ಕಡಲ್ಕೊರೆತದ ಅನುಕೂಲ

ಕೂಲಂಕುಷ ಸರಿಯೋ ಕೂಲಂಕಷವೋ? ಕೂಲಂಕಷವೇ ಸರಿ, ಆದರೆ ಯಾಕೆ?

ಮೊನ್ನೆ ಒಬ್ಬರು twitter ನಲ್ಲಿ, ಸಂಸ್ಕೃತ (ಮತ್ತು by extension ಭಾರತೀಯ ಭಾಷೆಗಳಲ್ಲಿ) ಒಂದೇ ಶಬ್ದಕ್ಕೆ ಒಂದಕ್ಕಿಂತ ಹೆಚ್ಚು ಅರ್ಥ ಇರುವುದರ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿ ಇದರಿಂದ confusion ಉಂಟಾಗುತ್ತದೆ ಎಂದರು. ವಿಷಯ ಇಷ್ಟೇ, ಎಲ್ಲಾ ಭಾಷೆಗಳಲ್ಲೂ ಶಬ್ದಗಳೊಳಗೇ ಅವುಗಳ ಅರ್ಥ ಹುದುಗಿರುತ್ತವೆ. ಅರ್ಥವನ್ನು ಶಬ್ದಕ್ಕೆ ಮೇಲಿಂದ ಅಂಗಿಯಂತೆ ತೊಡಿಸುವುದಲ್ಲ (dictionary ಎಂಬ tailor ನಿಂದ). ನಮಗೆ “ಇದಂ ಇತ್ಥಂ” ಎಂದು ಯಾರಾದರೂ ಹೇಳಿದರೆ ಅದನ್ನೇ ಕಂಠಪಾಠ ಮಾಡಲು ಸುಲಭವೇನೋ ಸರಿ. ಅಲ್ಲದೇ English ಕಲಿಯುವಾಗ ಅದರಲ್ಲಿನ ಶಬ್ದಗಳ ಅಂಗಿಗಳನ್ನು ಮಾತ್ರ Longman ಅಥವಾ Oxford dictionaryಯಿಂದ ಉರು ಹೊಡೆದು ಕಲಿತು ನಮ್ಮ “vocabulary” ಬಗ್ಗೆ ಹೆಮ್ಮೆ ಪಟ್ಟು ಮಕ್ಕಳಿಗೂ ಇದನ್ನೇ ಮಾನದಂಡವಾಗಿ ಕೊಟ್ಟಿದ್ದೇವೆ ಎಂಬುದೂ ಸತ್ಯ. ನಮ್ಮ ಅವಗಾಹನೆಗೆ English ನಲ್ಲಿ ಶಬ್ದ ವ್ಯುತ್ಪತ್ತಿಯ ವಿಷಯ ಎಂದೂ ಬರಲೇ ಇಲ್ಲ. ಶಬ್ದಗಳು dictionary ಎಂಬ ಶಂಖದಿಂದ ಸುರಿಯುವ ತೀರ್ಥವೆಂದೂ, ಅವುಗಳು ಸರ್ವಕಾಲಿಕ ಸತ್ಯವೆಂದುಕೊಂಡದ್ದಲ್ಲದೇ, ಅವುಗಳ ಮೂಲ ಕೇಳುವುದಿರಲಿ, ಮೂಲದ ಜಿಜ್ಞಾಸೆ ಮಾಡಬಹುದೆಂಬ ಪ್ರಜ್ಞೆ ನಮಗೆ (English as foreign language ಕಲಿತವರ) ತಲೆಯಲ್ಲಿ ಬರಲಿಲ್ಲ. ಸಂಸ್ಕೃತ, ಕನ್ನಡ ಮತ್ತಿತರ ಭಾಷೆಗಳಲ್ಲಿ ಶಬ್ದಾರ್ಥಗಳ ಸಂಬಂಧವನ್ನು ಮೊದಲ classನಲ್ಲೇ ತಂದಾಗ English ನಲ್ಲಿ ಓಡುವ ತಲೆಗಳಿಗೆ ಇದು confusion ನಂತೆ ಕಾಣುವುದು ಸಹಜ. ಹಾಗಲ್ಲ, English ನ etimology ಸಾಮಾನ್ಯರ ಕೈಗೆಟುಕದಂತಾಗಿದೆ ಅಷ್ಟೆ, ಆಂಗ್ಲದ ನಿಘಂಟುತನವೂ ಪೊಳ್ಳು.

ಇನ್ನು ಕೂಲಂಕಷವನ್ನು ಕೂಲಂಕಷವಾಗಿ ನೋಡೋಣ. ಕೂಲಂಕಷ-ವಾಗಿ ಎಂಬುದು Thorough/Meticulous/ಆದ್ಯಂತ (ಸ್ವಲ್ಪವೂ ಬಿಡದೇ) ಎಂಬ ಅರ್ಥದಲ್ಲಿ ಕನ್ನಡದಲ್ಲಿ ಪ್ರಯೋಗದಲ್ಲಿದೆ. ಇದು ಹೇಗೆ ಬಂತು ಎಂಬುದು ತಾನೆ ಪ್ರಶ್ನೆ?

