ಹಲಸಿನ ಪದ

(ಆರ್ಥಗಳಿಗೆ ಟಿಪ್ಪಣಿ ಸಂಖ್ಯೆ1ಟಿಪ್ಪಣಿಯನ್ನು ಒತ್ತಿ)
ಆಚ ಮನೆಯ ಅಟ್ಟುಂಬಳಂದ
ಬತ್ತಾ ಇದ್ದೊಂದು ಪರಿಮ್ಮಳಾ.
ಹಲಸಿನ ಹಣ್ಣಿನ ಸುಟ್ಟವು ಕಾಣ್ತು,
ಎಣ್ಣೆಗೆ ಬಿಟ್ಟವು ಬಳಂಬಳ..2
ಆಚ = ಆಚೆ
ಅಟ್ಟುಂಬಳಂದ = ಅಟ್ಟು+ಉಂಬ+ಒಳ = ಅಡಿಗೆ+ಊಟದ+ಕೋಣೆ
ಬತ್ತಾ ಇದ್ದೊಂದು =ಬರುತ್ತಾ ಇದೆ ಒಂದು
ಪರಿಮ್ಮಳಾ = ಪರಿಮಳ


ಆಗಳೇ ಕಂಡಿದೆ ರೆಚ್ಚೆಯ ಗೂಂಜಿಯ
ಗಡಸುಗ ಅಗುದು ತಿಂಬದರ.
ವರ್ಷದ ಶುರುವಿನ ಹಲಸಿನ ಹಣ್ಣು,
ಬಿಡ್ಲೆ ಎಡಿಗ ನಮಗದರ..?3
ಆಗಳೇ = ಆಗಲೇ
ರೆಚ್ಚೆ= ಸಿಪ್ಪೆ
ಗೂಂಜಿ =ತೋಳೆಗಳ ತೊಟ್ಟು
ಗಡಸುಗ = ಕರು ಹಾಕದ ದನ
ಅಗುದು ತಿಂಬದರ = ಅಗಿದು ತಿನ್ನುವುದನ್ನು
ಶುರುವಿನ =  ಮೊದಲಿನ
ಬಿಡ್ಲೆ ಎಡಿಗ = ಬಿಡಲು ಸಾಧ್ಯವೇ 
ನಮಗದರ = ನಮಗೆ ಅದನ್ನು..


ಈಗಳೇ ಹೆರಟರೆ ಸಿಕ್ಕುಗು ಎನಗೂ
ಅಚ್ಚುಮಿಯಕ್ಕ ಕೊಡದ್ದಿರ.
ಬಪ್ಪಗ ನಾಲ್ಕು ಸೊಳೆತೆಕ್ಕೊಳೆಕ್ಕು
ನಾಳಂಗೆ ದೋಸೆ ಮಾಡ್ವದರ..4
ಈಗಳೇ = ಈಗಲೆ
ಹೆರಟರೆ = ಹೊರಟರೆ (ಹೋದರೆ)
ಸಿಕ್ಕುಗು = ಸಿಗಬಹುದು
ಎನಗೂ = ನನಗೂ
ಅಚ್ಚುಮಿಯಕ್ಕ = ಲಕ್ಷ್ಮೀ ಅಕ್ಕ  ಲಕ್ಷ್ಮೀ = ಅಚ್ಚುಮಿ
ಕೊಡದ್ದಿರ = ಕೊಡದಿರಳು
ಬಪ್ಪಗ = ಬರುವಾಗ
ಸೊಳೆ = ಹಲಸಿನ ತೋಳೆ
ತೆಕ್ಕೊಳೆಕ್ಕು = ತೆಗೆದುಕೊಳ್ಳ ಬೇಕು
ನಾಳಂಗೆ = ನಾಳೆಗೆ
ಮಾಡ್ವದರ = ಮಾಡೋಣ ಅದನ್ನು..

