ಅರಿಝೋನ ಕನ್ನಡಿಗರು ಮತ್ತು ಪರಿಸರ ಪ್ರೇಮ

ನಮ್ಮ ಊರಿಗಿಂತ ಅಮೆರಿಕದವರು ಪರಿಸರವನ್ನು ಹಾಳು ಮಾಡುತ್ತಿದ್ದಾರೆ ಎನ್ನುತ್ತದೆ ಉಳಿದ ಪ್ರಪಂಚ. ನಿಜವೂ ಹೌದು. ಹಾಗಿದ್ದರೆ ಅಮೆರಿಕದಲ್ಲಿ ವಾಸಿಸುವ ಕನ್ನಡಿಗರು ಹಾಗೆಯೇ ಇದ್ದಾರಾ? ಇಲ್ಲ ಎನ್ನುತ್ತಿದ್ದಾರೆ ಅರಿಝೋನದ ಕನ್ನಡಿಗರು.

ಅರಿಝೋನ ಅಮೆರಿಕಾದ ಒಂದು ರಾಜ್ಯ, ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಿಂದ ಬಂದ ತುಂಬಾ ಜನ ಕನ್ನಡಿಗರು ಇಲ್ಲಿ ವಾಸ ಮಾಡುತ್ತಾ ಇದ್ದಾರೆ. ಕೆಲವು ದಶಕಗಳ ಹಿಂದೆ ಹಲವು ಉತ್ಸಾಹಿ ಕನ್ನಡಿಗರು ಸೇರಿ ಕಟ್ಟಿದ “ಅರಿಝೋನ ಕನ್ನಡ ಸಂಘ” ಈಗಲೂ ಇನ್ನಷ್ಟು ಸದಸ್ಯರನ್ನು ಸೇರಿಸಿಕೊಂಡು ಸಕ್ರಿಯವಾಗಿ ಕನ್ನಡ ಸಂಸ್ಕೃತಿಯನ್ನು ವಿದೇಶಿ ನೆಲದಲ್ಲಿ ಬೆಳೆಸುತ್ತಾ ಬಂದಿದೆ. ಹಬ್ಬಗಳ ಆಚರಣೆ, ಹೊಸ ಕನ್ನಡಿಗರಿಗೆ ಸಹಾಯ, ಕನ್ನಡಿಗ ವಿದ್ಯಾರ್ಥಿಗಳಿಗೆ ಮನೆಯ ನೆನಪಾಗದಂತೆ ಬೆಂಬಲ ಕೊಡುವುದು, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಭೆ ಹೀಗೆ ಕನ್ನಡಿಗರೆಲ್ಲ ಒಟ್ಟಾಗಿ ಬಂದು ನಿಂದು, ಎಲ್ಲವನ್ನೂ ಎಲ್ಲರನ್ನೂ ಸೇರಿಸಿಕೊಂಡು, ಹಲವು  ಕಾರ್ಯಕ್ರಮಗಳನ್ನು ಅಯೋಜಿಸುತ್ತದೆ ಕನ್ನಡ ಸಂಘ.

ಕಾರ್ಯಕ್ರಮಗಳು ಎಂದ ಮೇಲೆ ಅದು ಹತ್ತು ಕೈಗಳು ಒಟ್ಟುಸೇರಿ ಮಾಡುವ ವಿಷಯ. ಎಲ್ಲವನ್ನೂ ಚೆಂದಕಾಣಿಸಬೇಕು, ಎಲ್ಲರೂ ಮೆಚ್ಚಿಕೊಳ್ಳಬೇಕು ಎಂಬ ಉತ್ಸಾಹ ಎಲ್ಲರಲ್ಲೂ ಇದ್ದೆ ಇರುತ್ತದೆ. ಆದರೆ ಅರಿಝೋನ ಕನ್ನಡ ಸಂಘ ಇನ್ನೊಂದಿಷ್ಟು ಮುಂದಕ್ಕೆ  ಅಡಿಯಿಟ್ಟು, ಎಲ್ಲರ ಕಾಳಜಿ ಮಾಡುವುದರ ಜೊತೆಗೆ ನಾವು ಮೆಟ್ಟಿ ನಿಂತಿರುವ ನೆಲವನ್ನು ಕಲುಷಿತಗೊಳಿಸಬಾರದೆಂದು ಪರಿಸರ ಸ್ನೇಹಿ ರೀತಿಯಲ್ಲಿ ಆಚರಿಸುತ್ತದೆ.

