ಕಶೀರ

ಕಾದಂಬರಿ - ಸಹನಾ ವಿಜಯಕುಮಾರ್

ಕಾಶ್ಮೀರದ ಬಗ್ಗೆ ಬರೆದಿರುವ ಪುಸ್ತಕ ಎಂದ ಮೇಲೆ ಅದರಲ್ಲಿ ಖಂಡಿತಾ ಹೃದಯ ಹಿಂಡುವ ಕಥೆ ಇದ್ದೇ ಇದೆ, ಹೇಗಪ್ಪಾ ಓದುವುದು ಎಂಬ ತಳಮಳ ಒಂದೆಡೆ.
“ಕಾಶ್ಮೀರ” ಎಂದು ಹೇಳುತ್ತಿರುವಾಗ ‘ಕಾ’ ಎಂದಾಗ ಬಾಯಿ ಮನಸ್ಸುಗಳು ತೆರೆದರೂ, ‘ಶ್ಮೀ’ ಎನ್ನುವಲ್ಲಿಗೆ ಮತ್ತೆ ಗಂಟಲನ್ನು ಹೃದಯಕ್ಕೆ ಸೇರಿಸಿ ಎಳೆದಂತೆ, ಅದೊಂದು ಭಾರವಾದ, ತಂತಿ ಮೀಟಿದ ಹಾಗೆ ಒಂದು ಅವ್ಯಕ್ತ ಭಾವ; ‘ರ’ ಎನ್ನುವಾಗ ಕಣ್ಣಗಳ ಮುಂದೆ ಶುಭ್ರವಾದ ಬೆಳಕೊಂದು ಹೊಳೆದು, ಹಿಮಾಚ್ಛಾದಿತ ಬೆಟ್ಟಗಳು, ಹಸಿರಿನ ಕಣಿವೆಗಳು ಬಂದು ನಿಂದು, ಎಂದೋ ನೋಡಿದ ಚಿತ್ರದ ತುಣುಕುಗಳನ್ನು ಮೂಡಿಸುತ್ತವೆ. ಎಂದೂ ನೋಡದ ಕಾಶ್ಮೀರ ಅದಷ್ಟೇ ಅಲ್ಲ ಎನ್ನುತ್ತವೆ ಕಾದಂಬರಿಯಲ್ಲಿ ಬರುವ ಪಾತ್ರಗಳು..
ಪುಸ್ತಕದುದ್ದಕ್ಕೂ ಎಲ್ಲಾ ಪಾತ್ರಗಳು ಸುತ್ತಲೂ ಕುಳಿತು ಅವರರವರ ಕಾಶ್ಮೀರವನ್ನು ನಮಗೊಪ್ಪಿಸುತ್ತಿದ್ದರೆ, ಕೆಲವು ಪಾತ್ರಗಳು ನಮ್ಮಲ್ಲಿ ನ್ಯಾಯ ಕೇಳಿತ್ತಿರುವರೇನೋ ಎಂದು ಭಾಸವಾಗುತ್ತದೆ, ಭಾಸವಲ್ಲ.. ನಮ್ಮಲ್ಲಿ ಅಲ್ಲದೆ ಅವರು ಬೇರೆ ಯಾರಲ್ಲಿ ಕೇಳಬಲ್ಲರು!?!

ದಕ್ಷಿಣ ಕನ್ನಡದ ಕಡೆ ಅತೀ ಹೆಚ್ಚು ಮಾರಾಟವಾದ ‘ಕಶೀರ’ ಎಲ್ಲ ಸಣ್ಣ ಸಣ್ಣ ಪುಸ್ತಕದ ಅಂಗಡಿಗಳಲ್ಲಿ ಮುಂಬಾಗಿಲ ಬಳಿಯಲ್ಲೇ ಇಟ್ಟಿದ್ದು ಕಂಡಿದ್ದೆ. ವರ್ಷಾನುಗಟ್ಟಲೆ ಮನಸ್ಸಿಗೆ ಬೇಜಾರಗಬಹುದೆಂದು ಬದಿಗಿಟ್ಟ ವಿಷಯಗಳೆಲ್ಲವೂ ಒಮ್ಮೆಲೇ ಮುಗಿಲೆತ್ತರಕ್ಕೆ ನಿಂದು “ಈಗಲಾದರೂ ನನ್ನನ್ನು ಒಮ್ಮೆ ನೋಡು” ಎಂದಂತೆನಿಸಿ, ನನ್ನ ಪುಕ್ಕಲು ಕೈಗಳು, ಮುಂದೊಮ್ಮೆ ಧೈರ್ಯ ಬಂದಾಗ ಓದುತ್ತೇನಂತೆ ಎಂದುಕೊಂಡು ಪುಸ್ತಕವನ್ನು ಎತ್ತಿಕೊಂಡಿದ್ದವು. “ಅಹಿಂಸೆಯೇ ಪರಮ ಧರ್ಮ” ಎಂದುಕೊಂಡು ಒಂದು ಸೊಳ್ಳೆಯನ್ನೂ ‘ಫೂ’ ಮಾಡಿ ಓಡಿಸಲು ಕಷ್ಟ ಪಡುವಾಗ ಕಾದಂಬರಿಯಲ್ಲಿ ಬರುವ ಚರಿತ್ರೆಯ ರಾಜರಾಣಿಯರು, ಅದೆಷ್ಟೋ ಪಾತ್ರಗಳು ಅನುಭವಿಸಿದ್ದನ್ನೋದಿ ಅಹಿಂಸೆಯ ಅರ್ಥವನ್ನೇ ಪ್ರಶ್ನಿಸುವಂತ ಮನಸ್ಥಿತಿ ಬರುತ್ತದೆ.

