ಕುರುಡನ ಜಯ

ನಾರಾಯಣಂ ನಮಸ್ಕೃತ್ಯ ನರಂ ಚೈವ ನರೋತ್ತಮಂ |
ದೇವೀಂ ಸರಸ್ವತೀಂ ವ್ಯಾಸಂ ತತೋ ಜಯಮುದೀರಯೇತ್ ||

ಧೃತರಾಷ್ಟ್ರನ ಹತಾಶೆಯ ಹಪಹಪದೊಂದಿಗೇ ಹರಿಯದೊಡಗುತ್ತದೆ ಮಹಾಕವಿ ಶ್ರೀವೇದವ್ಯಾಸರ ಮಹಾಭಾರತ ಮಹಾಕಾವ್ಯ. ಮೊದಲ ನೂರರಷ್ಟು ಶ್ಲೋಕಗಳು ಪೀಠಿಕೆ. ಇದರಲ್ಲಿ ಸೂತ ಪುರಾಣಿಕರು ನೈಮಿಷಾರಣ್ಯದಲ್ಲಿ ಯಜ್ಞಾನಂತರ ವಿಶ್ರಮಿಸುತ್ತಿದ್ದಾಗ, ಮೈಯೆಲ್ಲಾ ಕಿವಿಯಾಗಿ ಕಥೆ ಕೇಳಲುತ್ಸುಕರಾಗಿದ್ದ ತಮ್ಮ ಶಿಷ್ಯರಿಗೆ ಮಹಾಭಾರತದ ಕಥೆ ಹೇಳಲು ಆರಂಭಿಸಿದರು ಎನ್ನುವ ಪ್ರಸ್ತಾವನೆ ಬರುತ್ತದೆ. ಹಾಗೂ ಕಥೆಯ ಹಿನ್ನೆಲೆಯನ್ನೂ ಸ್ವಲ್ಪ ತಿಳಿಸುತ್ತದೆ1ದುರ್ಯೋಧನನ ಧೂರ್ತತನ, ಧರ್ಮರಾಜನ ಧರ್ಮಭೀರುತನವೂ ಪರಿಚಯವಾಗುತ್ತದೆ. . ಪೀಠಿಕೆ ಆದ ಕೂಡಲೇ ಕಥೆಯು ಓದುಗನನ್ನು ಛಂಗನೆ ಮಹಾಭಾರತಯುದ್ಧದ ಕೊನೆಯ ದಿನಗಳಿಗೆ ಎತ್ತೊಯ್ಯುತ್ತದೆ!

