ಕೇಳಿರಪ್ಪೋ ಕೇಳಿ!

ನಮ್ಮ ಮನೆಯವರು “ಇವತ್ತು ನಾನು ಪಾತ್ರೆ ತೊಳೆದು ಕೊಡುತ್ತೇನೆ” ಎಂದು ಹೇಳಿದ್ದು ಕೇಳಿ ನಾನು ನಕ್ಕು ಬಿಟ್ಟೆ! ಇವತ್ತೆಂತ ವಿಶೇಷ?! ಯಾರ ಹುಟ್ಟಿದ ಹಬ್ಬವೂ ಅಲ್ಲ, ವಾರ್ಷಿಕೋತ್ಸವವೂ ಇಲ್ಲ. ಸಾಲದ್ದಕ್ಕೆ ರಜೆಯ ದಿವಸವೂ ಅಲ್ಲ. ಎಂತಾಯಿತು ಇವರಿಗೆ? ಕಣ್ಣು ಸ್ವಲ್ಪ ಕಿರಿದು ಮಾಡಿ, ಬಲದ ಹುಬ್ಬನ್ನು ಸ್ವಲ್ಪವೆ ಮೇಲೆತ್ತಿ, ತುಟಿಯ ಬಳಭಾಗ ಮಾತ್ರ ಸ್ವಲ್ಪ ಎಳೆದು “ನಮ್ಮ ಮನೆಯ ಪಾತ್ರವನ್ನಾ?” ಹೌದು ಎಂಬ ಉತ್ತರ ಬಂತು! “ನಿಜವಾಗಿಯೂ!”, ಪುನಃ “ಹೌದು ಮಾರಾಯ್ತಿ!” ಕುದುರೆ ತಾನಾಗಿಯೇ ಬಂದು ನಾನು ಮಾಡಿದ ಹೊಸ ರುಚಿ ಜ್ಯೂಸ್ ಕುಡಿತೇನೆ ಹೇಳಿದ್ರೆ, ಬೇಡ ಹೇಳುವ ಅಧಿಕ ಪ್ರಸಂಗ ಮಾಡಿ, ನನ್ನ ಕಾಲಿಗೆ ನಾನೇ ಕೊಡಲಿ ಇಡುವುದು ಬೇಡ. “ಯಾಕೆ” ಎಂದೆಲ್ಲ ಕೇಳಿ ಬಂದ ಕುದುರೆಯನ್ನು ‘ಭೌ’ ಮಾಡಿ ಓಡಿಸುವುದೂ ಬೇಡ ಎಂದು ಆಲೋಚಿಸಿ, “ಧಾರಾಳ ತೊಳೆಯಿರಿ” ಎಂದೆ.

“1. ನಳ್ಳಿ ಪೂರ್ತಿ ಬಿಡಬಾರದು”

“2. ಕಮ್ಮಿ ನೀರಿನಲ್ಲಿ ತಿಕ್ಕಿ ತೊಳೆಯಬೇಕು”

“3. ನೆಲಕ್ಕೆಲ್ಲ ನೀರು ಚೆಲ್ಲಬಾರ್ದು”

…… ಇನ್ನೆರಡು ಮೂರು ನಿಯಮಗಳ ಪಟ್ಟಿ ಕೊಟ್ಟು “ಇದರಲ್ಲಿ ಏನೋ ಇದೆ” ಎಂದುಕೊಂಡು ಹೊರಗೆ ಬಂದೆ. ಮೆಲ್ಲಗೆ ಬಾಗಿಲ ಸಂದಿನಿಂದ ಅವರಿಗೆ ಗೊತ್ತಾಗದ ಹಾಗೆ ಸಂಶಯದಲ್ಲಿ ನೋಡುತ್ತಾ ಇದ್ದೆ. ಪಾತ್ರೆ ತೊಳೆಯುವುದರಲ್ಲಿ ನಿಜಕ್ಕೂ ಅಷ್ಟು ಒಳ್ಳೆಯ ವಿಷಯ ಎಂತ ಉಂಟು? ಬೇಸಗೆಗೆ ಕೈ ತಂಪಾಗಲು ಇರಬಹುದೇ? ಅಥವಾ ಎಲ್ಲೋ ಪಾತ್ರೆ ತೊಳೆಯುವುದನ್ನು ನೋಡಿ ಇಷ್ಟ ಪಟ್ಟು ತಮಗೂ ತೊಳಿಬೇಕು ಎಂಬ ಆಸೆ ಆಯಿತೆ? ಎಂತೋಪ್ಪ! ಇವರಿಗೆ ಒಳ್ಳೆ ಬುದ್ದಿ ಕೊಡು ದೇವರೇ ಎಂದು ಬೇಡಿದ ಪ್ರಾರ್ಥನೆ ಫಲಕ್ಕೊಟ್ಟದ್ದೇ ಇರಬೇಕು, ಇಲ್ಲದಿದ್ದರೆ ಈ ಕಡೆ ತಲೆಯೇ ಹಾಕದ ಜನ ಇವತ್ತೆಂತ ಹೀಗೆ! 