ಇದರಲ್ಲಿ ಎಂತ ವಿಶೇಷ? ನಾವೂ ಕೂಡ ಪರಿಸರ ಸ್ನೇಹಿಗಳೇ, ನಾವು ನಮ್ಮ ನೆಲವನ್ನು ಪೂಜಿಸುವವರೆ ಎಂದೆನಿಸದರೆ ಇಲ್ಲಿದೆ ಕೇಳಿ ಆ ವಿಶೇಷ..

ಈಗಿನ ಕಾಲದಲ್ಲಿ ಸಮಾರಂಭಗಳಲ್ಲಿ ತಿನ್ನುವ ತಿಂಡಿ ಬಾಳೆ ಎಲೆಯೊ, ಸ್ಟೀಲ್ ಬಟ್ಟಲುಗಳಲ್ಲೋ ಕೊಡುವುದಿಲ್ಲ. ಗರಿಗರಿಯಾದ ಬಿಳಿ ಬಣ್ಣದ ಪ್ಲಾಸ್ಟಿಕ್ ತಟ್ಟೆಗಳಲ್ಲಿ ಬಿಸಿ ಬಿಸಿ ಊಟ ಕೊಟ್ಟರೆ, ಕಾಫಿ, ಚಹಕ್ಕೆ ಪ್ಲಾಸ್ಟಿಕ್ ಲೋಟಗಳನ್ನು ಉಪಯೋಗಿಸಿತ್ತಾರೆ. ಅಮೆರಿಕಾದಲ್ಲಿ ಅಂತೂ ಬಾಳೆಲೆ ಹೇಗೂ ಸಾಧ್ಯ ಇಲ್ಲ, ಪ್ಲಾಸ್ಟಿಕ್ ತಟ್ಟೆ ಲೋಟಗಳೇ ಎಲ್ಲ ಕಡೆಯೂ.
ಏನಿದು ಪ್ಲಾಸ್ಟಿಕ್ ತಟ್ಟೆ ಲೋಟಗಳು? ಈಗಿನ ಕಾಲಕ್ಕೆ ಪ್ಲಾಸ್ಟಿಕ್ ನೋಡಿಲ್ಲದ ಒಂದು ಜೀವಿಯೂ ಭೂಮಿ ಮೇಲೆ ಇರಲಿಕ್ಕಿಲ್ಲ. ಪ್ಲಾಸ್ಟಿಕ್ ಪೆಟ್ರೋಲಿಯಂ ಪದಾರ್ಥದಿಂದ ಮಾಡಿದ್ದು. ವಿಷಯ ಏನೆಂದರೆ ಇದು ಮನುಷ್ಯ ಮತ್ತೆ ಎಲ್ಲ ಮರ ಗಿಡ ಜೀವಿಗಳ ಆರೋಗ್ಯಕ್ಕೆ ಮಹಾ ಮಾರಕ. ಹಾಗಿದ್ದರೆ ಇದರಿಂದ ಮಾಡಿದ ತಟ್ಟೆಯಲ್ಲಿ ಬಿಸಿ ಬಿಸಿ ಊಟ ಬಡಿಸಿ ಕೊಟ್ಟರೆ, ಅದು ಊಟಕ್ಕೆ ವಿಷ ಹಾಕಿ ಕಲಸಿ ಕೊಟ್ಟ ಹಾಗೆಯೇ. ಆ ವಿಷ ತಿಂದ ಮೇಲೆ ಆ ಪ್ಲಾಸ್ಟಿಕ್ ತಟ್ಟೆಗಳನ್ನು ಎಲ್ಲೋ ನಿರ್ಜನ ಪ್ರದೇಶದಲ್ಲಿ ಎಸೆಯುತ್ತಾರೆ. ಅದು ಅಲ್ಲಿ 500 ವರ್ಷ ಹಾಗೆಯೇ ಬಿದ್ದಿರುತ್ತದೆ,ನಮ್ಮ ಬಾಳೆಲೆಯ ಹಾಗೆ ಮಣ್ಣಿನೊಂದಿಗೆ ಮಣ್ಣಾಗದು ಅದು. ಬದಲಿಗೆ ಗಾಳಿಗೆ ಮಳೆಗೆ ಚೂರು ಚೂರಾಗಿ ಹೋಗಿ, ಎಲ್ಲೆಲ್ಲೊ ಹರಡಿ, ನಾವು ಉಸಿರಾಡುವ ಗಾಳಿಯಲ್ಲಿ, ನಾವು ಕುಡಿಯುವ ನೀರಿನಲ್ಲಿ, ಅಷ್ಟೇ ಏಕೆ ನಾವು ತಿನ್ನುವ ಉಪ್ಪುನಲ್ಲೂ ಸಹ ಸೇರಿ ಪುನಃ ನಮ್ಮ ತಟ್ಟೆಗೇ ಬರುವ ರಾಕ್ಷಸ ಅದು. ಅಷ್ಟು ಶ್ರೀಮಂತ ದೇಶ ಅಮೇರಿಕ, ಆ ಪ್ಲಾಸ್ಟಿಕನ್ನು ಉರಿಸಿ ಹಾಕಬಹುದಲ್ಲ ಎನ್ನುತ್ತೀರಾ? ಉರಿಸಿದರೆ ಅದು ಇನ್ನೂ ಘನಘೋರ ವಿಷದ ಹೊಗೆಯನ್ನೇ ಉಗುಳುತ್ತದೆ! ಆ ಹೊಗೆಯಲ್ಲಿ  ಐದು ನಿಮಿಷಗಳ ಕಾಲ ನಿಂತು ಉಸಿರಾಡಿದರೆ ನಾವು ಕೂಡ ಹೊಗೆಯಾಗಿ ಬಿಡುತ್ತೇವೆ.

