ಹವ್ಯಕ ಭಾಷೆಲಿ ಒಂದು ಕಥೆ
ಉದಿಯಪ್ಪಗಳೇ ಅಬ್ಬೆ ದಿನುಗೋಳುದು, ಎಲ್ಲಿಯೋ ದೂರಲ್ಲಿ ಗುಡ್ಡೆಲಿ “ಏಳು, ಉದಿಯಾಯ್ದು, ಶಾಲೆಗೆ ಹೋಪಲಿಲ್ಲೆಯ!” ಹೇಳಿದ ಹಾಂಗೆ ಕೇಳ್ತಾ ಇತ್ತು.. ಯೋ… ಏಳೆಕ್ಕೇ ಹೇಳಿ ಚೂರು ಬೇಜಾರುದೆ, ನಿನ್ನೆ ಕೋಪಿ ಬರೆಯದ್ದೇ ಹಾಂಗೆ ಮನುಗಿದ್ದು ನೆನಪಾಗಿ ಇನ್ನುದೇ ಉಪದ್ರ ಆತು. ಅಷ್ಟೊತ್ತಿಂಗೆ ಅಬ್ಬೆಯೇ ಉಪ್ಪರಿಗೆ ಹತ್ತಿ ಬಂದು, “ಇನ್ನು ಏಳದ್ರೆ ಆಗ” ಹೇಳಿಯಪ್ಪಗ, ಆತಂಬಗ ಏಳ್ತೆ, ಆದರೂ ಒಳಾಂದ ಉದಾಸೀನ ಬಿಡದ್ದೆ, “ಆನು ದೇವರಿಂಗೆ ಚಾಮಿ ಚಾಮಿ ಮಾಡಿಕ್ಕಿ ಏಳ್ತೆ” ಳಿ ಹಾಸಿಗೆಲೇ ಹೊಡಾಡಿದೆ. ಹಾಂಗೆಯೇ ರಜ್ಜ ಹೊತ್ತು ವರಗುವ ಅಟ್ಟಣೆ ಎನ್ನದು. ಅಬ್ಬೆಗೆ ಗೊಂತಾಗದ್ದೆ ಇದ್ದಿಕ್ಕಾ? ದೋಸೆ ಎಳಕ್ಕುಲಿದ್ದೂಳಿ ಡಭ ಡಭ ಮೆಟ್ಲಿಳುದು ಹೋತು. ಚುರುಕ್ಕು ಅಬ್ಬೆ! ಎನ್ನ ಪುಣ್ಯ, ರಜ್ಜ ವರಗುಲೆ ಸಿಕ್ಕಿತ್ತು.
ಅಷ್ಟಪ್ಪಗಳೇ ನೆಂಪಾದ್ದದು ಉದ್ದಿನ ದೋಸೆ ಇಂದುಳಿ ಹೇಳಿದ್ದದು. ಹಯ್ಯಿ!! ಅಷ್ಟು ಸಾಕಾತು ಢಬಕ್ಕನೆ ಎದ್ದು ಅನುದೇ ಅಬ್ಬೆ ಇಳುದ ಹಾಂಗೇಯೇ ಉಪ್ಪರಿಗೆ ಮೇಟ್ಲಿಳುದು ಹಲ್ಲು ತಿಕ್ಕುಲೆ ಓಡಿದೆ. ಎನ್ನ ಹಾಂಗೆ ಬೇಗ ಏಳದ್ದ ಅಪ್ಪಚ್ಚಿ ಹಲ್ಲು ತೀಕ್ಯೊಂಡು, “ಶ್ವೇತಳು ಬೆಳಗ್ಗೆ ಬೇಗನೇ ಎದ್ದು ಹಲ್ಲುಜ್ಜಿ ಮುಖ ತೊಳೆದು, ದೇವರಿಗೆ ಕೈಮುಗಿದು ಪಾಠ ಪುಸ್ತಕಗಳನ್ನು ತೆರೆದು ಓದಿದಳು” ಹೇಳಿ ಒಂದನೇ ಕ್ಲಾಸಿನ ಪಾಠವ ಗಟ್ಟಿಯಾಗಿ ಎನಗೆ ಕೇಳ್ವ ಹಾಂಗೆ ಬಾಯಿಪಾಠ ಹೇಳಿದವು. ಆನು ಪಕ್ಕ ಪಕ್ಕ ಹಲ್ಲು ತಿಕ್ಕಿ, ದೇವರಿಂಗೆ ಹೂಗು ಮಡುಗಿಯೊಂಡು ಇತ್ತ ಅಜ್ಜನ ರಜ್ಜ ನೂಕಿ ‘ಚಾಮಿ ಚಾಮಿ’ ಮಾಡಿಕ್ಕಿ ಅಟ್ಟುಂಬೊಳಕ್ಕೆ ಓಡಿ ಹೋಗಿ ಒಂದು ಬಾಳೆ ಕೀತು ಹಿಡ್ಕೊಂಡು ಒಲೆ ಮುಂದೆ ಕೂದೆ. ಅಬ್ಬೆ ಎರಡೆರಡು ಕಾವಲಿಗೆಲಿ ಸರ್ಕಸ್ಲಿಪ್ಪ ಹಾಂಗೆ ದೋಸೆ ಎರವದು-ಎಳಕ್ಕುದು ಮಾಡ್ತಾ ಇತ್ತು. ಎನ್ನ ಬಾಳೆಗೆ ಒಂದು ಡಪ್ಪಾಳಿ ದೋಸೆ ಕವುಂಚಿ ಬಿದ್ದತ್ತು, ಛೆ ಕುಂಞಿ ದೋಸೆ ಆಯೆಕ್ಕಿತ್ತು, ಕೂಡ್ಲೆ ಹೇಳಿದೆ ಇನ್ನಾಣದ್ದು ಕುಂಞ ದೋಸೆ ಎರೆತ್ಯಾಳಿ. ಚುಂಯ್ಯಿ ಚುಂಯ್ಯಿಳಿ ರಪ ರಪ ನಾಲ್ಕೈದು ಕುಂಞಿ ದೋಸೆಗ ಕಾವಲಿಗೆಲಿ ಕಣ್ಣು ಕಣ್ಣು ಬಿಡ್ಲೆ ಶುರುಮಾಡಿದವು.