ದುರ್ಯೋಧನ ತೊಡೆಮುರಿದು ಸತ್ತಾಗಿದೆ, 18 ಅಕ್ಷೋಹಿಣಿ ಸೈನ್ಯದಲ್ಲಿ ಕೌರವರ ಕಡೆ ಮೂರೇ ಯೋಧರು ಉಳಿದಿದ್ದಾರೆ2 ಷ್ಟಂ ಯುದ್ಧೇ ದಶ ಶೇಷಾಃ ಶ್ರುತಾ ಮೇ; ತ್ರಯೋsಸ್ಮಾಕಂ ಪಾಂಡವಾನಾಂ ಚ ಸಪ್ತ |
ದ್ವ್ಯೂನಾ ವಿಂಶತಿರಾಹತಾಕ್ಷೌಹಿಣೀನಾಂ; ತಸ್ಮಿನ್ಸಂಗ್ರಾಮೇ ವಿಗ್ರಹೇ ಕ್ಷತ್ರಿಯಾಣಾಂ ||ಆ. ಪ. 158||
, ಅಶ್ವತ್ಥಾಮ, ಕೃಪಾಚಾರ್ಯ ಮತ್ತು ಕೃತವರ್ಮ. ಪಾಂಡವರ ಕಡೆ ಏಳು. ಪಂಚಪಾಂಡವರು, ಕೃಷ್ಣ, ಸಾತ್ಯಕಿ . ಇಂಥಾ ಸಂದರ್ಭದಲ್ಲಿ ಧೃತರಾಷ್ಟ್ರ ಸಂಜಯನಲ್ಲಿ ತನ್ನ ಹತಾಶೆ ಇಂದಿನದಲ್ಲವೆಂದೂ, ತನಗೆ ಮೊದಲೇ ಈ ದುರ್ದಿನವನ್ನು ಕಾಣುವೆನೆಂಬ ಕಳ್ಳ ಭಯವಿತ್ತು ಎಂದೂ ಬಿಚ್ಚಿಡುತ್ತಾನೆ. ಸುಮಾರು 50ಕ್ಕೂ ಮೇಲ್ಪಟ್ಟು 3critical edition ನಲ್ಲಿ 56, ಆದಿಪರ್ವ 102 to 158.
southern recension ಕುಂಭಕೋಣಂ edition ನಲ್ಲಿ 70 ಶ್ಲೋಕಗಳು ಅದಿಪರ್ವ 171 to 239.
ಭಾರತ ದರ್ಶನ ಪ್ರಕಟಿಸಿರುವ 32 ಸಂಪುಟಗಳಿರುವ ಕನ್ನಡ ಅನುವಾದದಲ್ಲಿ 68 ಶ್ಲೋಕಗಳಿವೆ ಆ. ಪ. 150 to 218
ಶ್ಲೋಕಗಳಲ್ಲಿ, ಶ್ಲೋಕಕ್ಕೊಂದು ಪ್ರಸಂಗದಂತೆ, ತನ್ನ ಪರಾಜಯದ ಪೂರ್ವಸೂಚನೆ ಸಿಕ್ಕಿದ ಪ್ರಕರಣಗಳನ್ನೆಲ್ಲಾ ನೆನಪಿಸಿಕೊಳ್ಳುತ್ತಾ ಪರಿತಪಿಸುತ್ತಾನೆ ಧೃತರಾಷ್ಟ್ರ. ಈ ಮೂಲಕ ಮಹಾಭಾರತದ ಕಥೆಯನ್ನು ಸಂಕ್ಷಿಪ್ತವಾಗಿ ಹೇಳಿಯೇ ಬಿಡುತ್ತಾನೆ! ಇದಿಷ್ಟೂ ಅನುಕ್ರಮಣೀ ಪರ್ವ, ಆದಿಪರ್ವದ ಮೊದಲನೇ ಅಧ್ಯಾಯ. ಮಹಾಭಾರತದ ಪರಿವಿಡಿ (table of contents). ಯಾವ ಪುಸ್ತಕಕ್ಕೂ ಇಷ್ಟು ರಸವತ್ತಾದ, ಧ್ವನಿಪೂರ್ಣ ಪರಿವಿಡಿ ಇದ್ದಿರಲಾರದು. ಪುಸ್ತಕಗಳಿಲ್ಲದ, ಬರವಣಿಗೆಯೇ ದುಸ್ತರವಾಗಿ ಕಾವ್ಯವನ್ನು ಕಂಠಸ್ಥವಾಗಿಯೇ ಪ್ರಸರಿಸಬೇಕಾಗಿದ್ದ ಸಮಯದಲ್ಲಿ ಪರಿವಿಡಿಯೂ ಕಾವ್ಯರೂಪದಲ್ಲೇ ಇರಬೇಕಲ್ಲವೇ? ಬರಿಯ ಅನುಕ್ರಮಣಿಕೆಯನ್ನು ಓದಿಕೊಂಡರೇ ಪುಣ್ಯಪ್ರಾಪ್ತಿಯಾಗುತ್ತದೆ ಎನ್ನುವ ಫಲಶ್ರುತಿಯೂ ಇದೆ. ಈ ವಿಶೇಷವಾದ ಪರಿವಿಡಿಯಿಂದ ವ್ಯಾಸರ ಮುಂದಾಲೋಚನೆ ಹಾಗೂ ಕಾವ್ಯಶಿಲ್ಪದ ಸಮಗ್ರದೃಷ್ಟಿಯು (vision) ನಮಗೆ ವೇದ್ಯವಾಗುತ್ತದೆ.

