ನಮ್ಮ ಕಡೆ(ಎಲ್ಲಾ ಕಡೆ) ಕ್ಷೌರ ಮಾಡಿ ಬಂದ ಮೇಲೆ ಸ್ನಾನ ಮಾಡುವ ತನಕ ಮೈಲಿಗೆ ಅಂತ ಲೆಕ್ಕ. ಅವರನ್ನು ಯಾರೂ ಮುಟ್ಟಲಿಕ್ಕೆ ಇಲ್ಲ, ಅವರೂ ಯಾರನ್ನೂ, ಯಾವುದನ್ನೂ ಮುಟ್ಟುವ ಹಾಗಿಲ್ಲ. ಏನನ್ನೂ ಕುಡಿಯುವ ತಿನ್ನುವ ಹಾಗಿಲ್ಲ. ಅವರುಟ್ಟ ಬಟ್ಟೆಯನ್ನು ಅವರೇ ತೊಳೆದು, ಮಿಂದು ಬರುವವರೆಗೆ ಅವರು ಮೈಲಿಗೆಯೇ.
ನಾವು ಚಿಕ್ಕವರಿದ್ದಾಗ ಯಾಕೆ ಕ್ಷೌರ ಮಾಡಿಸಿ ಬಂದವರನ್ನು ಮುಟ್ಟಬಾರದು ಎಂದು ಕೇಳುವುದಕ್ಕೆ “ಅವರು ಕಾಕೆ(ಕಾಗೆ)” ಹಾಗಾಗಿ ಮುಟ್ಟಬೇಡಿ ಅಂತ ಹೇಳ್ತಾ ಇದ್ದರು. ನಾವೆಲ್ಲ ಅಜ್ಜ, ಅಪ್ಪ, ಚಿಕ್ಕಪ್ಪಂದ್ರು ಕ್ಷೌರ ಮಾಡಿಸಿ ವಾಪಸ್ ಬರಲು ಕಾಯ್ತಾ ಕೂತುಕೊಳ್ಳುದು, ಅವರು ಬಂದಾಗ “ನೀವು ಕಾಗೆ, ನೀವು ಕಾಗೆ ” ಅಂತ ಹೇಳುತ್ತಾ ಮುಟ್ಟುತ್ತೇವೆ ಮುಟ್ಟುತ್ತೇವೆ ಅಂತ ಅವರನ್ನು ಹೆದರಿಸಿ ಅಟ್ಟಿಸಿಕೊಂಡು ಆಟ ಆಡಿಸುದು ಒಂದು ಮೋಜಿನ ಸಂಗತಿ. ಈಗಲೂ ಅಮೇರಿಕದ ಮನೆಯಲ್ಲೂ ಮೈಲಿಗೆ ಸಂಪ್ರದಾಯ ಹಾಗೆಯೇ ಉಳಿಸಿಕೊಂಡಿದ್ದೇವೆ.
ಮಕ್ಕಳ ಕೂದಲು ಸಣ್ಣ ಮಾಡಿದ ಮೇಲೆ(ನಾನೇ ಕ್ಷೌರಿಕೆ) ಎಲ್ಲರೂ ಕಾಗೆಗಳೇ ಸ್ನಾನ ಮಾಡುವ ತನಕ.
ಈಗ ಗಂಡಸರ ಕ್ಷೌರದ ಹಾಗೆಯೇ ಹೆಣ್ಮಕ್ಕಳ “ಹುಬ್ಬು ಕಟಿಂಗ್” ಇದೆ. ಆದರೆ ಹುಬ್ಬು ಕಟಿಂಗ್ ಆದಮೇಲೆ ಹೆಣ್ಮಕ್ಕಳು ಚೆಂದದ ‘ಹಂಸ’ ಆಗುದು ಮಾತ್ರ ಇಲ್ಲಿ ವಿಶೇಷ!
ಮೈಲಿಗೆ ಅನ್ನುವುದನ್ನು ಅಪಾರ್ಥಮಾಡಿಕೊಂಡವರೇ ಜ್ಯಾಸ್ತಿ. ನಮ್ಮ ಪೂರ್ವಿಕರು ಕಲಿಸಿ ಕೊಟ್ಟ ಎಷ್ಟೋ ಆಚಾರಗಳು, ವಿಚಾರಗಳು ಬದುಕಿಗೆ ಪೂರಕವಾಗಿದೆ, ಇದನ್ನು ಬಳವಳಿ ಪಡೆದ ನಾವು ಪುಣ್ಯವಂತರೇ ಹೌದು.