ನನ್ನ ಸತ್ಯಾನ್ವೇಷಣೆ ಮಾಡುತ್ತಿದ್ದ ಕಣ್ಣುಗಳ ಮುಂದೆ ಅವರು ನಿಧಾನವಾಗಿ ತಮ್ಮ ಮೇಲೆತ್ತಿ ಸುತ್ತಿದ ಲುಂಗಿಯ ಒಳಗಿಂದ ಒಂದು earphone ನ್ನು ತೆಗೆದು ಕಿವಿಗೆ ಸಿಕ್ಕಿಸಿಕೊಂಡು, ಅದರ ಇನ್ನೊಂದು ತುದಿಯನ್ನು ಮೊಬೈಲ್ಗೆ ಸಿಕ್ಕಿಸಿ ಅದೇನೋ ಒತ್ತಿಕೊಂಡು ಪಾತ್ರೆ ತೊಳೆಯಲು ಶುರುಮಾಡಿದರು! ಓಹ್ ಹಾಡು ಕೇಳಿಗೊಂಡು ಮಾಡುವ ತೊಳೆಯಾಣವೋ! ಹೇಗೂ ಇರಲಿ, ಪಾತ್ರೆ ಹೊಳೆದರೆ ಸಾಕು ಎಂದೆನಿಸಿ ಬಿಟ್ಟು ಬಿಟ್ಟೆ. ಎಲ್ಲ ತೊಳೆದ ಮೇಲೆ, ಹೊರಗಡೆ ಬಂದು “ನೆಲ ಒರೆಸಲಾ?” ಎಂದು ಕೇಳಿದಾಗ ಹೌಹಾರಿಬಿಟ್ಟೆ! ಭಯವೂ ಆಶ್ಚರ್ಯವೂ ಒಟ್ಟಿಗೆಯೇ ಆಗಿ ಕನಸೇ ಇರಬೇಕು ಎಂಬ ಸಂಶಯವೂ ಸೇರಿ ನೋಡಿದಾಗ, ಬಾಲ್ಡಿ ಮತ್ತೆ ಬಟ್ಟೆಯ ಕೋಲು ಹಿಡಿದುಕೊಂಡು ಬಂದೇ ಬಿಟ್ಟಿದ್ದರು!!ಅಬ್ಬ ಈಗಲಾದರೂ ಈ ಅಬಲೆಯ ಕಷ್ಟ ಕಂಡಿತು ಅಲ್ವಾ, ನನ್ನ ಯಾವ ಜನ್ಮದ ಪುಣ್ಯವಾ ಏನ! ಅಂತೂ ದೇವರ ಕೃಪೆ ನನ್ನ ಮೇಲೆ ಆಯಿತು ಇವತ್ತು ಅನಿಸಿತು. “ನೀನು ಮಕ್ಕಳೊಟ್ಟಿಗೆ ಆಡು, ನಾನು ಇದೆಲ್ಲ ಕೆಲಸ ಮುಗಿಸಿ ಕೊಡುತ್ತೇನೆ” ಹೇಳಿದ ಮೇಲೆ ಅಂತೂ ಕಾಲು ಮುಟ್ಟಿ ನಮಸ್ಕಾರ ಮಾಡುವ ಅನ್ನಿಸಿತು.


ನೆಲವನ್ನು ಎರಡೆರಡು ಸಲ ನೆಲವೊರೆಸುವ ಕೋಲಿನಲ್ಲಿ ಚೆನ್ನಾಗಿ ವೊರೆಸಿದ ಕಾರಣ ಮನೆಯೆಲ್ಲ ಈಗಷ್ಟೇ ಮಳೆ ಬಂದು ಬಿಟ್ಟ ಅಂಗಳದಂತೆ ಅನಿಸುತ್ತಿತ್ತು. ಅವರು ಮೊಬೈಲು, ಕಿವಿಯದ್ದು ಕೆಳಗಿಟ್ಟು ಮುಖ ಕೈ ಕಾಲು ತೊಳೆಯಲು ಹೋದರು, ನಾನು ಯಾವ ಸಂಗೀತವಪ್ಪ ಅದು ಅಷ್ಟೊಂದು ಮೋಡಿ ಮಾಡಿದ್ದು ಎಂದು ಮೊಬೈಲು ಕೈಗೆತ್ತಿಕೊಂಡು ಕೇಳಲು ಹೋದೆ. ಅದು ಯಾವುದೇ ಹಾಡಾಗಿರಲಿಲ್ಲ. ಅದರಲ್ಲೊಬ್ಬರು ಯಾವುದೋ ಪುಸ್ತಕದ ಪುಟಗಳನ್ನು ವಾಚಿಸುವುದು ಕೇಳಿತು. ಓಹ್ ಪುಸ್ತಕ ಕೇಳಿಕೊಂಡು ಎಲ್ಲ ಮನೆಕೆಲಸ ಮಾಡುವ ಉಪಾಯ! ವಾಹ್! ನನಗೇಕೆ ಇದು ಹೊಳೆಯಲಿಲ್ಲ! ಕೂಡಲೇ ಛೆ ಅನಿಸಿತು.. 

ಈಗ ನಮ್ಮಲ್ಲಿ ಪಾತ್ರೆ “ನಾನು ತೊಳೆಯುವುದು”, “ನಾನು ತೊಳೆಯುದು” ಎಂಬ ವಿಷಯಕ್ಕೆ ಜಗಳ ಶುರುವಾಗಿದೆ.

ರಕ್ಷಿಸಿ!

-ಶ್ವೇತಾ ಕಕ್ವೆ
ಆಗಸ್ಟ್ ೫, ೨೦೧೯


Creative Commons License
This work is licensed under a Creative Commons Attribution-NonCommercial-NoDerivatives 4.0 International License.

Leave a Reply

Your email address will not be published. Required fields are marked *