ಸ್ವಾತಂತ್ರ್ಯ ತುಳುಕಿ ಹರಿಯುವ ಮನಸ್ಸಿನ ನಾಲ್ಕು ಗೋಡೆಗಳಲ್ಲಿ ಬಂಧಿಯಾಗಿರುವ ನಮ್ಮ ವೈಚಾರಿಕ ಶಕ್ತಿಯ ಮಧ್ಯೆ, ಕಾಶ್ಮೀರವು ಎದ್ದು ನಿಂದು ಅದನ್ನೊಮ್ಮೆ ಕಲಕಿಸಿ ತಾನೆಷ್ಟು ಎತ್ತರದಲ್ಲಿದ್ದೇನೆ ಎಂಬುದನ್ನು ತೋರಿಸುತ್ತದೆ ಈ ಕಾದಂಬರಿಯಲ್ಲಿ. ಅದೆಷ್ಟೋ ದಾಳಿಗೆ, ಹಿಂಸೆಗೆ ತುತ್ತಾದರೂ ಸ್ವಂತಿಕೆ, ಪರಂಪರೆ, ಸಂಪ್ರದಾಯಗಳನ್ನು ಮುಷ್ಟಿಯಲ್ಲಿ ಹಿಡಿದು ರಕ್ಷಿಸಿದ ಕಾಶ್ಮೀರದವರ ಮುಂದೆ ನಾವು ಅದನ್ನೇ ಸಲೀಸಾಗಿ ಆಂಗ್ಲದವರ ಮುಂದೆ ಸ್ವಯಂ ಕೈಚೆಲ್ಲಿ ಹರಿಯಬಿಡುವುದನ್ನು ಆಲೋಚಿಸಿದರೆ….ನಾಚಿಕೆಯಾಗುತ್ತದೆ.

ಕಾದಂಬರಿಯಲ್ಲಿ ಬರುವ ಪಾತ್ರಗಳು ಆಡುವ ಮಾತುಗಳು, ಅವರ ವಿದ್ವತ್ತು, ವಿಷಯಗಳ ಬಗ್ಗೆ ಅವರಿಗಿರುವ ಜ್ಞಾನ, ಅವರ ಚಿಂತನ-ಮಂಥನಗಳು ಲೇಖಕಿಯ ಅಧ್ಯಯನ, ಬುದ್ಧಿಶಕ್ತಿ, ಅನ್ವೇಷಣೆ, ವಿಚಾರವಾದಗಳನ್ನು ಬಿಂಬಿಸುತ್ತವೆ. ಹಲವು ಕಡೆ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸುವ ಪಾತ್ರಗಳನ್ನು ನೋಡಿದರೆ ಲೇಖಕಿ ಸಹನಾ ಅವರ ಚಿಂತನೆಗಳ ಆಳ ಅಂದಾಜಾಗುತ್ತದೆ. ಇದೆಲ್ಲ ಅಲ್ಲದೆ ಕಾಶ್ಮೀರದ ಕಣಿವೆಗಳು, ದೇವಸ್ಥಾನಗಳು, ಸರೋವರ, ದಾರಿಗಳು, ಜನರು, ಮನೆ ಮಠಗಳು, ಊಟ ತಿಂಡಿಗಳು ಎಲ್ಲವನ್ನು ವರ್ಣಿಸುವ ಅಕ್ಷರಗಳು ಕಾಶ್ಮೀರದ ಪ್ರವಾಸವನ್ನೇ ಮಾಡಿಸುತ್ತವೆ.

“ಕಶೀರ” ಸಿಕ್ಕಿದರೆ ಓದಿ.

  • ಶ್ವೇತಾ ಕಕ್ವೆ
    ಜೂನ್ 23, 2019; ಆದಿತ್ಯವಾರ
Creative Commons License
This work is licensed under a Creative Commons Attribution-NonCommercial-NoDerivatives 4.0 International License.

Leave a Reply

Your email address will not be published. Required fields are marked *