ವಾರ್ಷಿಕ ಪರೀಕ್ಷೆ ಎಲ್ಲ ಮುಗುದ್ದು, ಇನ್ನೆರಡು ದಿನಲ್ಲಿ ಶಾಲೆ ಮುಗಿತ್ತುದೆ. ದೊಡ್ಡ ರಜೆಲಿ ಅಜ್ಜನಮನೆ, ಅತ್ತೆ ಮನೆ ಎಲ್ಲ ತಿರುಗುದೇ ಕೆಲಸ. ಎಲ್ಲರ ಮನೆಲೂ ಆ ಸಮಯಕ್ಕೆ ಹಲಸಿನ ಕಾಯಿದೇ ಗೌಜಿ. ಹಲಸಿನ ಕಾಯಿ ದೋಸೆ ಹಣ್ಣಿನ ದೋಸೆಗ ಉದಿಯಪ್ಪಗಂಗಾದರೆ, ಮಧ್ಯಾಹ್ನಕ್ಕೆ ಹಲಸಿನ ಕಾಯಿ ತಾಳು, ಬೆಂದಿ ಮೇಲಾರಂಗಳೇ. ದಿನಾ ಉಂಡರೂ ಬೇಜಾರಿಲ್ಲೆ, ಆಡಿ ಆಡಿ ಹಶುವಾದಿಪ್ಪಗ ಎಲ್ಲವುದೆ ರುಚಿ ರುಚೀ. ಅಲ್ಲದ್ದೆ ‘ಆದಾಗ ಇದಾಗ’ ಹೇಳಿರೆ ಅಜ್ಜ ಬೈಗು. ಎಲ್ಲವನ್ನು ತಿನ್ನೆಕ್ಕು, ಇದು ಬೇಡ, ಮೆಚ್ಚುತ್ತಿಲ್ಲೇಳಿ ಹೇಳಿರೆ, ‘ಅಜ್ಜ ಬತ್ತವು ನೋಡುಳಿ’ ಹೇಳಿ ಹೆದರ್ಸಿಗೊಂಡಿತ್ತ ಕಾರಣ ಆವುತ್ತಿಲ್ಲೇಳಿ ಎಂತದುದೇ ಇತ್ತಿಲ್ಲೆ. ಮತ್ತೆ ಸುಟ್ಟವು, ಹಲಸಿನ ಬೇಳೆ ಹೋಳಿಗೆ ಮೆಚ್ಚದ್ದೆ ಇಪ್ಪವು ಆರಾರು ಇಕ್ಕಾ? ವಿಟ್ಲದ ಹತ್ತರೆ ಇಪ್ಪ ದೊಡ್ಡತ್ತೆ ಮನೆಲಿ ಯಾವಾಗ ಹೋದರುದೆ ಬೆರಟಿ ಇದ್ದೇ ಇಕ್ಕು. ಬೆರಟಿಯ ಪಾಯಸ ಮಾಡಿಕ್ಕಿ ಮೇಗಂಗೆ ಹೊರುದ ಎಳ್ಳು ಹಾಕಿರೆ ಎಷ್ಟು ಲಾಯ್ಕಾವ್ತೂಳಿರೆ ಹೇಳ್ಳೆಡಿಯಾ. ನಾಳೆ ದೊಡ್ಡತ್ತೆ ಮನೆಗೆ ಹೋಪದೂಳಿ ತಮ್ಮ ಎಲ್ಲಾ ಅಟ್ಟಣೆ ಕಟ್ಟುತ್ತಾ ಇತ್ತ. ಅಪ್ಪಚ್ಚಿ ಮಂಗ್ಳೂರಿಂಗೆ ಹೋಪಗ ಎಂಗಳ ದೊಡ್ಡತ್ತೆ ಮನೆಗೆ ಬಿಡುದೂಳಿ ಎಲ್ಲ ಗ್ರೇಶಿತ್ತೆಯ. ಅಷ್ಟಪ್ಪಗ ಅಜ್ಜ ಬಂದು ಅಜ್ಜಿ ಹತ್ರೆ, ಅಬ್ಬೆ ಹತ್ತರೆ ನಾಡ್ತು ಸುಶೀಲತ್ತೆಯ ನೋಡ್ಲೆ ಬತ್ತವೂಳಿ ಹೇಳುದು ಕೇಳಿತ್ತು ಎನಗೆ. ಸುಶೀಲತ್ತೆಗೆ ಎಂಥಾಯ್ದಪ್ಪಾ, ಅವರ ಎಂತಕೆ ನೋಡುದೂಳಿ ಎನಗೆ ಜೋರು ಸಂಶಯ. ಕೇಳ್ಳೆ ರಜ್ಜ ಹೆದರಿಕೆ; ದೊಡ್ಡವು ಮಾತಾಡ್ವಗ ಎಡೆಲಿ ಬಾಯಿ ಹಾಕ್ಲಾಗಾಳಿ ಬೈದರೇಳಿ. ಎಲ್ಲ ಮಾತಾಡಿ ಹೋದ ಮೇಲೆ, ಮೆಲ್ಲಂಗೆ ಅಬ್ಬೆಯ ಹಿಂದೆಯೇ ಹಟ್ಟಿ ಹತ್ತ್ರಂಗೆ ಹೋದೆ. ಅಬ್ಬೆ ಗಂಗೆಗೆ ಅಕ್ಕಚ್ಚು ಮಡುಗಿಕ್ಕಿ ಹಟ್ಟಿ ಬಾಗಿಲು ಹಾಕಿಕ್ಕಿ ಹೆರ ಬಪ್ಪನ್ನಾರ ಕಾದು ಕೂದು ಕೇಳಿದೆ –
“ಅತ್ತೆಯ ಎಂತಕೆ ನೋಡುದು?”,
ಅಬ್ಬೆಗೆ ಶುರುವಿಂಗೆ ಆನು ಕೇಳಿದ್ದು ಎಂತರಾಳಿಯೆ ಅರ್ಥ ಆಯ್ದಿಲ್ಲೆ, ದೊಡ್ಡ ಕಟ್ಟ ಬೆಳುವೊಲುನ ತೆಗದು ಬಿಡುಸಿ ದನಗೊಕ್ಕೆ ಬೈಪ್ಪಣೆಗೆ ಹಾಕುತ್ತಾ ಇತ್ತು. ಎನ್ನ ಮಾತಿಂಗೆ ಉತ್ತರವೇ ಇಲ್ಲೆ. ಆನು ರಜ್ಜ ದೊಡ್ಡ ಸ್ವರಲ್ಲಿ ರಜ್ಜ ತೀಂಕಿ ಕೇಳಿದೆ –
“ಅಜ್ಜ ಹೇಳಿದ್ದದ್ದು ,ಅತ್ತೆಯ ಎಂತಕೆ ನೋಡುದೂಳಿ!!”