ಹೀಗಿರುವಾಗ 400-500 ಜನ ಸೇರುವ ಯಾವುದೇ ಸಮಾರಂಭದಲ್ಲಿ, ಬಾಳೆಲೆ ಸಿಗದ ಊರಿನಲ್ಲಿ  ಪ್ಲಾಸ್ಟಿಕ್ ಬಳಸದೆ, ಆರೋಗ್ಯಕರವಾಗಿ ಪರಿಸರ ಸ್ನೇಹದಿಂದ ಒಂದು ಕಾರ್ಯಕ್ರಮ ಹಮ್ಮಿಕೊಳ್ಳುವುದು ಹೇಗೆ? ಅದನ್ನು ಮಾಡಿ ತೋರಿಸದ್ದಾರೆ ಅರಿಝೋನದ ಕನ್ನಡ ಸಂಘದವರು. ಸಂಘದ ಎಲ್ಲ ಪದಾಧಿಕಾರಿಗಳು ಕಾರ್ಯಕ್ರಮದ ಯೋಜನೆಯ ಶ್ರಮದ ಜೊತೆಗೆ  ಪರಿಸರಪರ, ಪ್ಲಾಸ್ಟಿಕ್ ಇಲ್ಲದೆ ನಡೆಸುವುದರ ಬಗ್ಗೆ ಹೆಚ್ಚಿನ ಮುತುವರ್ಜಿ, ಗಮನಕೊಟ್ಟರು. ಅದರ ಫಲವಾಗಿ 2019ರ  ಯುಗಾದಿ ಕಾರ್ಯಕ್ರಮ ಅತ್ಯಂತ ಉತ್ತಮವಾಗಿಯೂ ಎಲ್ಲರ ಪ್ರಶಂಸೆಗೆ ಪಾತ್ರವಾಗಿಯೂ ನಡೆಯಿತು.

ಅರಿಝೋನದ ಕನ್ನಡ ಸಂಘ ಹೇಗೆ ಪ್ಲಾಸ್ಟಿಕ್ ಬಳಸದೆ ಕಾರ್ಯಕ್ರಮ ಮಾಡಿತು?

1. ಕುಡಿಯುವ ನೀರಿಗೆ ಪ್ಲಾಸ್ಟಿಕ್ ಬಾಟಲಿಗಳ ಬದಲು ನೀರಿನ ಕ್ಯಾನ್ ತುಂಬಿಸಿ ಇಟ್ಟಿದ್ದರು, ಹಾಗೆ ಪ್ಲಾಸ್ಟಿಕ್ ಲೋಟಗಳ ಬದಲಿಗೆ ಪೇಪರ್ ಅಥವಾ ಕಾಗದದ ಲೋಟಗಳನ್ನು ಇಟ್ಟರು. ಕೊನೆಗೆ ನೀರಿನ ಕ್ಯಾನ್ಗಳನ್ನು ಅಂಗಡಿಯವರಿಗೆ ವಾಪಸ್ ಕೊಟ್ಟರು, ಹಾಗೂ ಕಾಗದದ ಲೋಟಗಳನ್ನು ಕೊಳೆಸಿ ಗೊಬ್ಬರ(ಕಾಂಪೋಸ್ಟ್) ಮಾಡಿದರು.

