ಕಾಯ್ಕಿಣಿ ಕಥೆಗಳು

ತರಂಗ ಹಾಗೂ ಸುಧಾ ಪುಸ್ತಕಗಳಲ್ಲಿ ಪ್ರಕಟವಾಗುತ್ತಿದ್ದ ‘ಕಥೆಗಳು’ ನನ್ನಲ್ಲಿ ಕಥೆಗಳನ್ನು ಓದುವ ಅಭಿರುಚಿಯನ್ನು ಹುಟ್ಟುಹಾಕಿಸಿತು.. ಹೈಸ್ಕೂಲ್, ಪಿಯುಸಿ ದಿನಗಳಲ್ಲಿ ಮನೆಯ ಅಟ್ಟ ಹತ್ತಿ, ಅಲ್ಲಿ ಅಟ್ಟಿ ಇಟ್ಟು ಕಟ್ಟಿಟ್ಟ ಪುಸ್ತಗಳಲ್ಲಿ ತರಂಗ ಸುಧಗಳನ್ನು ಹುಡುಕಿ ಎತ್ತಿಟ್ಟು ಓದುವುದು ಒಂದು ನಿಧಿ ಶೋಧನೆಯಷ್ಟೇ ಉತ್ಸಾಹದ ವಿಷಯವಾಗಿತ್ತು. ಒಮ್ಮೆಮ್ಮೆ ಆ ಪುಸ್ತಕಗಳ ಅಟ್ಟಿಯ ಎಡೆಯಲ್ಲಿ ಯುಗಾದಿ,ದೀಪಾವಳಿ ವಿಷೇಶಾಂಕವೇನಾದರು ಸಿಕ್ಕಿದರೆ ಅಂದು ಹಬ್ಬವೆ ಸರಿ! ಅವುಗಳಲ್ಲಿ ಬರುವ ಬಹುಮಾನಿತ ಕಥೆಗಳು ನನ್ನ ಅಚ್ಚುಮೆಚ್ಚಿನವು.. 1989,1990,91(ಇಸವಿ ನೆನಪಿಲ್ಲ) ರ ಸಂಚಿಕೆಗಳಲ್ಲಿ ಎಲ್ಲ ಸಂಚಿಕೆಗಳಂತೆ ಅದ್ಭುತವಾದ ಕಥೆಗಳಿದ್ದವು, ಅದರಲ್ಲಿ ಬಹುಮಾನಿತ ಕಥೆಗಳಲ್ಲಿ ಜಯಂತ ಕಾಯ್ಕಿಣಿಯವರ ಕಥೆಗಳಿದ್ದವು. ಆಗ ಅವರ ಬಗ್ಗೆ ಕಥೆಗಾರನ ಹೆಸರು ಎಂಬಷ್ಟೇ ತಿಳಿದಿತ್ತು. ಕಾಯ್ಕಿಣಿ ಎಂಬ ಹೆಸರೂ ಅದರ ಜೊತೆಗೆ ಅವರ ಕಥಾಪಾತ್ರಗಳೂ ಹೊಸೆದು ನನ್ನ ನೆನಪು ಶಕ್ತಿ ಅವರನ್ನು ಒಬ್ಬ ಅತ್ಯದ್ಭುತ ಕಥೆಗಾರ ಎಂದು ನಮೂದಿಸಿತ್ತು.. ಭತ್ತದ ಗದ್ದೆ, ಅಡಿಕೆ ತೋಟಕ್ಕೆ ತಾಗಿಗೊಂಡು ಇದ್ದ ನಮ್ಮ ಮನೆಯ ಜಗಲಿಯಲ್ಲಿ ಕುಳಿತು ಅವರ ಕಥೆಗಳನ್ನು ಓದಿದ್ದರೂ ಮುಂಬಯಿಯ ಲೋಕಲ್ ಟ್ರೈನ್ ನ ಸದ್ದು, ಪ್ಲಾಟ್ ಫಾರಂ ಮೇಲೆ ಸುಳಿದಾಡುವ ಚಹಾ ಮಾರುವವರು, ಪೇಟೆಯ ಹೊಗೆ ಧೂಳು ತುಂಬಿದ ಮಾರ್ಗದ ಪಕ್ಕದ ಹಳೆ ಅಪಾರ್ಟ್ಮೆಂಟಿನಲ್ಲಿ ಚಡಪಡಿಸುವ ಜನ ಎಲ್ಲವೂ ಸೇರಿ ಕಣ್ಣಮುಂದೆಯೇ ಬೊಂಬಾಯಿ ಭೂಪಟ ತೆರೆದಿಟ್ಟ ಅವರ ಬರಹದ ಶೈಲಿ ವಿಶೇಷ, ಹಾಗೂ ಅಪೂರ್ವ…


ಅಷ್ಟೊಂದು ಚೆಂದದ ಪರಿಸರದ ಮಧ್ಯೆ ಇದ್ದರೂ ವೈರಾಗ್ಯದ ಭಾವದ ಎಳೆಗಳನ್ನು ಮೀಟಿಸಿದ ಅವರ ಕಥೆಗಳು ಒಂದೆಡೆಯಾದರೆ, ಮುಂಗಾರು ಮಳೆಯ ಹಾಡುಗಳ ಮೂಲಕ ಕನ್ನಡದ ಜನಗಳಿಗೆ ಮುಂಗಾರಿನ ಮಳೆ ಹನಿಗಳಂತೆ ತಂಪೆರೆದ ಅವರ ಬರವಣಿಗೆಯ ಕೌಶಲ್ಯಕ್ಕೆ ತಲೆದೂಗದವರಿಲಿಕ್ಕಿಲ್ಲ.

ಕನ್ನಡದ ಓದುಗರಿಗೆ ಅವರು ಬರೆದಿಟ್ಟ ಎಲ್ಲ ಕಥೆಗಳೂ ಒಂದು ಆಸ್ತಿಯೇ ಸರಿ. ನನ್ನಂಥಹ ಹಲವರಲ್ಲಿ ಆಧುನಿಕ ಕಥಾ ಸಾಹಿತ್ಯದ ಅಭಿರುಚಿ ಬೆಳೆಸಿದ ಜಯಂತ ಕಾಯ್ಕಿಣಿಯವರಿಗೆ ಹೃತ್ಪೂರ್ವಕ ನಮಸ್ಕಾರಗಳು..

  • ಶ್ವೇತಾ ಕಕ್ವೆ
Creative Commons License
This work is licensed under a Creative Commons Attribution-NonCommercial-NoDerivatives 4.0 International License.

Leave a Reply

Your email address will not be published. Required fields are marked *