ಇಡಿಯ ಭಾರತವನ್ನು ಐವತ್ತು ಶ್ಲೋಕಗಳಲ್ಲಿ ಹೇಳಿಬಿಟ್ಟರೆ suspense-ನ ಗತಿಯೇನು? ಭಾರತದ ರಸವಿರುವುದು ಅದರ ಪ್ರಪಂಚದೊಳಗಿನ ಪಾತ್ರಗಳ ಆಟದಲ್ಲಿ, ಸಂದರ್ಭೋಚಿತ ಮಾತುಗಳಲ್ಲಿ, ಉದಾತ್ತ ದರ್ಶನದಲ್ಲಿ. ದುರ್ಯೋಧನ ಸತ್ತನೆಂದು ಮೊದಲಲ್ಲೇ ತಿಳಿಸುವಷ್ಟು ವಿಶ್ವಾಸ ವ್ಯಾಸರಿಗೆ ಭಾರತದ ಕಥೆಯ ಮೇಲೆ. ಭಾರತದ ಕಥೆ, ಉಪಕಥೆಗಳಲ್ಲಿ ಎಷ್ಟು ಜೀವನದರ್ಶನ ಗಿಟ್ಟುತ್ತದೆಯೆಂದರೆ, ಆದಿಪರ್ವದ ಕೌರವ-ಪಾಂಡವ ಪೂರ್ವ ಪಾತ್ರಗಳೇ ಸಾಕು ಒಂದು ಬದುಕಿಗಾಗುವಷ್ಟು ಮೌಲ್ಯಗಳನ್ನು ತಿಳಿಸಲು. ತಿಳಿಯುವುದು ಮಾತ್ರವಲ್ಲ, ಓದುಗ ಎಷ್ಟಾಗುತ್ತದೋ ಅಷ್ಟು ಭಾರತವನ್ನು ಬದುಕಬೇಕು ಎಂಬುದು ವ್ಯಾಸರ ಇಚ್ಛೆ ಇದ್ದಿರಬೇಕು. ಅದಕ್ಕೆ ಕೊನೆಯನ್ನು ಮೊದಲಿಗೇ ಕೊಟ್ಟು ಬುಡಮೇಲಾಗಿ ಕಾಣುತ್ತಿದೆ ಮಹಾಭಾರತವೆಂಬ ಬೃಹತ್ ಅಶ್ವತ್ಥ4 ಊರ್ಧ್ವಮೂಲಮಧಃ ಶಾಖಮಶ್ವತ್ಥಂ ಪ್ರಾಹುರವ್ಯಯಂ|
ಛಂದಾಂಸಿ ಯಸ್ಯ ಪರ್ಣಾನಿ ಯಸ್ತಂ ವೇದ ಸ ವೇದವಿತ್||
.

ಅನುಕ್ರಮಣೀ ಪರ್ವವು ಪ್ರಪಂಚದ ಮೊದಲ flash back ಇದ್ದಿರಬೇಕು. ಇದರಲ್ಲಿ ಬಹುಪಾಲನ್ನು ಧೃತರಾಷ್ಟ್ರನ ಜೀವನದ ಹಿನ್ನೋಟವಾಗಿ ಅವನ ಬಾಯಲ್ಲಿಯೇ ವ್ಯಾಸರು ಹೇಳಿಸಿದ್ದಾರೆ. ಕಣ್ಣಿಲ್ಲದವನ ನೋಟಕ್ಕೆ ಭಾರತ ಹೀಗೆ ಕಂಡೀತು, ಅಪೂರ್ಣ ಚಿತ್ರ ಎಂಬ ಧ್ವನಿಯೆಂಬುದರಲ್ಲಿ ಸಂಶಯವಿಲ್ಲ. ತಾನು, ತನ್ನವರು ಮಾಡಿದ ಅನಾಚಾರಗಳನ್ನು ಲೆಕ್ಕ ಹಾಕುತ್ತಾ ಬಂದಾಗ ಪಶ್ಚಾತ್ತಾಪ ಪಟ್ಟನೋ ಏನೋ. ಕುರುಡನಿಗೆ ತಡವಾಗಿಯಾದರೂ ವಿವೇಕ ಬಂತು, ಕಣ್ಣಿದ್ದೋ ಇಲ್ಲದೇಯೋ ಓದುವವನಿಗೆ ಕಿವಿಮಾತು -“ಮುಂದೆ ಓದಲಿರುವುದು ಕಣ್ಣು ತೆರೆಸುವ ವಸ್ತು”.