2. ಎಲ್ಲ ತಿಂಡಿಗಳನ್ನು ಪ್ಲಾಸ್ಟಿಕ್ ಚೀಲ ಬಳಸದೆ, ಸ್ಟೀಲ್ ಪಾತ್ರೆಗಳಲ್ಲಿ ಹಾಗೂ ಇತರ ಬುಟ್ಟಿಗಳಲ್ಲಿ ಕಾರ್ಯಕ್ರಮಕ್ಕೆ ತರಲಾಯಿತು. ಸ್ಟೀಲ್ ಹಾಗೂ ಮರದ ಸೌಟುಗಳನ್ನು ಉಪಯೋಗ ಮಾಡಿದ ಕಾರಣ ಅಲ್ಲಿಯೂ ಯಾವುದೇ ಕಸ ತೊಟ್ಟಿಗೆ ಬೀಳಲಿಲ್ಲ. ಬದಲಿಗೆ ಎಲ್ಲ ಪಾತ್ರೆ, ಸೌಟುಗಳನ್ನು ತೊಳೆದರು ಅಷ್ಟೇ.
3. ಬಿಸಿ ಬಿಸಿ ಚಹಾ, ಕಾಪಿಗಳನ್ನು ಪ್ಲಾಸ್ಟಿಕ್ ಇಲ್ಲದ, ಆರೋಗ್ಯಕ್ಕೆ ಹಾನಿಕಾರಕ ಅಲ್ಲದ ಕಾಗದ/ಪೇಪರ್ ಲೋಟಗಳಲ್ಲಿ ಕೊಡಲಾಯಿತು. ಸಕ್ಕರೆಯನ್ನು ಗಾಜಿನ ಡಬ್ಬದಲ್ಲಿ, ಹಾಗೂ ಸಕ್ಕರೆ ಕರಗಿಸಿಕೊಳ್ಳಲು ಮರದ/ಬಿದುರಿನ ಕಡ್ಡಿಗಳನ್ನು ಬಳಸಲಾಯಿತು. ಕೊನೆಗೆ ಈ ಲೋಟಗಳನ್ನು ಕಡ್ಡಿಗಳನ್ನು ಕಾಂಪೋಸ್ಟ್ ಮಾಡಿ ಗಿಡಗಳಿಗೆ ಗೊಬ್ಬರ ಮಾಡಿದರು.

“ಊಟಕ್ಕೆ ಸ್ಟೈರೋಫಾಮ್ ಎನ್ನುವ ಪ್ಲಾಸ್ಟಿಕ್ ತಟ್ಟೆಗಳನ್ನು ಉಪಯೋಗಿಸುತ್ತಾರೆ ಎಲ್ಲ ಕಡೆ. ಈ ತಟ್ಟೆಗಳು ವಿಷಕಾರಿಯಾದ ಪ್ಲಾಸ್ಟಿಕ್ ನಿಂದ ಮಾಡಿದ್ದು ಮಾತ್ರ ಅಲ್ಲದೆ, ಅದರ ಮೇಲೆ BPA ಎನ್ನುವ ವಿಷಕಾರಿಯಾದ ರಾಸಾಯನಿಕ ಲೇಪವನ್ನು ಕೊಟ್ಟಿರುತ್ತಾರೆ ಕೂಡ. ಕೆಲವೊಮ್ಮೆ “BPA ಇಲ್ಲ” ಎಂದು ಹೇಳಿಕೊಳ್ಳುವ ಕೆಲವು ತಟ್ಟೆಗಳ ಮೇಲೆ ಅದಕ್ಕಿಂತಲೂ ಹಾನಿಕಾರಕ ರಾಸಾಯನಿಕಗಳನ್ನು ಬಳಸಿರುತ್ತಾರೆ ಎನ್ನುವುದು ವಿಷಾದ. ಹಾಗಾಗಿ ಈ ತಟ್ಟೆಗಳಲ್ಲಿ ತಿನ್ನುವುದು ಅಂದರೆ ಎಲ್ಲ ರಾಸಾಯನಿಕಗಳನ್ನು ಮೊದಲೇ ಬಡಿಸಿಟ್ಟುಕೊಂಡು ಅನ್ನ ಕಲಸಿ ತಿಂದ ಹಾಗೆಯೇ. ಇನ್ನು ಪ್ಲಾಸ್ಟಿಕ್ ಚಮಚಗಳನ್ನಂತೂ ನಾವೆಲ್ಲರೂ ನಕ್ಕಿ ಚಪ್ಪರಿಸಿ ತಿನ್ನುತ್ತೇವೆ ಕೂಡ. ಆ ಎಲ್ಲ ವಿಷದ ಲೇಪನಗಳು ಜೊತೆಗೆ ಅದರ ಮೇಲಿರುವ ಪ್ಲಾಸ್ಟಿಕ್ ಧೂಳನ್ನು ಕೂಡ ಆ ಚಮಚ ನಮ್ಮ ಬಾಯಿಗೆ ಸುರಿಯುತ್ತದೆ. “

