮ ವ್ಯಕ್ತಿತ್ವವಾಯಿತು. ಆದರೆ, ಅದು ಇನ್ನೊಬ್ಬರ ಕಣ್ಣಲ್ಲಿ ಕಂಡಂತೆ ನಮ್ಮ ಮನಸು್ಸ, ಅದಕ್ಕೆ ಕಚ್ಚಿದ್ದನ್ನು, ಮುಚ್ಚಿದ್ದನ್ನು ಕೂಡಿಸದೇ ಅದು ಇಡಿಯಾಗದು. “ಹುಚ್ಚೇ” ಎಂಬುದು ಸಂಬೋಧನಯೋ? ಆಕ್ಷೇಪವೋ? ಛಿಮಾರಿಯೋ? ಅಲ್ಲ… ತೋರಿಸಿದ್ದರ ಮೇಲೇ ಮಾತ್ರ ಮನಸಾಯಿತೇ, ನೆಚ್ಚುವ ಮೊದಲು ಮುಚ್ಚಿದ್ದು, ಕಚ್ಚಿದ್ದು, ಬಚ್ಚಿಟ್ಟದ್ದರ ಮೇಲೇ ಗಮನವೇ ಕೊಡಲಿಲ್ಲವೇ?

ಸಮಯದ ವಾಹಿನಿ ಹಿಂದಕ್ಕೆ ಹರಿಯಳು, ಮುಂದು ಮುಂದು ಹೋದಂತೇ ನಮಗೆ ದಕ್ಕುವುದು ಹರನ ದಾಳ ಉರುಳಿ ನಮ್ಮ ಪಾಲಿಗೆ ಬಿದ್ದ ಗರಗಳಷ್ಟೇ. ನಾವು ಬಗೆದದ್ದನ್ನೆಲ್ಲಾ ಹೊಂದಲು ಕಾಲವೆಲ್ಲಿ? ಇನ್ನೊಂದು ರೀತಿ ಓದಿದರೆ, ಮಲಪ್ರಭಾ ನದಿಯು ನವಿಲುತೀರ್ಥ ಅಣೇಕಟ್ಟಿಗೆ ಬಂದಳು, ಸೌಂದತ್ತಿ ಯೆಲ್ಲಮ್ಮನ ಕಾಲಿನ ಸ್ಪರ್ಷವನ್ನು ಹೊಂದಲಿಕ್ಕೆ ಎಂದಾಗುತ್ತದೆ. ಮಂದಿ/ಜನರು ಕುರಿ ಮಂದೆಯಂತೆ ಪೆದ್ದುತನವನ್ನೇ ನೆಚ್ಚಿದಾಗ, ಹೊಟ್ಟೆಯ ಉರಿ(ಎರಡೂ ತೆರನಾದ್ದು), ಮನಸ್ಸಿನ ಉರಿ, ಎಲ್ಲದಕ್ಕೂ ಸಮಯದ/ವಿವೇಕದ/ಮಲಪ್ರಭಾಳ ಮೂರು ಹನಿ ಬಿದ್ದರೆ ಬಾ್ಹಳವಾಯಿತು, ನಂದಿಸಲು/ಆರಿಸಲು ಸಾಕು. ಬೀಳುವುದೇ ದುಸ್ತರ. ಏನೇ ಆಗಲಿ, ಅಕ್ಕಾ ನನ್ನದು ಮೂರೆ ಹನಿಗಳಷ್ಟರ ಬಾಳು…

ಕರುವಿಗೆ ಕೆಚ್ಚಲು ಬೇಕಾಗಿಲ್ಲ, ಅಲ್ಲಿ ಕೊಡಲೂ ಏನೂ ಇಲ್ಲ, ಬತ್ತಿದೆ. ಮರುಗಲು ಸ್ವಯಂ ಕಣ್ಣೀರೇ ಇಲ್ಲ, ಇನ್ನು ಕಂಡವರು ಯಾಕೆ ಹನಿಸಿಯಾರು ನೀರು? ಮರದ ಹಾಗೆ ಇದ್ದರಾಯಿತು, ಗೂಡು ಕಟ್ಟಿದ ಹಕ್ಕಿಗಳೆಲ್ಲಾ ಹಾರಿ ಎಲೆಯೊಣಗಿದ ಮೇಲೂ ತನ್ನ ಬೇರು ತನ್ನನ್ನಿನ್ನೂ ಮರೆತಿಲ್ಲಾ ಎಂದು ಸೆಟದು ನಿಂತೇ ಇರುತ್ತದೆ. ಬೇರೇ ಕಾಯುವುದನ್ನು ಮರೆತಾಗ ಬೀಳುವುದು ಬಿಟ್ಟು ಬೇರೇನೂ ಉಳಿದಿರುವಿದಿಲ್ಲ. ಹೊಟ್ಟೆಯಲ್ಲಿ ಇದ್ದ ಜೀವ, ಹೊಟ್ಟೆಯೊಳಗೆ ಬಂದ ಜೀವಗಳು ಎಂದೋ ಹಾರಿ ಹೋಗಿವೆ.