ಧೃತರಾಷ್ಟ್ರನ ಅನುಕ್ರಮಣಿಕೆಯ ಪ್ರತಿಯೊಂದು ಶ್ಲೋಕವೂ ಯದಾ ಶ್ರೌಷಂ, (ಇದನ್ನು ಕೇಳಿದಾಗ…) ಎಂದಾರಂಭವಾಗಿ …ತದಾ ನಾಶಂಸೇ ವಿಜಯಾಯ ಸಂಜಯ (….ಗೆಲ್ಲುವ ಆಸೆ ಕೈಬಿಟ್ಟೆ) ಎಂದು ಮುಗಿಯುತ್ತದೆ. ಪ್ರತೀ ಶ್ಲೋಕದಲ್ಲಿಯೂ ತನ್ನ ಕಣ್ಣುಕುರುಡುತನವನ್ನು ಪರೋಕ್ಷವಾಗಿ ಹಳಿಯುತ್ತಾನೆ ಧೃತರಾಷ್ಟ್ರ, ಅವನು ಹೇಳಿದ್ದನ್ನು ಕೇಳುವುದು ಮಾತ್ರ, ಏನನ್ನೂ ಕಾಣಲಿಲ್ಲ, ಹೇಳಿದಂತೆ ಕೇಳಿದ, ಪರಾಂಬರಿಸಲೂ ಇಲ್ಲ. ಇಂದು, ಸಂಜಯನ ಮುಂದೆ, ಕೊನೆಗೂ ಸತ್ಯಕ್ಕೆ ಶರಣಾಗುತ್ತಿದ್ದಾನೆ ದುರ್ಯೋಧನನೆಂಬ ದುರ್ಗುಣದ ಹೆಮ್ಮರದ ಬೇರಾಗಿದ್ದ5ದುರ್ಯೋಧನೋ ಮನ್ಯುಮಯೋ ಮಹಾಧ್ರುಮಃ ಸ್ಕನ್ದಃ ಕರ್ಣಃ ಶಕುನಿಸ್ತಸ್ಯ ಶಾಖಾಃ |
ದುಃಶಾಸನಃ ಪುಷ್ಪಫಲೇ ಸವೃದ್ಧೇ ಮೂಲಂ ರಾಜಾ ಧೃತರಾಷ್ಟ್ರೋsಮನಿಷೀ || ಅ. ಪ. 65||
ಧೃತರಾಷ್ಟ್ರ, ಬುದ್ಧಿಕುರುಡ.