5. ಅರಿಝೋನದ ಯುಗಾದಿಯಲ್ಲಿ, ಊಟದ ತಟ್ಟೆಗೆ ಸ್ಟೈರೋಫಾಮ್ ಅಥವಾ ಪ್ಲಾಸ್ಟಿಕ್ ತಟ್ಟೆಗಳ ಬದಲು ಕಾಗದದ ತಟ್ಟೆಗಳಲ್ಲಿ ಬಡಿಸಲಾಯಿತು. ಪ್ಲಾಸ್ಟಿಕ್ ಚಮಚಗಳ ಬದಲಿಗೆ ಮರದ ಚಮಚಗಳನ್ನು ಬಳಸಲಾಯಿತು. ಕೊನೆಗೆ ಈ ಎಲ್ಲ ತಟ್ಟೆಗಳನ್ನು, ಚಮಚಗಳನ್ನು ಕಾಂಪೋಸ್ಟ್ ಮಾಡಿ ಮಣ್ಣಾಗಿ  ಪರಿವರ್ತಿಸಲಾಯಿತು.
6. ಊಟದಲ್ಲಿ ಬಳಸಿದ ಕಾಗದದ ಕರವಸ್ತ್ರಗಳನ್ನು(napkin), ಉಳಿದ ಎಂಜಲು ಆಹಾರವನ್ನು ಕಾಂಪೋಸ್ಟ್ ಮಾಡಿ ಮಣ್ಣಾಗಿಸಲಾಯಿತು. ಬಳಸಿದ ಎಲ್ಲ ತಟ್ಟೆ, ಲೋಟ, ಚಮಚಗಳ ಕಾಂಪೋಸ್ಟ್ ಮಾಡಲು ಸಾಧ್ಯವಾಗುವಂಥದ್ದೇ ಆಗಿದ್ದವು.

“ಕಾಂಪೋಸ್ಟ್”, ಎಲ್ಲರಿಗೂ ಗೊತ್ತಿರುವ ವಿಚಾರವೆ ಆದರೂ ಇಂಗ್ಲಿಷ್ನಲ್ಲಿ ಹೊಸ ಹೆಸರಿನಿಂದ ನಮಗೆ ಅಪರಿಚಿತ ಅಷ್ಟೇ. ಕರ್ನಾಟಕದ ಯಾವುದೇ ಮೂಲೆಯಾಗಿದ್ದರೂ ನಾವು ಕನ್ನಡಿಗರು, ತಿಂದುಳಿದ ಆಹಾರ, ತರಕಾರಿ ಹೆಚ್ಚಿ ಉಳಿದ ಕಸ, ಎಲೆ, ಹೂವು ,ಹಣ್ಣು ಕಾಯಿಗಳನ್ನು ಮಣ್ಣಿನ ಗುಂಡಿಗೋ, ಅಥವಾ ಹಾಗೆಯೇ ಗಿಡಗಳ ಬುಡಕ್ಕೋ ಹಾಕಿ ಕೊಳೆಯಿಸಿ ಅದು ಪುನಃ ಮಣ್ಣಿಗೆ ಸೇರುವ ಹಾಗೆ ಮಾಡುತ್ತೇವೆ. ನಗರಗಳಲ್ಲಿ ಎಲ್ಲ ಮನೆಗಳಲ್ಲಿ ಅದು ಸಾಧ್ಯವಿಲ್ಲದ ಕಾರಣ ಹಂಡೆಗಳಲ್ಲೋ, ಬಾಲ್ಡಿಗಳಲ್ಲೋ ತುಂಬಿಸಿ ಕೊಳೆಯಿಸಿ ಮಣ್ಣಾಗಿಸುವ ಕ್ರಮಕ್ಕೆ ಕಾಂಪೋಸ್ಟ್ ಮಾಡುವುದು ಎನ್ನುತ್ತೇವೆ. ಪ್ಲಾಸ್ಟಿಕ್ ಚೀಲಗಳಲ್ಲಿ ಇವನ್ನು ಹಾಕಿ ಬಿಟ್ಟರೆ, ಯಾವುದೇ  ನಗರಾಭಿವೃದ್ಧಿಯವರು ಅದನ್ನು ಇನ್ನೆಲ್ಲೋ ಎಸೆಯುತ್ತಾರೆ. ಆ ಕಸ ಅಲ್ಲಿ ಕೊಳೆತು ಮಣ್ಣಿಗೆ ಸೇರುವುದೇ ಇಲ್ಲ, ಬದಲಾಗಿ ಮೀಥೇನ್(methane) ಎಂಬ ಮಾರಕ ವಿಷದ ಅನಿಲವನ್ನು ಬಿಡುಗಡೆ ಮಾಡುತ್ತದೆ. ಹಾಗಾಗಿ ಕಸವನ್ನು ಸರಿಯಾದ ಕ್ರಮದಲ್ಲಿ ಕೊಳೆಸಿ ಮಣ್ಣಿಗೆ ಮರಳಿಸುವುದು ಅವಶ್ಯಕ.