ಗಣೇಶ ಕೃಷ್ಣ
5-ನವೆಂಬರ್-2020

ಸಾಂಗತ್ಯ ಓದುವ, ಹಾಡುವ ರೀತಿ

ಸಾಂಗತ್ಯವು ನಾಲ್ಕು ಸಾಲುಗಳ ಪದ್ಯ. ಬೆಸ ಸಂಖ್ಯೆಯ ಸಾಲಿನಲ್ಲಿ 4 ವಿಷ್ಣು ಗಣಗಳು, ಸಮ ಸಾಲಿನಲ್ಲಿ 2 ವಿಷ್ಣು ಗಣಗಳು 1 ಬ್ರಹ್ಮ ಗಣ. ವಿಷ್ಣುಗಣವನ್ನು ಓದುವಾಗ 6 ಮಾತ್ರೆ ಕಾಲ ಬರುವಷ್ಟು ಎಳೆದು ಹಾಡಬೇಕು, ಅಂತೆಯೇ ಬ್ರಹ್ಮ ಗಣಕ್ಕೆ 4 ಮಾತ್ರೆ. ಈ ಕೆಳಗಿನಂತೆ

ದೋಣೀಗಾ ಹುಟ್ಟಂಗಾ, ಗಾಲೀಗಾ ಕೀಲಂಗಾ
ಸಾಣೀಗಾ ಕಲ್ಲೀನಾ ಸೊಕ್ಕ !
ಕಾಣಾದಾ ಕಾಮಾನಾ ಬಿಲ್ಲೀಗಾ ಹೆದೆಯಂಗಾ
ಬಾಣಕ್ಕಾ ಇದ್ದ್ಹಂಗಾ ಪಕ್ಕಾ

ಇಲ್ಲಿ ಇನ್ನಷ್ಟು ಮಾಹಿತಿ ಇದೆ
ಇಲ್ಲಿ ನನ್ನ ಸ್ನೇಹಿತ ಅಂಶುಮಾನ್ ಬರೆದ ಕೆಲವು ಅರ್ಥಗರ್ಭಿತ ಜಾನಪದ ಛಂದಸ್ಸಿನ ಪದ್ಯಗಳಿವೆ

Creative Commons License
This work is licensed under a Creative Commons Attribution-NonCommercial-NoDerivatives 4.0 International License.

I tweet @ganeshkrishna

5 Replies to “ಮೂರು ಹನಿ ಬಾಳು”

  1. ಮೂರು ಹನಿಗಳ ಬಾಳು (ದಾಂಪತ್ಯದ ಸಾಂಗತ್ಯ) ಕವಿತೆಯ ತಾತ್ಪರ್ಯ ಓದಿ ಜ್ಞಾನಚಕ್ಷುವಿನ ಮುಂದೆ ‘ದೀಪಾವಳಿ’ ಬೆಳಗಿದಂತಾಯಿತು! ಹೌದು, ನಾವು ಕವಿತೆ ಮಾತ್ರ ಓದಿ ಅರ್ಥಮಾಡಿಕೊಂಡದ್ದು ಸಮುದ್ರದ ಮೇಲ್ಪದರವಷ್ಟೇ. ಒಳಗೆಷ್ಟು ರತ್ನಗಳಿವೆಯೆಂದು ತಾತ್ಪರ್ಯದಾಳಕ್ಕಿಳಿದ ಮೇಲೆ ತಿಳಿಯಿತು ನನಗೆ.

    ಹುಟ್ಟು, ಕಾಮನ ಬಿಲ್ಲು, ಯಲ್ಲವ್ನ ಕಾಲ ಹೀಗೆ ನಾನಾರ್ಥಗಳನ್ನು ಬಿಂಬಿಸುವ ಪದಬಳಕೆಯಿಂದ, ಬತ್ತಿದ ಕೆಚ್ಚಲು ಕರುವಿಗೆ ಬೇಕಾಗಿಲ್ಲವೆಂಬ ಭಾವದಿಂದ, ಹನಿಸಬೇಕೆಂದರೆ ಸ್ವಯಂ ಕಣ್ಣೀರೇ ಇಲ್ಲವೆಂಬ ಕರುಣಾರಸದಿಂದ – ಹೀಗೆ ಕವಿತೆ ಮನೋಜ್ಞವೂ, ಪ್ರತಿಭಾಸಂಪನ್ನವೂ ಕೂಡಿದ ಪ್ರಜ್ಞೆ-ಭಾವಗಳ ಸಂಗಮವಾಗಿದೆ. ‘ಸೋಜುಗಾದ ಸೂಜಿ ಮಲ್ಲಿಗೆ’ಯಂತಹುದೇ ಮತ್ತೊಂದು ಕೊಡುಗೆಯನ್ನು ನೀಡಿದ್ದೀರಿ ಗಣೇಶ್. 👌🏻💐🙏🏻

  2. ಬಹಳ ಉತ್ತಮ ಕವಿತೆ, ಸರಳ ರೀತಿಯಲ್ಲಿ ತಾತ್ಪರ್ಯ ವಿವರಿಸಿದ್ದು ಇನ್ನೂ ಚೆಂದ!

Leave a Reply

Your email address will not be published. Required fields are marked *