“ಕೂಲಂ ಕಷತಿ ಇತಿ ಕೂಲಂಕಷ”. ಕೂಲವನ್ನು ಕಷ-ಇಸುವವನೇ ಕೂಲಂಕಷ (ಪುಲ್ಲಿಂಗ, ಸ್ತ್ರೀ ಕೂಲಂಕಷಾ)
ಕೂಲ= ದಡ, ತೀರ (ನದಿ ಅಥವಾ ಸಾಗರದ ದಂಡೆ).
ಕಷ = ಕಷ್ ಹಿಂಸಾಯಾಮ್ ಎಂಬ ಧಾತುವಿನಿಂದ; ಎಂದರೆ ಹಿಂಸಿಸುವುದು, ನೋವುಂಟು ಮಾಡುವುದು, ಕೊರೆಯುವುದು, ಕೊಲ್ಲುವುದು.
ಹಾಗಾಗಿ ದಡವನ್ನು ಹಿಂಸಿಸುವವನು ಕೂಲಂಕಷ; ನದಿ, ಸಾಗರ, ಸಾಗರದ ಅಲೆಗಳಿಗೆ ಅನ್ವರ್ಥನಾಮ.

ಕೂಲಂಕಷ => ನದಿ, ಸಾಗರ, ಸಾಗರದ ಅಲೆ
ಕೂಲಂಕಷ => ಕಡಲ್ಕೊರೆತ-ಗಾರ

ಕಡಲ್ಕೊರೆತ ಎಂಬ ವಾಚ್ಯಾರ್ಥದ ಸಿಕ್ಕಿದ್ದು, Thorough/meticulous/ಆದ್ಯಂತ ಎಂಬ metaphorical meaning ಗೆ ಹೋಗಲು ಅನುಕೂಲವಾಯಿತು. ಕೂಲಂಕಷ-ವಾಗಿ = ಸಾಗರವು ದಡವನ್ನು ಕೊರೆದ ಹಾಗೆ, ಸ್ವಲ್ಪವೂ ಬಿಡದೇ ಕೊರೆದಂತೆ… ಇತ್ಯಾದಿ ಅರ್ಥಗಳು ಗೋಚರವಾಗುತ್ತದೆ. Relentless ಎಂಬ ಅರ್ಥದ ಛಾಯೆಯೂ ಕೂಲಂಕಷವಾಗಿ-ಯಲ್ಲಿ ಇರಲೇ ಬೇಕು, Thorough ಎಂಬ ಅರ್ಥದೊಂದಿಗೆ, ಅಲ್ಲವೇ? ಈ ಛಾಯೆಗಳು (nuances) ಏಕಪದ ಭಾಷಾಂತರವನ್ನು ಕಲಿತರೆ ಕೈತಪ್ಪಿ ಹೋದಾವು. ಹೋಗಲಿ, ಗಂಟೆಕಟ್ಟಲೆ ಕೊರೆಯುವ ಭಾಷಣವನ್ನೂ, meeting ಗಳನ್ನೂ “ಕೂಲಂಕಷವಾಗಿತ್ತು” ಎಂದು ಹೇಳಲು ಇನ್ನು ಅಡ್ಡಿಯಿಲ್ಲವಲ್ಲ? ನಿರಂತರವಾಗಿ ಬಂದುಬಡಿದು, ಆಮೂಲಾಗ್ರವಾಗಿ ಕೊರೆಯುವ ಸಾಗರದ ಅಲೆಗಳಂತೆ ಎಂದು ಹೇಳಲು ಒಂದೇ ಶಬ್ದ ಸಿಕ್ಕಿ ಈ ಅರ್ಥ ಸರಣಿಯಿಂದ ಅನುಕೂಲವಾಯಿತಲ್ಲವೇ? “ಅನು-ಕೂಲ” ಹೇಗಾಯಿತು?