ಅಬ್ಬೆಗೆ ನೆಗೆಯೇ ಬಂತು..
“ಅತ್ತೆಗೆ ಮದುವೆ ಮಾಡ್ಸುಲಿದ್ದು” ಅದಕ್ಕೇಳಿ ಹೇಳಿತ್ತು.ಅದಲ್ಲದ್ದೆ
“ನಿನಗೂ ಇದ್ದು ದೊಡ್ಡಪ್ಪಗ ಮದುವೆ ಮಾಡ್ಲೆ”. ಕೋಲು ಕೊಟ್ಟು ಬಡಿಶಿಗೊಂಡ ಹಾಂಗಾತು ಎನಗೆ.
“ಅತ್ತೆಗೆ ಯಾವಾಗ ಮದುವೆ?”
“ಗೊಂತಿಲ್ಲೆ”. “ನಾಡ್ತು ನೋಡ್ಲೆ ಬಪ್ಪದಷ್ಟೇ..”.
ನೋಡ್ಲೆ ಬಪ್ಪದಕ್ಕೂ ಮದುವೆಗೂ ಎಂಥ ಸಂಬಂಧಾಳಿ ಎನ್ನ ತಲೆಗೆ ಹೊಳದ್ದೇ ಇಲ್ಲೇ.
“ಹೊಸ ಉದ್ದ ಲಂಗ ರವಕೆ ಹೊಲಿಶುಲೆ ಇದ್ದಾ ಎನಗೆ?”
“ಇದ್ದು, ಸಟ್ಟುಮುಡಿಗೆ ಇಪ್ಪದನ್ನೇ ಹಾಕುವ”.
ಅಷ್ಟು ಸಾಕಿತ್ತು ಎನಗೆ, ಹೊಸ ಲಂಗ ರವಕೆ ಯಾವ ಬಣ್ಣದ್ದಕ್ಕೂಳಿ ದೊಡ್ಡ ದೊಡ್ಡ ಆಲೋಚನೆ ಮಾಡ್ಯೊಂದು ಆನೆನ್ನ ಟಾಮಿ ನಾಯಿ ಕುಂಞಿಯ ಬಾಬೆ ಹಾಂಗೆ ಎತ್ತಿಗೊಂಡು ಕೊಂಡಾಟ ಮಾಡಿಯೊಂಡು ಮನೆ ಜೆಗಿಲಿಂಗೆ ಹೋದೆ.
“ನಾಯಿ ಮುಟ್ಟಿಕ್ಕಿ ಕೈ ತೊಳೆಯೆಕ್ಕು” ಳಿ ಅಬ್ಬೆ ಹೇಳಿದ್ದು ಕೇಳದ್ದಾಂಗೆ ಟಾಮಿಯ ಕೊಂಡಾಟಲ್ಲಿ ಪುರುಂಚಿದೆ.
ತಮ್ಮಂಗೆ ದೊಡ್ಡತ್ತೆ ಮನೆಗೆ ಹೋಪಲಿಲ್ಲೇಳಿ ಆಗಿ ಜೋರು ಕೋಪ. ಅಲ್ಲಿ ಅವನ ಚೆಂಙಾಯಿ ಭಾವಂದ್ರೊಟ್ಟಿಂಗೆ ಕ್ರಿಕ್ಕೆಟ್ಟು ಆಡುದು ತಪ್ಪುತ್ತೂಳಿ ಅವಂಗೆ ಬೇಜಾರು ಪಾಪ.
ಅವಂಗದು ಮರೆತ್ತು ಬೇಗ, ಹತ್ರಾಣ ಮನೆ ಲಚ್ಚುಮಿಯ ಕೋಳಿಗಳ ಓಡ್ಸುದರಲ್ಲಿ ಅವನ ಕೋಪ ಕೆಳಯಿಳುದ್ದತ್ತುದೆ.
ಸುಶೀಲತ್ತೆಯ ನೋಡ್ಲೆ ಅಂದು ಬಂದಿತ್ತವು. ಸಜ್ಜಿಗೆ, ಕ್ಷೀರ ಎಲ್ಲ ಮಾಡಿತ್ತವು. ನೋಡ್ಲೆ ಬಂದವರಲ್ಲಿ ಎನ್ನಂದ ರಜ್ಜ ಸಣ್ಣ ಕೂಸೊಂದು ಇತ್ತು, ಎರಡು ಜೆಡೆ ಹಾಕ್ಯೊಂಡು ಇತ್ತು. ಅವು ಪೇಟೆಲಿಪ್ಪದಡ, ಹಾಂಗಾಗಿ ಅದು ರೆಡಿಮೇಡ್ ಫ್ರಾಕ್ಕ್ ಹಾಕ್ಯೊಂಡಿತ್ತು. ಚೆಂದ ಇತ್ತು. ಆನದರತ್ರೆ ಟಾಮಿ ತೋರ್ಸುತ್ತೇಳಿ ಹೇಳಿದೆ, ಅದು ಅದರಮ್ಮನ ಮೋರೆ ನೋಡಿತ್ತು, ಆನುದೆ ಅವರನ್ನೇ ನೋಡಿದೆ. ಅವು ಅಕ್ಕುಳಿ ಕಣ್ಣಿಲೆ ಹೇಳಿದ್ದು ನೋಡಿ ಇಬ್ರಿಂಗೂ ಕೊಷಿಯೋ ಕೊಷಿ.