ಕ್ಷೌರ ಮಾಡಿದ ಕೂದಲಿನ ಚಿಕ್ಕ ತುಂಡೊಂದು ತಂತಿಯ ಹಾಗೆ ಮಗಳ ಕೈಗೆ ಚುಚ್ಚಿ ಕುಳಿತು ತೆಗೆಯಲು ಸಾಹಸ ಪಟ್ಟಾಗಲೇ ಕ್ಷೌರದ ನಂತರದ ಮೈಲಿಗೆಯ ಆಚರಣೆ ಮೇಲೆ ಇನ್ನಷ್ಟು ಗೌರವ ಬಂದಿತ್ತು.
ಸಯನ್ಸು ಕಲಿತವರೆಂದು ನಾವು ಆಚರಿಸದ ಅದೆಷ್ಟೋ ವಿಷಯಗಳನ್ನು ಸಯನ್ಸೇ ಪುಷ್ಟೀಕರಿಸಿದಾಗ, ಹೆಮ್ಮೆಯಿಂದ ಬೀಗಿ “ನಮಗಿದು ಗೊತ್ತಿತ್ತು”, ಎನ್ನುವ ನಾವುಗಳು ಅದನ್ನು ಮಕ್ಕಳಿಗೆ ವರ್ಗಾಯಿಸದೆ ಅಲ್ಲೇ ಅಂತ್ಯ ಹಾಡಿಸಿದ್ದೇವೆ. ಆಚರಣೆಗಳಿಗೆ ಅಭ್ಯಾಸದ ಮೂಲಕವೆ ಬದುಕು!!
ಉತ್ತರ ಭಾರತದಲ್ಲಿ ಆಚರಿಸುವ ‘ಕರ್ವಾ ಚೌಥ್’ ಹಬ್ಬದ ಬಗ್ಗೆ ಕೇಳಿರಬಹುದು, ಹೆಂಗಸರು ಚಂದ್ರೋದಯದ ವರೆಗೆ ಉಪವಾಸವಿರುವ ಹಬ್ಬ ಅದು. ಪರಿಚಯದ ಉತ್ತರಭಾರತೀಯರೊಬ್ಬರ ಮನೆಯಲ್ಲಿ ಈ ಹಬ್ಬ ನಿಷಿದ್ಧ. ಅವರ ಚಿಕ್ಕಮ್ಮ ಒಬ್ಬರು ಆ ಹಬ್ಬದ ದಿನದಂದು ತೀರಿದ್ದರು. ಹಾಗಾಗಿ ಆ ಹಬ್ಬವನ್ನು ಅವರು ಆಚರಣೆ ಮಾಡುವುದಿಲ್ಲ.
ಸೇಡಿಯಾಪು ಕೃಷ್ಣಭಟ್ಟರ ‘ನಾಗರಬೆತ್ತ’ ಕಥೆ ಕೂಡ ಇದೆ ತರಹದ ಒಂದು ಸಂದರ್ಭದಿಂದಾಗಿ ಹುಟ್ಟಿಕೊಂಡ ಒಂದು ಆಚರಣೆಯ ಬಗೆಗೆಯೇ ಆಗಿದೆ. ನೂರು ವರ್ಷಗಳ ಹಿಂದೆ ನಡೆದ ಸನ್ನಿವೇಶವೇ ಈ ಕಥೆಯ ತಿರುಳು. ಆಗಿನ ಕಾಲದಲ್ಲಿ ಜನರು ಅವರ ಜೀವನದ ಅನುಭವವನ್ನು ಪ್ರಾಯೋಗಿಕ ಮಾಹಿತಿಯನ್ನಾಗಿಸಿ, ಅದನ್ನು ಶಾಸ್ತ್ರವನ್ನಾಗಿಸುವ ಆಚಾರ/ಅವಶ್ಯಕತೆ ಈ ಕಥೆಯಲ್ಲಿದೆ.
- ಶ್ವೇತಾ ಕಕ್ವೆ , ೨೫ ಮೇ ೨೦೧೯
This work is licensed under a Creative Commons Attribution-NonCommercial-NoDerivatives 4.0 International License.