ಅನುಕೂಲ: ಸಾವಿರಾರು ವರ್ಷಗಳ ಹಿಂದೆ, ಸಾಗರದಲ್ಲಿ ನೌಕೆಗಳು (ವಾಣಿಜ್ಯ) ಆದಷ್ಟೂ ದಡಕಾಣುವಂತೆಯೇ ಹೋಗುತ್ತಿದ್ದುವಂತೆ. ನಕ್ಷತ್ರಗಳ ಜಾಡು ಹಿಡಿದು ನಡುಸಾಗರಕ್ಕೆ ಹೋದರೆ ದಾರಿತಪ್ಪುವ ಸಾಧ್ಯತೆ ಬಹಳ. ಹಾಗಾಗಿ ಯಾವುದೆ ಕೆಲಸದ risk ಅನ್ನು ಅಳೆಯುವ ಮಾನದಂಡವಾಗಿ ಅನು-ಕೂಲ, ಅನನು-ಕೂಲ ಪದಗಳು ಬೆಳೆದಿರಬೇಕು. ಅನು-ಕೂಲ ಎಂದರೆ ದಡವನ್ನು ಅನುಸರಿಸುತ್ತಾ (following the shoreline) ಹೋಗುವ ನಾವಪಥ, ಸುಲಭದ್ದು, ಅಪಾಯ ಕಡಿಮೆ. ಅದಕ್ಕೇ ಇರಬೇಕು, ಅನುಕೂಲ ಶಬ್ದಕ್ಕೆ “ಹೊಂದಿಕೊಂಡುಹೋಗುವ ಪತಿ” ಎಂಬ ಅರ್ಥವೂ ಇದೆ! ಇಲ್ಲಿ ಹೆಣ್ಣು ಸ್ಥಿರವಾದ ದಡವಾಗಿಯೂ, ಗಂಡು ಸುಲಭವಾಗಿ ದಾರಿ ತಪ್ಪಬಲ್ಲ ನಾವೆಯಾಗಿಯೂ ನಮ್ಮ ಭಾಷೆಯೊಳಗೇ ಮುದ್ರಿತವಾಗಿವೆ! ಇನ್ನು ಪ್ರತಿಕೂಲ ಎಂದರೆ (ಘಾತ – ಪ್ರತಿಘಾತ ವಿದ್ದಂತೆ) ಕೂಲಕ್ಕೆ ವಿರುದ್ಧವಾಗಿ ಇರುವುದು, ಇದು ನದಿಯ ಇನ್ನೊಂದು ದಡವೇ? ಅಲ್ಲ ದಡದ ಅನುಕೂಲ ಇಲ್ಲದಿರುವ ನೀರಿನ ನಡುಭಾಗವೇ? ಇರಲಿ ಶಬ್ದವ್ಯುತ್ಪತ್ತಿ ಆಳವಾದ ಹಿಮಸಾಗರ, ಪ್ರತಿಕೂಲ-ವಾದರೂ ಆಸ್ವಾದನೆಗೆ ಪ್ರತಿಕೂಲವಲ್ಲ. ಇದನ್ನು ಕೊರೆದಷ್ಟು ರಸ ಇದೆ, ಈ ಕಡಲ್ಕೊರೆತ ಅನುಕೂಲಕರವಾದ್ದು. Star trek Next Generation ನಲ್ಲಿ “Darmok” ಎಂಬ ಒಂದು ಕಂತು ಇದೆ ನೊಡಿ. ಅದರಲ್ಲಿರುವಂತೆಯೇ ನಮ್ಮ ಭಾಷೆಗಳೂ ಐತಿಹಾಸಿಕ ಪ್ರಕರಣಗಳ metaphor-ಗಳಿಂದ ತುಂಬಿವೆ. ನದಿ, ಸ್ತ್ರೀ, ಋಷಿಮೂಲ ಹುಡುಕುವುದನ್ನು ಬಿಟ್ಟರೂ ಶಬ್ದ ಮೂಲ ಹುಡುಕುವುದನ್ನು ಮಾತ್ರ ಬಿಡಬೇಡಿ.

Creative Commons License
This work is licensed under a Creative Commons Attribution-NonCommercial-NoDerivatives 4.0 International License.

I tweet @ganeshkrishna
Quote this blog with author name and link. ex: “ಕಡಲ್ಕೊರೆತದ ಅನುಕೂಲ by ಗಣೇಶಕೃಷ್ಣ ಶಂಕರತೋಟ, manjati.net/kool “

3 Replies to “ಕಡಲ್ಕೊರೆತದ ಅನುಕೂಲ”

  1. ಹಳೆ ಪದಗಳ ಹೊಸರೂಪ ನೋಡಿ ಬೆರಗಾಯ್ತು. ಧನ್ಯವಾದಗಳು

  2. ಅನುಕೂಲ ಅಂದರೆ ಕೂಲ=ದಡವನ್ನು ಅನುಸರಿಸಿ (ಹಿಂಬಾಲಿಸಿಕೊಂಡು). ಪ್ರವಾಹದ ನದಿಯಲ್ಲಿ ಸಿಕ್ಕಿಕೊಂಡವನು ಕೂಲ=ದಡದೆಡೆಗೆ ಹೋಗುವುದು ಸುರಕ್ಷಿತ. ಪ್ರತಿಕೂಲ=ದಡದ ವಿರುದ್ಧ ಹೋದರೆ ಪ್ರವಾಹದಿಂದ ತಪ್ಪಿಸಿಕೊಳ್ಳುವುದು ಕಷ್ಟ. ಕೂಲಂ ಕಷತಿ ಆಗಬೇಕು. ಕೂಲಂ ಕಷಯತಿ ಅಲ್ಲ

    1. ಧನ್ಯವಾದ, ಹೌದು ಕಷತಿ ಆಗಬೇಕು. ತಿದ್ದಿದ್ದೇನೆ.

Leave a Reply

Your email address will not be published. Required fields are marked *