ಧೃತರಾಷ್ಟ್ರನು ದ್ರೌಪದೀ ಸ್ವಯಂವರದಿಂದ ಪ್ರಾರಂಭಿಸಿ, ಉತ್ತರೆಯ ಗರ್ಭಪಾತ ಮಾಡುವ ವಿಫಲ ಪ್ರಯತ್ನದೊಂದಿಗೆ ಮಾತು ಕೊನೆಗೊಳಿಸುತ್ತಾನೆ. ಪಾಂಡವ ಸ್ತ್ರೀಯರ ಕೆಚ್ಚೇ ತನ್ನ ಕುಲವನ್ನು ಸುಟ್ಟ ಕಿಚ್ಚೆಂಬುದು ಹಚ್ಚ ಹಸಿರಾಗಿದೆ ಅವನ ತಲೆಯಲ್ಲಿ. ದ್ರೌಪದಿ ಕೌರವನನ್ನು ವರಿಸಿದ್ದರೆ ಪಾಂಡವ ಸೈನ್ಯ 7 ಅಕ್ಷೋಹಿಣಿ ಬಿಡಿ 70 ಕ್ಕೂ ಏರುತ್ತಿರಲಿಲ್ಲ ಎಂಬ ಲೆಕ್ಕಾಚಾರವಿದ್ದಿರಬಹುದು. ಏನೇ ಇರಲಿ. ವ್ಯಾಸರು ಈ ಇಬ್ಬರು ಹೆಣ್ಣುಮಕ್ಕಳನ್ನು ಧೃತರಾಷ್ಟ್ರರೋದನದ ಆಚೀಚೆ ಗೂಟ ಇಟ್ಟು ಕಟ್ಟಿದ್ದು ಕಾಕತಾಳೀಯವಲ್ಲ. ಮಹಾಭಾರತ ಗ್ರಂಥದ ಸಂಪುಟಗಳನ್ನು ಬರೆದು ಜೋಡಿಸುತ್ತಾ ಹೋದಾಗ, ಅವುಗಳು ತಮ್ಮ ತಮ್ಮ ಭಾರದಲ್ಲಿ ಆಯತಪ್ಪಿ ಉರುಳದಂತೆ, ಸರತಿ ತಪ್ಪಿಸದಂತೆ,ದಾರಿ ತಪ್ಪದಂತೆ ಒಂದು ಕಡೆ ಪಾಂಚಾಲಿಯನ್ನೂ, ಇನ್ನೊಂದು ಕಡೆ ಉತ್ತರೆಯನ್ನೂ ನಿಲ್ಲಿಸಿದ್ದಾರೆ (bookends). ಪಾಂಚಾಲಿಯ ಅವಮಾನದ ಕಿಚ್ಚು ಪ್ರಜ್ವಲಿಸಿ, ಕೊನೆಯವರೆಗೂ ಬಿಸಿ ಬಿಡದೆ ಪಾಂಡವರ ಸಂಕಲ್ಪದ ಹಿಂದಿನ ಶಕ್ತಿಯಾಗಿ ನಿಂತಿತು. ಉತ್ತರೆಯ ಗರ್ಭದಲ್ಲಿ ಇನ್ನೂ ಹುಟ್ಟದ ಪರೀಕ್ಷಿತ ಆ ಸಂಕಲ್ಪದ ಉತ್ತರಾಧಿಕಾರಿ. ಉತ್ತರೆಗೆ ಪರೀಕ್ಷಿತನಲ್ಲದೇ ಬೇರೆ ಇರವಿಲ್ಲ, ಅವನೇ ಜೀವನಧ್ಯೇಯ. ಉತ್ತರೆಯ ಗರ್ಭದಲಿ್ಲತ್ತು ಪಾಂಡವರ ಆಸೆ ಭರವಸೆ ಭವಿಷ್ಯ. ಪಾಂಚಾಲೀ ಸ್ವಯಂವರದಲ್ಲಿ ಧಾರ್ತರಾಷ್ಟ್ರರಿಗಾದ ಸೋಲು, ಪಾಂಚಾಲಿಯ ಮುಡಿ ಬಿಚ್ಚಿಸಿ, ಕುರುಕುಲಕ್ಕೇ ಕಿಚ್ಚು ಹೊತ್ತಿಸಿ ಉತ್ತರೆಯ ಬದುಕಿನ ಧ್ಯೇಯವನ್ನೇ ಭಸ್ಮ ಮಾಡಲು ಬಂದಿತು.

Bookends

ಯದಾಶ್ರೌಷಂ ಧನುರಾಯಮ್ಯ ಚಿತ್ರಂ; ವಿದ್ಧಂ ಲಕ್ಷ್ಯಂ ಪಾತಿತಾಂ ವೈ ಪೃಥಿವ್ಯಾಂ|
ಕೃಷ್ಣಾಂ ಹೃತಾಂ ಪಶ್ಯತಾಂ ಸರ್ವರಾಜ್ಞಾಂ ತದಾ ನಾಶಂಸೇ ವಿಜಯಾಯ ಸಂಜಯ ||ಆ. ಪ. 102 ||

ವಿಚಿತ್ರ ವೇಷಗಳಲ್ಲಿ ಬಂದು, ಪಣವನ್ನು ಗೆದ್ದು, ಸರ್ವ ರಾಜರ ಮುಂದೆ ಕೃಷ್ಣೆ-ದ್ರೌಪದಿಯನ್ನು ಕರೆದುಕೊಂಡು ಹೋದರು ಎಂಬುದನ್ನು ಕೇಳಿದಾಗ ಜಯಗಳಿಸುವ ಆಸೆಯನ್ನು ಬಿಟ್ಟೆ. ಎಂಬಲ್ಲಿಂದ ಮೊದಲ್ಗೊಂಡು….