ರಜ್ಜ ದಿನ ಕಳುದಿಕ್ಕು, ಮನೆಲಿ ಗೌಜಿಯೋ ಗೌಜಿ. ಅಡುಗೆಯವು ಬಂದಿತ್ತವು ಉದಿಯಪ್ಪಗಳೇ. ಅಪ್ಪಚ್ಚಿ ಅಪ್ಪ ಎಲ್ಲ ಒಳ್ಳೆ ಗಡಿಬಿಡಿಲಿ ಇತ್ತವು. ಅತ್ತೆಗೆ ಲಾಯ್ಕ ಸೀರೆ ಸುತ್ಸಿತ್ತವು. ಎನ್ನ ಸುಶೀಲತ್ತೆ ಕಾಂಬಲೆ ಚೆಂದ. ಉದ್ದ ಜೆಡೆದೆ ಇದ್ದು. ಬೆಳಿ, ಮುಟ್ಟಿರೆ ಮಣ್ಣಾದರೇಳಿ ಅಪ್ಪಷ್ಟು ಚೆಂದ. ಅಬ್ಬೆ ಎಡಕ್ಕಿಲಿ ಎನ್ನ ಮೀಶಿಕ್ಕಿ ಒಂದು ಹೋಪಲ್ಲಿಂಗೆ ಹಾಕ್ವ ಲಂಗ ರವಕ್ಕೆ ಹಾಕ್ಸಿ ತಲೆ ಬಾಚಿ ಬಿಟ್ಟತ್ತು. ಅಜ್ಜಿ ಬಾಳೆಲೆಲಿ ಅಡುಗೆಯವು ಮಾಡಿದ ಇಡ್ಲಿದೆ ಚಟ್ನಿದೆ ಬಳುಸಿಕ್ಕಿ ಹತ್ರೆ ಅವಕ್ಕುದೇ ಅಂತುಗೊಂಡು ಕೂದವು. ಆನು ಸಣ್ಣ ತುಂಡು ಒಳಿಶಿಕ್ಕಿ ಉಳುದ್ದರೆಲ್ಲಾ ರಪ್ಪ ತಿಂದಿಕ್ಕಿ, ಸಣ್ಣ ತುಂಡಿನ ಟಾಮಿಗೆ ಹಾಕ್ಲೇಳಿ ಕೈಲಿ ಹಿಡ್ಕೊಂಡು ಓಡಿದೆ. ಟಾಮಿಗೆ ಮನುಗುಲೇಳಿ ಅಪ್ಪನತ್ರೆ ಕೇಳಿ ಒಂದು ಹರ್ಕಟೆ ಬಟ್ಟಿ ತೆಕ್ಕೊಂಡು ಅದಕ್ಕೆ ಒಂದು ಗೋಣಿ ಹೊದೆಶಿ ಲಾಯ್ಕ ಹಾಸಿಗೆ ಮಾಡಿತ್ತೆ. ಟಾಮಿಗೆ ಒಳ್ಳೆ ಕೊಷಿ ಅದರ ಆ ಬಟ್ಟಿ ಹಾಸಿಗೆ. ಎಲ್ಲೆಲ್ಲಿಗೋ ಹೋಗಿ ಸೀದಾ ಬಟ್ಟಿ ಇಪ್ಪಲ್ಲಿಗೆಯೇ ಬಂದು, ಚಕ್ಕನೆಕಟ್ಟಿ ಕೂಪಾಂಗೆ ಮಾಡಿ ಚುರುಂಟಿ ಮನುಗುತ್ತು ಯಾವಾಗಲೂ. ಆನಷ್ಟಪ್ಪಗೆಲ್ಲ ಅದರ ತಲೆಯ ಲಾಯ್ಕಕೆ ಉದ್ದುದು. ಅದಕ್ಕೂ ಇಷ್ಟ ಹಾಂಗೆ ಉದ್ಸಿಗೊಂಬದು. ಅದಕ್ಕೆ ಇಡ್ಲಿ ಕೊಟ್ಟು ತಿಂಬದನ್ನೇ ನೋಡ್ತಾ ಇಪ್ಪಗ, ಅದು ಡಬಕ್ಕನೆ ಎದ್ದು ಬಾಲ ರಜ್ಜ ಕುತ್ತ ಮಾಡಿ ವ್ವವ್ ವ್ವವ್ವೂಳಿ ಅಗರಿನ ಹೊಡೆಂಗೆ ನೋಡಿ ಕೊರಪ್ಪುಲೆ ಶುರು ಮಾಡಿತ್ತು. ನೋಡಿರೆ ದೊಡ್ಡತ್ತೆ, ಮಾವ, ಭಾವಂದ್ರು ಬತ್ತಾ ಇತ್ತವು. ಆನು ಓಡಿ ಹೋದೆ, ಎಲ್ಲರೂ ಕೈ ಕಾಲು ತೊಳಕ್ಕೊಂಡು ಒಳ ಬಂದು ಕಾಪಿ ಕುಡಿದವು. ತಮ್ಮ ಕಾಪಿ ಕುಡುದ್ದನೋ ಗೊಂತಿಲ್ಲೇ, ಭಾವಂದ್ರೋಟ್ಟಿಂಗೆ ಲಾಗ ಹಾಕುದು ಕಂಡತ್ತು. ರಜ್ಜ ಕಳುದಪ್ಪಗ ಅಜ್ಜಿ ಎನ್ನ ಕೈಗೆ ಒಂದು ಬೈರಾಸು ಕೊಟ್ಟು, ನೀರಿನ ಬಾಲ್ದಿ ಹತ್ರೆ ನಿಲ್ಸಿದವು. ಅಂದು ನೋಡ್ಲೇಳಿ ಬಂದವ್ವೆಲ್ಲಾ ಬಂದವು. ಕಾಲು ತೊಳದು ಎನ್ನ ಕೈಂದ ವಸ್ತ್ರ ತೆಕ್ಕೊಂಡು ಕೈ ಮೊರೆ ಉದ್ದಿಗೊಂಡವು. ಅವರೆಲ್ಲರ ಎಡಕ್ಕಿಲಿ ಎನಗೆ ಅಂದು ಫ್ರಾಕು ಹಾಕ್ಯೊಂಡು ಬಂದ ಕೂಸಿನ ಕಂಡತ್ತು. ಎನ್ನ ಮೋರೆ ಕೊಶಿಲಿ ಅಗಲ ಆದ್ದದು ಎನಗೆಯೇ ಕಂಡಿದು. ಉಳುದವಕ್ಕೆ ಬೈರಾಸು ಕೊಡುದು ಬಿಟ್ಟು ಅದರತ್ರೆ ಹೋಗಿ ಅದಕ್ಕೆ ಬೈರಾಸು ಕೊಟ್ಟೆ. ಟಾಮಿ ಎಲ್ಲಿದ್ದೂಳಿ ಕೇಳಿತ್ತು ಮೇಲ್ಲಂಗೆ ಸಣ್ಣ ಸ್ವರಲ್ಲಿ. ಅಲ್ಲಿ ಬಜಕ್ರೆ ಕೊಟ್ಟಗೆಲಿ ಇದ್ದೂಳಿದೆ. ಅಷ್ಟಪ್ಪಗ ಅದರಮ್ಮ ಅದರ ಮನೆ ಒಳಂಗೆ ಹೋಪಾಳಿ ಕರಕ್ಕೊಂಡೋದವು.