7. ಇದಲ್ಲದೆ ಹಲವು ಕನ್ನಡಿಗರರು ಅವರವರ ತಟ್ಟೆ, ಲೋಟ, ಚಮಚಗಳನ್ನು ಅವರವರ ಮನೆಗಳಿಂದಲೇ ತಂದು ಕಾಗದದ ತಟ್ಟೆಗಳ ಅಗತ್ಯವನ್ನೂ ಇಲ್ಲದಾಗಿಸಿದ್ದರು.

ಯಾವುದೇ ಕಾರ್ಯಕ್ರಮದ ಶುಭಾವಸಾನದ ಹಿಂದೆ ಹಲವಾರು ಮನಸ್ಸುಗಳ ಹಾರೈಕೆ, ಹಿರಿಯರ ಆಶೀರ್ವಾದ, ಬುದ್ಧಿಗಳ ಸಮಯೋಚಿತ ಬಳಕೆ, ಕೈಗಳ ಪರಿಶ್ರಮ,ಸಹಕಾರ ಇದ್ದೆ ಇರುತ್ತದೆ. ಅಂದಿನ ಯುಗಾದಿ ಹಬ್ಬವನ್ನು ಯಶಸ್ವಿಯಾಗಿ ಮಾತ್ರವಲ್ಲದೆ, ಎಲ್ಲರಿಗೂ ಮಾದರಿಯಾಗಿ ಆಚರಿಸಿದ ಶ್ರೇಯ ಅರಿಝೋನದ ಕನ್ನಡಿಗರಿಗೆ ಸಲ್ಲುತ್ತದೆ. ಅರಿಝೋನದ ಕನ್ನಡ ಸಂಘ ತಂಡದ ಈ ಅದ್ಭುತ ಕೆಲಸವನ್ನು ಎಲ್ಲರಿಗೂ ತಿಳಿಸುವ ಹೆಮ್ಮೆಯೂ, ಸಂತೋಷವೂ ನನಗೆ. ವಿದೇಶವಾಸಿಗಳಾದ ಕನ್ನಡಿಗರಿಗೆಲ್ಲರಿಗೂ ಇವರು ಮಾದರಿಯಾಗಲಿ. ಬೆಚ್ಚಗೆ ನಮ್ಮನ್ನು ಅಪ್ಪಿಕೊಂಡ ಹಚ್ಚಹಸಿರಿನ ನೆಲಕೆ ನಮ್ಮಿಂದಾಗಿ ತಪ್ಪಾಗದಿರಲಿ. ಯುಗಾದಿ ಮರಳಿ ಮರಳಿ ಶುಭವಾಗಿ ಬರಲಿ! ನಮಸ್ಕಾರ.

– ಶ್ವೇತಾ ಕಕ್ವೆ
   ಆಗಸ್ಟ್ 15, 2019

Leave a Reply

Your email address will not be published. Required fields are marked *