…..
…..
ಯದಾಶ್ರೌಷಂ ದ್ರೋಣಪುತ್ರೇಣ ಗರ್ಭೇ ವೈರಾಟ್ಯಾ ವೈಪಾತ್ಯಮಾನೇ ಮಹಾಸ್ತ್ರೇ|
ದ್ವೈಪಾಯನಃ ಕೇಶವೋ ದ್ರೋಣಪುತ್ರಂ ಪರಸ್ಪರೇಣಾಭಿಶಾಪೈಃ ಶಶಾಪ ||ಆ. ಪ. 156 ||

ಅಶ್ವತ್ಥಾಮ ಉತ್ತರೆಯ ಗರ್ಭಪಾತ ಮಾಡಲು ಐಷೀಕಾಸ್ತ್ರವನ್ನು ಪ್ರಯೋಗಿಸುತ್ತಾನೆ ( ಪ್ರತ್ಯಸ್ತ್ರದಿಂದ ನಿವಾರಿಸಿರುತ್ತಾನೆ ಅರ್ಜುನ). ಇದನ್ನು ಕಂಡ ವ್ಯಾಸರೂ ಶ್ರೀಕೃಷ್ಣನೂ ಅಶ್ವತ್ಥಾಮನಿಗೆ ಶಪಿಸಿದರು ಎಂದು ಕೇಳಿದಾಗ ತನ್ನ ವಿಜಯದ ಆಸೆ ಸಂಪೂರ್ಣವಾಗಿ ಪರಿಸಮಾಪ್ತಿಯಾಯಿತು…. ಎಂಬಲ್ಲಿಗೆ ಪ್ರಕರಣಗಳ ಪಟ್ಟಿ ಮುಗಿಯುತ್ತದೆ (ಅಧ್ಯಾಯ ಇನ್ನೂ ಮುಂದಕ್ಕೆ ಹೋಗುತ್ತದೆ).

ಕುರುಡನ ಜಯವೆಂಬ ಶೀರ್ಷಿಕೆಗೆ ಬರೋಣ. ಅನುಕ್ರಮಣೀ ಪರ್ವದಲ್ಲಿಡೀ ಅಧರ್ಮಿಯಾದ ಧೃತರಾಷ್ಟ್ರನ ಸೋಲು ಚಿತ್ರಿತವಾಗಿದೆ, ಜಯವೆಲ್ಲಿ? ಧರ್ಮಪ್ರಜ್ಞೆ ಮೂಡಿ, ಪಶ್ಚಾತ್ತಾಪದ ಕುರುಹು 6ಕುರುಹು ಅಷ್ಟೇ, ಕಬ್ಬಿಣದ ಭೀಮನನ್ನು ಅಪ್ಪಿ ಪುಡಿಗಟ್ಟುವ ಪ್ರಸಂಗವಿನ್ನೂ ಬರಬೇಕಷ್ಟೆ ಕಂಡದ್ದರಿಂದ ಕುರುಡನ ಜಯಕ್ಕೆ ಹಾದಿಯಾಯಿತೆನ್ನಬಹುದೇನೋ. ಅದೇನೇ ಇರಲಿ. ಮಹಾಭಾರತಕ್ಕೆ ಜಯ ಎಂಬ ಹೆಸರೂ ಇದೆ! ಆದುದರಿಂದಲೇ ಮಹಾಭಾರತದ ಪ್ರಾರ್ಥನಾ ಶ್ಲೋಕದಲ್ಲಿ “… ತತೋ ಜಯಂ ಉದೀರಯೇತ್” ಎಂದಿದೆ 7ನಾರಾಯಣ, ಅರ್ಜುನ, ಕೃಷ್ಣ, ಸರಸ್ವತೀ ವ್ಯಾಸರನ್ನು ನಮಸ್ಕರಿಸಿದ ನಂತರ ಜಯವನ್ನು (ಮಹಾಭಾರತವನ್ನು) ಓದಬೇಕು. critical edition ನಲ್ಲಿ ವ್ಯಾಸಂ ಬದಲು ಚೈವ ಎಂದು ಇದೆ. ಅನುಕ್ರಮಣೀ ಪರ್ವವು ಧೃತರಾಷ್ಟ್ರದೃಷ್ಟಿಕೋನದ8ಮಕ್ಕಳ, ರಾಜ್ಯದ ಮೇಲಿನ ಮೋಹದಿಂದ ಪ್ರೇರಿತವಾದ ಮೌಲ್ಯಗಳ ಸೋಲು, ಆದರೆ ಧೃತರಾಷ್ಟ್ರನ ದೃಷ್ಟಿಗೆ ಕಾಣಿಸಿದಂಥಾ ಜಯ, ಕುರುಡನ ಜಯ.