ಎಲ್ಲರೂ ಮಾತಾಡಿಯೊಂಡಿಪ್ಪಗ ಎಂಗ ಇಬ್ರು ಟಾಮಿ ಹತ್ರೆ ಎತ್ತಿತ್ತೆಯ. ಟಾಮಿಯ ಒಳ್ಳೆ ಗುಣದ ಬಗ್ಗೆ ಆನದಕ್ಕೆ ಹೇಳ್ತಾ ಇತ್ತೆ. ಟಾಮಿ ಒಪ್ಪಣ್ಣ ಅಲ್ಲದ್ರುದೆ!
ಸುಶೀಲತ್ತೆಗೆ ಮದುವೆ ನಿಗಂಟಾತಡಾಳಿ ಅಜ್ಜಿ ಹೇಳ್ತಾ ಇತ್ತವು. ರಜ್ಜ ದಿನಲ್ಲೇ ಅಜ್ಜ ಕವಾಟಿಲಿ ಅಟ್ಟಿ ಅಟ್ಟಿ ಹೇಳಿಕೆ ಕಾಗದಂಗಳ ಮಡುಗಿದವು. ಎಂಗೊ ಎಲ್ಲರೂ ಸೀರೆ ಜವುಳಿ ತೆಗವಲೆ ಪೇಟೆಗೆ ಹೋಗಿತ್ತೆಯ. ಎನಗೆ ನೀಲಿ ಬಣ್ಣದ ಉದ್ದ ಲಂಗ ರವಕೆ ಅಕ್ಕೂಳಿ ಮಾಡಿದವು. ಎನಗೂ ಇಷ್ಟ ಆಗಿತ್ತು. ಮತ್ತೆ ಎಲ್ಲರೂ ವಸ್ತ್ರ ತೆಗವಗ ಅಪ್ಪಚ್ಚಿದೆ ಆನುದೇ ಮೆಲ್ಲಂಗೆ ಹೆರ ಬಂದು ಐಸ್ ಕ್ರೀಮ್ ಅಂಗಡಿಗೆ ಬಂದೆಯ. ಅಜ್ಜ ಬೈಗು “ಅದೆಲ್ಲ ಕೊಳಕ್ಕು, ತಿಂಬಲಾಗಾಳಿ”. ಕೃಷ್ಣ ಭಾವ ಅದಕ್ಕೆ ಹಂದಿ ನೆತ್ತರು ಹಾಕುತ್ತವೂಳಿ ಕೂಡ ಹೇಳಿತ್ತ ಅಂದು. ಅಪ್ಪಚ್ಚಿಗೆ ಗೊಂತಿದ್ದು ಯಾವುದರಲ್ಲಿ ಇಲ್ಲೇಳಿ, ಹಾಂಗಾಗಿ ಎಂಥ ಹೆದರಿಕೆದೆ ಇಲ್ಲೆ. ಅವ ಎನ್ನತ್ರೆ ಗಡ್ಬಡ್ ಅಕ್ಕಾ ಪ್ಲೈನ್ ಐಸ್ ಕ್ರೀಮ್ ಅಕ್ಕಾಳಿ ಕೇಳಿಯಪ್ಪಗ, ಎನಗೆ ಐಸ್ ಕ್ರೀಮ್ ಳಿ ಇಪ್ಪದೇ ಲಾಯ್ಕಾಳಿ ಪ್ಲೈನ್ ಐಸ್ ಕ್ರೀಮ್ ಅಕ್ಕೂಳಿದೆ. ಅವಂಗೆ ಗಡ್ಬಡ್ ಅಕ್ಕೂಳಿದ. ರಜ್ಜ ಕಳುದು ಎರಡುದೆ ಬಂತು. ಎನಗೆ ಬೆಳಿ ಬಣ್ಣದ ಸಣ್ಣ ತುಂಡು ಐಸ್ ಕ್ರೀಮ್ ಮಡುಗಿದವು, ಅಪ್ಪಚ್ಚಿಗೆ ದೊಡ್ಡ ಗ್ಲಾಸಿಲಿ ಬಣ್ಣ ಬಣ್ಣ ಇಪ್ಪ ಒಂದು ರಾಶಿ ಐಸ್ ಕ್ರೀಮ್ ಕೊಟ್ಟವು. ಎಂತಾ ಮೋಸ! ಆದರೆ ಆನೇ ಹೇಳಿದ್ದಲ್ದಾ ಪ್ಲೈನ್ ಐಸ್ ಕ್ರೀಮ್-ಳಿ, ಹಾಂಗಾಗಿ “ಅಡಿಗೆ ಬಿದ್ದರೂ ಮೂಗು ಮೇಲೆ”ಳಿ ಕೊಟ್ಟದನ್ನೇ ಬಾಯಿ ಮುಚ್ಯೊಂಡು ತಿನ್ನೆಕ್ಕಾತು. ರಜ್ಜ ಕೋಪ ಹೇಂಗೂ ಇತ್ತು, ಐಸ್ ಕ್ರೀಮ್ ಹೊಟ್ಟೆಗೆ ಇಳುದಪ್ಪಗ ಕಮ್ಮಿ ಆತು ಹೇಂಗೋ..