ದೋಸೆಗೆ ಶುಂಠಿ ಚಟ್ನಿದೆ ಮಾಡುವ,
ಇಲ್ಲದ್ರೆನಗೆ ಕೂಪಲೆಡಿಯ.
ನಾಲ್ಕೈದು ದೋಸೆಗ ಆದರೂ ಬೇಕು,
ತೆಳ್ಳಂಗೆ ಎರದರೆ ಸಾಕಾಗ!5
ಇಲ್ಲದ್ರೆನಗೆ = ಇಲ್ಲದಿದ್ದರೆ ನನಗೆ 
ಕೂಪಲೆಡಿಯ = ಕುಳಿತತುಕೊಳ್ಳಲಾಗದು
ತೆಳ್ಳಂಗೆ = ತೆಳ್ಳಗೆ
 ಎರದರೆ = ಹುಯ್ದರೆ
ಸಾಕಾಗ = ಸಾಕಾಗದು


ಎಂತಕೂ ಇರಲಿ ತೆಳ್ಳವು ಅಕ್ಕಿ,
ಬೊದುಲಲಿ ಉದಿಯಪ್ಪನ್ನಾರ.
ಹಿಟ್ಟಿನ ಕಡದು ಚುಂಯಿಚುಂಯಿ ಎರದು
ಒಟ್ಟಿಂಗೆ ತಿಂಬ ನಾವದರ..6
ಎಂತಕೂ = ಯಾವುದಕ್ಕೂ
ತೆಳ್ಳವು = ನೀರುದೋಸೆ
ಬೊದುಲಲಿ = (ನೀರಲ್ಲಿ) ನೆನೆಯಲಿ
ಉದಿಯಪ್ಪನ್ನಾರ = ಸೂರ್ಯೋದಯದ ತನಕ
ಹಿಟ್ಟಿನ = ಹಿಟ್ಟನ್ನು (ದ್ವಿತಿಯಾ ವಿಭಕ್ತಿ, ಷಷ್ಠಿ ಅಲ್ಲ)
ಕಡದು = ಕಡೆದು 
ಎರದು = ಹುಯ್ದು
ಒಟ್ಟಿಂಗೆ = ಒಟ್ಟಿಗೆ
ತಿಂಬ = ತಿನ್ನುವ 
ನಾವದರ = ನಾವು ಅದನ್ನು


ಸುಟ್ಟವು, ಕೊಟ್ಟಿಗೆ, ಬೇಳೆಯ ಹೋಳಿಗೆ
ಎಲ್ಲವು ಆವ್ತು ಒಟ್ಟಾರೆ.
ಊರಿಡಿ ಪರಿಮ್ಮಳ,ತಡವಲೆ ಎಡಿಯ,
ಒಂದರಿ ಹಣ್ಣಿನ ಕೊರದರೆ..7
ಸುಟ್ಟವು = ಕಜ್ಜಾಯ,ಮುಳ್ಕನ
ಕೊಟ್ಟಿಗೆ = ಕಡುಬು
ಬೇಳೆ = ಹಲಸಿನ ಬೀಜ
ಎಲ್ಲವು ಆವ್ತು ಒಟ್ಟಾರೆ = ಇವೆಲ್ಲವನ್ನೂ ಮಾಡಬಹುದು.

ಊರಿಡಿ ಪರಿಮ್ಮಳ = ಊರಿಡೀ ಮರಿಮಳ,
ತಡವಲೆ = ತಡೆಯಲು
ಎಡಿಯ = ಸಾಧ್ಯವಿಲ್ಲ
ಒಂದರಿ ಹಣ್ಣಿನ ಕೊರದರೆ = ಒಮ್ಮೆ ಹಣ್ಣನ್ನು ಕೊರೆದು ತುಂಡು ಮಾಡಿದಮೇಲೆ..

ಜಾಲಿನ ಕರೆಯ ತುಳುವನ ಸುಟ್ಟವು,
ತೋಟದ ಬಕ್ಕೆಯ ಬೆಶಿ ಸೀವು.
ಸೋಂಟೆಯ ಹೊರಿವಲು, ಉಪ್ಪಿಲಿ ಹಾಕುಲು
ನಮ್ಮವು ಬಂದು ಕೇಳ್ತವು..8
ಜಾಲಿನ = ಜಾಲು+ಇನ = ಅಂಗಳ+ದ
ಕರೆಯ = ಕೊನೆಯ, ಮೂಲೆಯ
ತುಳುವ = ಒಂದು ರೀತಿಯ ಹಲಸು, ತೋಳೆಗಳು ಮೆತ್ತಗೆ ಇರುತ್ತವೆ
ಸುಟ್ಟವು =ಕಜ್ಜಾಯ
ಬಕ್ಕೆ = ಇನ್ನೊಂದು ಬಗೆಯ ಹಲಸು, ತೋಳೆಗಳು ಗಟ್ಟಿಯಿರುತ್ತವೆ 
ಬೆಶಿ = ಬಿಸಿ
ಸೀವು = ಪಾಯಸ
ಸೋಂಟೆ = ಹಲಸಿನ ಚಿಪ್ಸ್  
ಹೊರಿವಲು = ಹುರಿಯಲು
ಉಪ್ಪಿಲಿ = ಉಪ್ಪಿನಲ್ಲಿ
ಹಾಕುಲು = ಹಾಕಲು
ನಮ್ಮವು  = ನಮ್ಮವರು (ಬಂಧುಗಳು)
ಕೇಳ್ತವು = ಕೇಳುತ್ತಾರೆ 
 