-ಗಣೇಶಕೃಷ್ಣ ಶಂಕರತೋಟ
9 ಜೂನ್ 2020


ಹಿನ್ನುಡಿ
ಮಹಾಭಾರತವನ್ನು ಯಾರು ಯಾರಿಗೆ ಹೇಳಿದರು ಎಂಬುದರಲ್ಲೂ ಬಹಳ ಸ್ವಾರಸ್ಯವಿದೆ
1a. ವಕ್ರತುಂಡ ಗಣಪತಿ ಅರ್ಥಮಾಡಿಕೊಂಡು ಭಾರತ ಬರೆದನು = [ ]
1b. ಗಣಪತಿಗೆ ವ್ಯಾಸರು ಕಾವ್ಯವನ್ನು ಹೇಳಿದರು9dictation ಮಾಡಿದರು = { }
3. ವ್ಯಾಸರು ಹೇಳಿದ್ದು, ಸೂತ ಪುರಾಣಿಕರೆನಿಸಿದ ಉಗ್ರಶ್ರವಃ ಮಹರ್ಷಿಗಳು ಶೌನಕಾದಿಗಳಿಗೆ ವರ್ಣಿಸಿದ್ದನ್ನು. = ( )
4. ಸೂತರು ವರ್ಣಿಸಿದ್ದು, ವೈಶಂಪಾಯನರು ಜನಮೇಜಯನಿಗೆ ಸರ್ಪಯಾಗದ ಸಮಯದಲ್ಲಿ ಕಥಿಸಿದ್ದನ್ನು = <>
5. ವೈಶಂಪಾಯನರು ಕಥಿಸಿದ್ದು, ವ್ಯಾಸರೇ ಮೊದಲೊಮ್ಮೆ ತಮ್ಮ ಶಿಷ್ಯಂದಿರಿಗೆ ಉಪದೇಶಿಸಿದ್ದನ್ನು = / /

ನಮಗೆ ದೊರಕುವ ಗ್ರಂಥ = [ { ( < /ಮಹಾಭಾರತದ ಕಥೆಗಳು/ > ) } ]

ಇನ್ನು / / ರ ಒಳಗೆ ನಮಗೆ ಹಲವು ಕಥನ-ಗಳು ಸಿಗುತ್ತವೆ
1. ಮೇಲ್ಕಂಡ ಧೃತರಾಷ್ಟ್ರ ಹೇಳಿದ ಅನುಕ್ರಮಣಿಕೆ ಮೊದಲಾದ ಹಲವು ಉಪಕಥೆಗಳು = UU
2. ಸಂಜಯ ಧೃತರಾಷ್ಟ್ರನಿಗೆ ಹೇಳಿದ ಕುರುಕ್ಷೇತ್ರ ಯುದ್ಧದ ವರ್ಣನೆ = SS
3. ಅದರೊಳಗೆ ಕೃಷ್ಣ ಅರ್ಜುನನಿಗೆ ಹೇಳಿದ ಭಗವದ್ಗೀತೆ = GG