ಸುಶೀಲತ್ತೆ ಮದುವೆ ಕಳುದತ್ತು, ಮನೆ ಸುತ್ತುದೆ ಚಪ್ಪರ ಹಾಕಿತ್ತವು, ತೆಗದ್ದವಿಲ್ಲೆ, ಎಂಗೊಗೆ ‘ಕಂಬಾಟ’ ಆಡ್ಲೆ ತೆಗೆಯದ್ದದು ಒಳ್ಳೆದೇ ಆಗಿತ್ತು. ಸುಶೀಲತ್ತೆಯ ‘ಅಂದು ಬಂದವರ’ ಮನೆಲಿ ಬಿಟ್ಟಿಕ್ಕಿ ಬಂದಿತ್ತವು. ಅವು ಅಲ್ಲಿ ಇರ್ತವಡ. ರಜೆ ಕಳುದಿಕ್ಕಿ ಬಕ್ಕು ಕಾಣ್ತು. ಎಂಗೊ ರಜೆಲಿ ಸಮಾ ಸೊಕ್ಕಿದೆಯ, ಹಪ್ಪಳ ಮಾಡಿದೆಯ, ಗುಡ್ಡೆಲಿಡೀ ನಲಿಪ್ಪಿ, ಕುಂಟಾಲ ಹಣ್ಣು ತಿಂದು, ಆರ ನಾಲಗೆ ಹೆಚ್ಚು ನೀಲಿ ಆಯ್ದೂಳಿ ಎಲ್ಲ ಅಳಕ್ಕೊಂಡು, ಬೀಜ ಕೊಯ್ಕೊಂಡು ನೋಡ್ವಾಗ ರಜೆ ಕಳುದೇ ಹೋಗಿತ್ತು. ಸುಶೀಲತ್ತೆ ಬಗ್ಗೆ ಹೆಚ್ಚು ನೆಂಪೇ ಆಯ್ದಿಲ್ಲೆ. ಮಳೆಗಾಲದೆ ಶುರು ಆಗಿ ಶಾಲೆ ಶುರು ಆತು. ನೆಲ ಎಲ್ಲಾ ಪಸೆ ಪಸೆ, ಮಳೆಯ ಜೊ-ರೋ ಶಬ್ದಕ್ಕೆ ಗುಡಿ ಹಾಕಿಗೊಂಡು ವರಗಿದ್ದರೆ ಉದಿಯಪ್ಪಗ ಏಳ್ಳೇ ಮನಸ್ಸು ಬಾರ. ಉದಿ ಆದ್ದದುದೆ ಗೊಂತೇ ಆಗ. ಈಗ ರಜ್ಜ ರಜ್ಜ ಸುಶೀಲತ್ತೆ ಎಂತ ಇನ್ನುದೆ ಬೈಂದಿಲ್ಲೇಳಿ ಅಪ್ಪಲೆ ಶುರುವಾಗಿತ್ತು. ಅಜ್ಜಿಯತ್ರೆ ಕೇಳಿದೆ, ಅದು ನಾಡ್ತಿಂಗೆ ಬಕ್ಕೂಳಿದವು. ಅಬ್ಬೆಯತ್ರೆ ಕೇಳಿದೆ ಅತ್ತೆಂತಕೆ ಅಲ್ಲೇ ಅವರ ಮನೆಲಿ ಇಷ್ಟು ದಿನ ಇಪ್ಪದೂಳಿ. ಅಪ್ಪ ಹೇಳಿದವು, ಮದುವೆ ಆದಮೇಲೆ ಹಾಂಗೆ ಅಲ್ಲಿ ಅವರ ಮನೆಲೇ ಇಪ್ಪದು ಕ್ರಮಾಳಿ.
ಸುಶೀಲತ್ತೆ ಇಲ್ಲದ್ದದು ತುಂಬಾ ಬೇಜಾರಾತು. ಉದಿಯಪ್ಪಗ ಎದ್ದು ತೊಳಶಿ ಕಟ್ಟೆಯ ಹತ್ರೆ ಬಿದ್ದ ಉದಯ ಮಲ್ಲಿಗೆ ಹೆರ್ಕ್ವಗ, ಟಾಮಿದೆ ಆನೆಂತ ಹೆರ್ಕುದೂಳಿ ಮೂಸಿ ಮೂಸಿ ನೋಡ್ತಾ ಇತ್ತು. ಇರುಳು ಮಳೆ ಬಂದ ಕಾರಣ ಜಾಲಿಡೀ ಚೆಂಡಿ ಚೆಂಡಿ. ಜಾರದ್ದ ಹಾಂಗೆ ಸಲಕ್ಕೆ ಹಾಕಿತ್ತವು, ಅದರ ಮೇಲೆ ಜಾರದ್ದ ಹಾಂಗೆ ಲಂಗ ಎತ್ತಿಗೊಂಡು ನಡವದು ನೋಡಿರೆ ಕಂಭಕ್ಕೆ ಕಟ್ಟಿದ ಬಳ್ಳಿ ಮೇಲೆ ಮೆಲ್ಲಂಗೆ ಹನ್ಸದ್ದಾಂಗೆ ನಡವವರ ಹಾಂಗೆ ಕಾಣ್ತು. ಉದಯ ಮಲ್ಲಿಗೆ ,ಕಸ್ತೂರಿ ಮಲ್ಲಿಗೆ, ಜಾಜಿ ಮಲ್ಲಿಗೆ ಎಲ್ಲವೂ ಸೆಸಿ ತುಂಬಾ ಆವುತ್ತಾ ಇತ್ತು. ಕೊಯ್ಯ್ವವ್ವು ಆರು ಇಲ್ಲೆ. ಕೊಯ್ದರೂ ಮಾಲೆ ಕಟ್ಟುವವ್ವು ಇಲ್ಲೆ. ಕಟ್ಟಿರುದೇ ಸೂಡುವವು ಇಲ್ಲೆ. ಸುಶೀಲತ್ತೆ ಇಲ್ಲದ್ದದು ಎಲ್ಲ ಹೊಡೆಲೂ ಕಾಣ್ತಾ ಇತ್ತು. ಮಲ್ಲಿಗೆ ಸೆಸಿಲೇ ಬಾಡಿ, ಉದುರಿ ಹೋವ್ತಾ ಇತ್ತು. ಮಳೆಗಾಲದ ಉದಾಸಿನ, ಅತ್ತೆ ಇಲ್ಲದ್ದದು ಸೇರಿ ಇನ್ನೂ ಜಾಸ್ತಿಯೇ ಆಗಿತ್ತು. ಟಾಮಿದೆ ಮಳೆಗೆ ಬಾಯಿ ಒಡಕ್ಕೊಂಡು ಸಣ್ಣ ಸಣ್ಣ ವರಕ್ಕು ಒರಗಿಗೊಂಡು, ಮಳೆ ಬಿಟ್ಟಿದ್ದರೆ ಸೌದಿ ರಾಶಿಯ ಹಿಂದೆ ಮುಂದೆ ಮೂಸ್ಯೊಂಡು ದಿನ ಕಳೆತ್ತಾ ಇತ್ತು. ಮದುವೆ ಆದರೆ ಹೀಂಗೂ ಇದ್ದಾ, ಅವರ ಮನೆಲೇ ಇಪ್ಪ ಕ್ರಮ ಇದ್ದಾಳಿ ಆಗಿ ಒಂದೊಂದರಿ ಕೋಪವೆ ಬತ್ತಾ ಇತ್ತು.
ಅಂದು ಶಾಲೆಗೆ ಅಜ್ಜನ ಬಪ್ಪಲೆ ಹೇಳಿತ್ತವು. ಎನ್ನನ್ನೂ ಹೆಡ್ ಮಾಶ್ರ ಕೋಣೆಗೆ ಕರಕ್ಕೊಂಡು ಬಂದಿತ್ತವು. ಹೆಡ್ ಮಾಷ್ರು ಹೇಳ್ತಾ ಇತ್ತವು, “ಅದು ನವೋದಯ ಪರೀಕ್ಷೆಲಿ ಪಾಸ್ ಆಯ್ದು, ನವೋದಯ ಶಾಲೆಗೆ ಕಳುಸುಲಕ್ಕೂಳಿ”.