ಆಚೊಡೆ ಈಚೊಡೆ ಪಗರುವ ಹಣ್ಣುಗ,
ಇಡ್ಕದ್ದೆ ತಿಂಬದೆ ನಮ್ಮ ಕೆಲಸ..
ಬೇಳೆಯ ಮಡುಗಿ ಸಾಂತಾಣಿ ಮಾಡಿರೆ,
ವರ್ಷಕ್ಕಾತು ಎಕ್ಕಸಕ..9
ಆಚೊಡೆ = ಆಚ+ಹೊಡೆ = ಆ + ಬದಿ
ಈಚೊಡೆ = ಈಚ+ಹೊಡೆ = ಈಬದಿ
ಪಗರುವ = ಸಾಗುವ,ಕೈಬದಲಾಯಿಸುವ
ಹಣ್ಣುಗ = ಹಣ್ಣುಗಳು
ಇಡ್ಕದ್ದೆ = ಎಸೆಯದೆ
ತಿಂಬದೆ = ತಿನ್ನುವುದೇ
ಬೇಳೆ = ಬೀಜ
ಮಡುಗಿ = ಇಟ್ಟುಕೊಂಡು, ಸಂಗ್ರಹಿಸಿ ಎಂಬ ಅರ್ಥದಲ್ಲಿ
ಸಾಂತಾಣಿ = ಹಲಸಿನ ಬೀಜ ಉಪ್ಪು ಹಾಕಿ ಬೇಯಿಸಿ, ಬಿಸಿಲಲ್ಲಿ ಒಣಗಿಸಿದ ಕುರುಕಲು ತಿಂಡಿ
ಮಾಡಿರೆ = ಮಾಡಿದರೆ,
ವರ್ಷಕ್ಕಾತು = ವರ್ಷವಿಡೀ ತಿನ್ನಲು
 ಎಕ್ಕಸಕ. = ಬೇಕಾದಷ್ಟಾಯಿತು

ರೆಚ್ಚೆಯು ಬಿಡದ್ದ ಗೂಂಜಿಯು ಬಿಡದ್ದ
ಹಲಸಿನ ಹಣ್ಣು ನಮಗಾಗ.
ಪರಿಮ್ಮಳ ಬಪ್ಪ ತುಳುವನ ಕೊಟ್ಟರೆ,
ಎರಡೆರಡು ಗಡಿಗ ಸಾಕಾಗ..10
ರೆಚ್ಚೆಯು ಬಿಡದ್ದ = (ತೋಳೆ) ಸಿಪ್ಪೆಯ ಬದಿಯಿಂದಲೂ ಬಿಡಿಸಲಾಗದೇ
ಗೂಂಜಿಯು ಬಿಡದ್ದ = ತೊಟ್ಟಿನ ಬದಿಯಿಂದಲೂ ಬಿಡಿಸಲಾಗದೇ
(ಜಟಿಲ ಸಮಸ್ಯೆಗಳಿಗೆ ಇದು ಉಪಮೆ, ಗಾದೆ)

ನಮಗಾಗ = ನಮಗೆ ಆಗದು.
ಬಪ್ಪ = ಬರುವ
ಗಡಿಗ = ಗಡಿಗಳು = ತುಂಡು ( ಹಲಸಿನ 1/8  ಭಾಗ)
ಸಾಕಾಗ = ಸಾಕಾಗದು, ತಿಂದು ತೃಪ್ತಿಯಾಗದು.