ಹೀಗೆ [ { ( < /UU…S-GG-S / > ) } ] ಒಂದರೊಳಗೊಂದರೊಳಗೊಂದು……


ಭಾರತ ದರ್ಶನ ಪ್ರಕಾಶನದಿಂದ ಪ್ರಕಟವಾದ ಮಹಾಭಾರತದ ಪುಸ್ತಕಗಳು 32 ಸಂಪುಟಗಳಲ್ಲಿ ಬಂದಿವೆ. ಕೇವಲ Rs3200/-. ಕೊಂಡು ಓದಿರಿ, ಪ್ರಕಾಶಕರ ಸಂಪರ್ಕ ಮೇಲಿದೆ


[1] ದುರ್ಯೋಧನನ ಧೂರ್ತತನ, ಧರ್ಮರಾಜನ ಧರ್ಮಭೀರುತನದ ಪರಿಚಯವಾಗುತ್ತದೆ.

[2] ಕಷ್ಟಂ ಯುದ್ಧೇ ದಶ ಶೇಷಾಃ ಶ್ರುತಾ ಮೇ; ತ್ರಯೋsಸ್ಮಾಕಂ ಪಾಂಡವಾನಾಂ ಚ ಸಪ್ತ |
ದ್ವ್ಯೂನಾ ವಿಂಶತಿರಾಹತಾಕ್ಷೌಹಿಣೀನಾಂ; ತಸ್ಮಿನ್ಸಂಗ್ರಾಮೇ ವಿಗ್ರಹೇ ಕ್ಷತ್ರಿಯಾಣಾಂ ||ಆ. ಪ. 158||


[3] critical edition ನಲ್ಲಿ 56, ಆದಿಪರ್ವ 102 to 158.
southern recension ಕುಂಭಕೋಣಂ edition ನಲ್ಲಿ 70 ಶ್ಲೋಕಗಳು ಅದಿಪರ್ವ 171 to 239.
ಭಾರತ ದರ್ಶನ ಪ್ರಕಟಿಸಿರುವ 32 ಸಂಪುಟಗಳಿರುವ ಕನ್ನಡ ಅನುವಾದದಲ್ಲಿ 68 ಶ್ಲೋಕಗಳಿವೆ ಆ. ಪ. 150 to 218

[4] ದುರ್ಯೋಧನೋ ಮನ್ಯುಮಯೋ ಮಹಾಧ್ರುಮಃ ಸ್ಕನ್ದಃ ಕರ್ಣಃ ಶಕುನಿಸ್ತಸ್ಯ ಶಾಖಾಃ |
ದುಃಶಾಸನಃ ಪುಷ್ಪಫಲೇ ಸವೃದ್ಧೇ ಮೂಲಂ ರಾಜಾ ಧೃತರಾಷ್ಟ್ರೋsಮನಿಷೀ || ಅ. ಪ. 65||

[5] ಕುರುಹು ಅಷ್ಟೇ, ಕಬ್ಬಿಣದ ಭೀಮನನ್ನು ಅಪ್ಪಿ ಪುಡಿಗಟ್ಟುವ ಪ್ರಸಂಗವಿನ್ನೂ ಬರಬೇಕಷ್ಟೆ

[6] ನಾರಾಯಣ, ಅರ್ಜುನ, ಕೃಷ್ಣ, ಸರಸ್ವತೀ ವ್ಯಾಸರನ್ನು ನಮಸ್ಕರಿಸಿ ಜಯವನ್ನು (ಭಾರತವನ್ನು) ಓದಬೇಕು. critical edition ನಲ್ಲಿ ವ್ಯಾಸಂ ಬದಲು ಚೈವ ಎಂದು ಇದೆ.

[7] ಮಕ್ಕಳ, ರಾಜ್ಯದ ಮೇಲಿನ ಮೋಹದಿಂದ ಪ್ರೇರಿತವಾದ ಮೌಲ್ಯಗಳ

Creative Commons License
This work is licensed under a Creative Commons Attribution-NonCommercial-NoDerivatives 4.0 International License.

I tweet @ganeshkrishna

One Reply to “ಕುರುಡನ ಜಯ”

Leave a Reply

Your email address will not be published. Required fields are marked *