“ಬೇಡ ಮಾಷ್ರೆ, ಇಲ್ಲೇ ಹೋಗಲಿ ಸಧ್ಯಕ್ಕೆ, ಇದಕ್ಕೆ ಮದುವೆ ಆದಮೇಲೆ ಹೇಂಗೂ ದೂರ ಕಳುಸುಲಿದ್ದನ್ನೇ, ಈಗಳೆ ಎಂತಕೆ”.
ಎನ್ನ ಕ್ಲಾಸಿಂಗೆ ಹೋಪಲೆ ಹೇಳಿದವು, ಕ್ಲಾಸ್ ಮುಟ್ವನ್ನಾರ ಅಜ್ಜ ಹೇಳಿದ್ದದೇ ತಲೆಲಿ. ಕ್ಲಾಸ್ ಎತ್ತಿದ್ದು ಗೊಂತೇ ಆಯ್ದಿಲ್ಲೆ.
ಹೊತ್ತೋಪಗ ಶಾಲೆ ಬಿಟ್ಟು ಮನೆಗೆ ಬಂದರುದೆ, ಅಬ್ಬೆ ಗೋಳಿಬಜೆ ಕೈಲಿ ಮಡುಗಿರುದೇ ಎಂತ ಕೊಶಿಯೂ ಆಯ್ದಿಲ್ಲೆ. ಟಾಮಿ ಎನ್ನ ಕಾಲಿಂಗೆ ಸುತ್ತು ಸುತ್ತು ಬಂತು, ಪೋಕ್ರಿ ಕಟ್ಟಿಗೊಂಡು ಆಡ್ಲೆ “ಬಾ ಬಾ” ಳಿ ಕಾಲು ಕೆರದು ಕೆರದು ದಿನುಗೋಳಿಗೊಂಡಿತ್ತು. “ಟಾಮಿ!”ಳಿ ದುಃಖಲ್ಲಿ ಅದರ ನೋಡಿ ಕೂಗ್ಲೇ ಬಂತು. ಅದನ್ನು ನಮ್ಮಲ್ಲಿಗೆ ಮದುವೆ ಮಾಡಿಯೇ ತಂದು ಬಿಟ್ಟದಾಗಿಕ್ಕೂಳಿ ಗ್ರೇಶಿ ಕಣ್ಣಿಲಿ ನೀರು ಬಂತು. ಕೂಗ್ಲೆ ಬಂದು, ಕಣ್ಣಿಲಿ ಮೂಗಿಲಿ ಅರಿವಲೆ ಶುರುವಾತು.
ಅಜ್ಜಿದೆ ಅಪ್ಪಚ್ಚಿ ಹತ್ರೆ ನಾಡ್ತು ಅವ್ವು ಬತ್ತವಡಾಳಿ ಹೇಳಿದ್ದುದೇ ಕೇಳಿತ್ತು. ಎಲ್ಲರೂ ಎನಗೆ ಗೊಂತಾಗದ್ದ ಹಾಂಗೆ ಎಂತೋ ಮೋಸ ಮಾಡ್ತಾ ಇದ್ದವಾಳಿ ಎನಗೆ ಕಂಡಾಬಟ್ಟೆ ಸಂಶಯ. ಅಂದಿರುಳು ವರಕ್ಕು ಹಿಡಿವಲೆ ಸುಮಾರು ಹೊತ್ತೇ ಹಿಡುದ್ದು. ವರಕ್ಕಿಲಿ ಮದುವೆಲಿ ಹಸರು ಪಾಯಸ ಬಳುಸಿದ ಹಾಂಗೆ, ಹೋಳಿಗೆ ಕಾಯ್ಹಾಲು ತಿಂದ ಹಾಂಗೆ ಕನಸು ಬಿದ್ದು ಎದ್ದಿತ್ತೆ. ಮರುದಿನ ಶಾಲೆಗೆ ಹಾಕುಲಿಪ್ಪ ಅಂಗಿ ಹುಡುಕ್ಕೊಗ ಅತ್ತೆಯ ಮದುವೆಯ ನೀಲಿ ಉದ್ದ ಲಂಗ ಕಂಡಪ್ಪಗ ಎಂತೋ ನೀಲಿ ಎನಗೆ ಇಷ್ಟದ ಬಣ್ಣ ಅಲ್ಲಾಳಿ ಅನ್ಸಿತ್ತು. ಶಾಲೆಲೂ ಹುಷಾರಿತ್ತಿಲ್ಲೆ, ಆಟಕ್ಕೆ ಬಿಟ್ಟಿಪ್ಪಗ ಮುಟ್ಟಾಟಕ್ಕೂ ಹೋಯ್ದಿಲ್ಲೆ, ಡೊಂಕಾಟಕ್ಕೂ ಹೆರಟಿದಿಲ್ಲೆ. ಜೆಗಿಲಿಲಿ ಕಲ್ಲಾಟ ಆಡ್ವವ್ವು ದಿನುಗೋಳಿರುದೆ ಹೋಯ್ದಿಲ್ಲೆ. ಶಾಲೆಂದ ಮನೆಗೆ ಬಪ್ಪಲೆ ಹತ್ತರೆಯೇ ಆದರೂ ಅಂದು ತಡವಾಗಿ ಎತ್ತಿದ್ದು. ಗೆದ್ದೆಗಳ ಮಧ್ಯೆ, ಹುಣಿಲಿ ಆಗಿ ನಡವಗ ಕೆಪ್ಪೆಗ ಒಂದೊಂದಾಗಿ ತುಳುಂಕ್ ತುಳುಂಕೂಳಿ ಹುಣಿಂದ ಗೆದ್ದೆ ನೀರಿಂಗೆ ಹಾರ್ತಾ ಇತ್ತವು – ಡೋಂಕ್ರು ಕೆಪ್ಪೆಗ. ಕೆಪ್ಪೆ ಉಚ್ಚು ತಾಗದ್ದ ಹಾಂಗೆ ಗೆದ್ದೆ ದಾಂಟುದು ಯಾವಾಗಳೂ ಆಟ, ಆದರೆ ಇಂದು ಕೆಪ್ಪೆಗ ಇತ್ತವಾಳಿಯೇ ಕಂಡಿದಿಲ್ಲೆ. ಮನೆ ಹತ್ರೆ ಎತ್ತ್ಯಪ್ಪಗ ಎಲ್ಲರೂ ಮಾತಾಡುದು ಕೇಳ್ತಾ ಇತ್ತು. ಒಂದು ಸ್ವರ ಅದರಲ್ಲಿ ಆನು ಕೇಳ್ಳೆ ಕಾದು ಗೊಂಡಿತ್ತದು, ಓಹ್ ಸುಶೀಲತ್ತೆ ಬೈಂದವು!!!