ಬೇಗವೇ ಹೋವ್ತೆ, ಅಜಪ್ಪುಲೇ ಸೇರ್ತೆ,
ಎಲ್ಲರು ಹಂಚಿರೆ ರುಚಿ ಜಾಸ್ತಿ..
ಅಜ್ಜಂದ್ರು ನೆಟ್ಟದು ಆ ಮರ ಅಂದು,
ಇಂದಿಂಗು ಪಾಲಾಗದ್ದ ಆಸ್ತಿ..!11
ಬೇಗವೇ ಹೋವ್ತೆ = ಬೇಗನೆ ಹೋಗುತ್ತೇನೆ
ಅಜಪ್ಪುಲೆ = ತೋಳೆ ಬಿಡಿಸಲು ಸೇರುತ್ತೇನೆ,
ಹಂಚಿರೆ = ಹಂಚಿದರೆ
ಅಜ್ಜಂದ್ರು  = ಅಜ್ಜಂದಿರು
ನೆಟ್ಟದು = ನೆಟ್ಟದ್ದು
ಇಂದಿಂಗು = ಇಂದಿಗೂ
ಪಾಲಾಗದ್ದ ಆಸ್ತಿ = ಪಾಲು ಮಾಡಿಕೊಳ್ಳದ 



...
  • ಶ್ವೇತಾ ಕಕ್ವೆ (26-02-2021)

5 Replies to “ಹಲಸಿನ ಪದ”

  1. ಓದ್ತಾ ಓದ್ತಾ ಆಪ್ತವಾಯ್ತು. ಹಲಸು, ನಿಮ್ಮ ಸಂಸ್ಕೃತಿ ಭಾಗವೇನೋ ಅನಿಸುವಂತಿದೆ ಪದ. ಅದು ಹೌದು ಸಹ. ನಮ್ಮ ಗುರುಗಳ ಮನೆಗೆ ಹೋದಾಗ ತಿಂದ ಹಲಸಿನ ಖಾದ್ಯಗಳೆಲ್ಲಾ ನೆನಪಾದವು.😊😀

  2. ಹಲಸಿನ ಹಣ್ಣಿನ (ಸುಲಲಿತವಾಗಿ ಹಾಡಬಹುದಾದ) ಈ ಪದ, ಅದರ ಸುತ್ತಲಿನ ಕಥೆ, ಚಿತ್ರ ಗಳು ಚೆನ್ನಾಗಿವೆ; ನಮ್ಮನ್ನು ನಮ್ಮ ಬಾಲ್ಯಕ್ಕೊಯ್ಯುತ್ತವೆ! ನಿಮ್ಮ ಅರ್ಥಸೂಚಿಯೂ ಬಲು ಉಪಯುಕ್ತ.

    ತುಳುವ (ನಮ್ಮ ಸಾಗರದ ಕಡೆ, ಬಿಳುವ) ಸರಾಗವಾಗಿ ಬಿಡಿಸಿ, ಗುಳುಂ ಎಂದು ನುಂಗಲೋ, ಇಲ್ಲಾ ಕಡುಬು ಮಾಡಲೋ ಸೂಕ್ತ. ಆದರೆ ಬಕ್ಕೆ, ಮಾತ್ರ, ಕಡಿದು, ಹೆಚ್ಚಿ ಕಡಿ ಮಾಡಿ, ಮೇಣ ಅಂಟದಂತೆ ಕೈಗೆ ಕೊಬ್ಬರಿ ಎಣ್ಣೆ ಹಚ್ಚಿ , ಸೊಳೆ (ತೊಳೆ) ಬಿಡಿಸುವುದು ಕಷ್ಟವಾದರೂ, ಕೆಲಸ ಜಾಸ್ತಿಯಾದರೂ, ರುಚಿ/ಸಿಹಿಯಲ್ಲಿ ಎಣೆಯಿಲ್ಲದ್ದು!

    ಬಕ್ಕೆ ಹಲಸಿನ ಬಗೆ ಹಲವು; ಮರದ ಜಾಗದ ಮೇಲೆ, ರುಚಿ/ಪರಿಮಳದ ಮೇಲೆ, ಹಣ್ಣಿನ ಗಾತ್ರದ ಮೇಲೆ, ಬಣ್ಣದ ಮೇಲೆ; ಹೀಗೆ ಒಂದೊಂದೂ ತನ್ನದೇ ಕಥೆ ಹೇಳುವಂಥವು, ಶ್ವೇತಾ ಇಲ್ಲಿ ಸೊಗಸಾಗಿ ಹಾಡಿದಂತೆ!

    ವಂದನೆಗಳು!

    ವಿನಾಯಕ ಹುಣಸೇಕೊಪ್ಪ

Leave a Reply

Your email address will not be published. Required fields are marked *