ಆನು ಶಾಲೆ ಚೀಲ ಏರ್ಸಿಗೊಂಡು ಓಡಿದ್ದರಲ್ಲಿ ಕೆಪ್ಪೆಗ ಬದುಕಿರೆ ಸಾಕೂಳಿ ಗೆದ್ದೆಗೆ ಹಾರಿದವು, ಹವಾಯಿ ಮೆಟ್ಟು ಗೆದ್ದೆ ಕೆಸರಿಲಿ ಅದ್ದಿ ಪಿಚಿಕ್ ಪಿಚಿಕ್ ಮಾಡಿಯೊಂಡು ಲಂಗಕ್ಕೆಲ್ಲ ಕೆಸರು ರಟ್ಸಿದರೂ ಗೊಂತೇ ಆಯ್ದಿಲ್ಲೆ.
ಮನೆ ಬಾಗಿಲು ಎತ್ವಂದ ಮೊದಲೇ ಮೆಟ್ಟಿನ ದೂರಕ್ಕೆ ರಟ್ಟಿಸಿ ತೆಗದು ಒಳಂಗೆ ಓಡಿದೆ. ಸುಶೀಲತ್ತೆಯ ನೋಡಿ “ಯಾವಾಗ ಬಂದದು”ಳಿ ಕಣ್ಣು ಅರಳ್ಸಿಗೊಂಡು ಅವಕ್ಕೆ ಅಂಟಿ ಕೂದೆ. ಮತ್ತೆ ನೆಂಪಾಗಿ ಜೆಂಗಲ್ಲಿ ಅಳಗೆಲಿತ್ತ ಅತ್ತಿರಸ ಎರಡು ತಂದು ಕೊಟ್ಟೆ ಅತ್ತೆಗೆ.
“ನಿನಗಾನು ಎಂತ ತೈಂದೆ ನೋಡು”ಳಿ ಅತ್ತೆ ತೊಟ್ಟೆಂದ ಒಂದು ಗುಲಾಬಿ ಬಣ್ಣದ ಪೇಟೆ ಫ್ರಾಕ್ಕು ತೆಗದಪ್ಪಗ ಭಾರೀ ಕೊಶಿ ಆತು ನೋಡಿ. ತೊಳದಿಕ್ಕಿ ಹಾಕುವಾಳಿ ಅಜ್ಜಿ ಹೇಳಿದ್ದರ ಕೇಳದ್ದೇ ಅಂಬಗಳೇ ಅಂಗಿಯ ಸುರುಕ್ಕೊಂಡೆ. ತಿರುಗಿರೆ ಗಾಳಿ ಹೊಗ್ಗಿ ಬುಗ್ಗೆ ಬಪ್ಪ ಫ್ರಿಲ್ಲು ಅಂಗಿ ಅದು. ಬಣ್ಣದೆ ಅಷ್ಟೇ ಚೆಂದ. ತಿರುಗಿ ತಿರುಗಿ ಕೂಪದು ಏಳುದು, ಪುನಾ ತಿರುಗಿ ತಿರುಗಿ ಕೂಪದು.. ಕೂದಿಕ್ಕಿ ಏಳುವಗ ಮನೆ ಗೋಡೆ ಎಲ್ಲ ತಿರುಗಿಯೊಂಡಿತ್ತು. ಜಾಲಿಂಗೆ ಇಳಿದು ತಿರುಗ್ವಗ ಟಾಮಿ ಎನ್ನೊಟ್ಟಿಂಗೆ ಓಡುತ್ತಾ ಸುತ್ತು ಸುತ್ತು ಬಪ್ಪದು, ಕೂಪಗ ದೂರ ಓಡಿ ತಪ್ಪುಸುದು ನೋಡಿ ಜೋರು ನೆಗೆಯೆನಗೆ.
ತಿರುಗುವ ಮರಂಗಳೊಟ್ಟಿಂಗೆ, ಮಾಡಿನೊಟ್ಟಿಂಗೆ ಎನ್ನ ನೆಗೆದೆ ತಿರುಗುತ್ತಾ ಗೋಡೆಗೊಕ್ಕೆ ಹೆಟ್ಟಿ, ಬೆಶಿನೀರ ಕೊಟ್ಟಗೆ ಒಲೆಗೆ ಹೊಕ್ಕಿ, ತೆಂಗಿನ ಮರಕ್ಕೆ ತಾಗಿ ಎನ್ನತ್ರಂಗೆಯೇ ವಾಪಸ್ ವಾಪಸ್ ಬತ್ತಾ ಇತ್ತು. ಇದರೆಡಕ್ಕಿಲಿ ಅಪ್ಪಚ್ಚಿ “ಮದಿಮ್ಮಾಳು ಮದಿಮ್ಮಾಳು” ಳಿ ಹೇಳಿದ್ದದು ಆ ಹೊತ್ತಿಂಗೆ ಕೇಳದ್ದೇ ಹೋತು.
ಶ್ವೇತಾ ಕಕ್ವೆ , ೨೨ ಮೇ ೨೦೧೯
This work is licensed under a Creative Commons Attribution-NonCommercial-NoDerivatives 4.0 International License.
ತುಂಬಾ ಲಾಯಿಕ ಇದ್ದು. ಸಣ್ಣ ಕೂಸಿನ ಮುಗ್ದ ಮನಸ್ಸಿನ ಒಳನೋಟ.
ಓದಿ ಮೆಚ್ಚಿದ್ದು ಖುಷಿಯಾತು.. 🙂 ಧನ್ಯವಾದಂಗ..
Super Shwethakka 😍
Thank you 🙂
ನಿಮ್ಮ ಕಥೆಯನ್ನು ನಾನು ಸಾಕ್ಷೀಭೂತವಾಗಿ ಅನುಭವಿಸಿದ ಹಾಗಾಯ್ತು ನೋಡಿ 🙂
ಚೆಂದದ ಭಾಷೆ, ಬರವಣಿಗೆ !! ಮುಂದುವರೆಸಿ…
ಧನ್ಯವಾದಗಳು…