ಹಗಲಿರುಳ ಹಲಗೆಯ ಹಾಡು

ಮೆತ್ತನೇ ಹತ್ತಿಯs
ಮೆತ್ತೆಗೇ ನೆತ್ತಿಯ
ನ್ನೊತ್ತೆ ಅರಳಿತ್ತು ಆ ಇರುಳ ಹಗಲು1ಮೇಲ್ಪದರ:  ಹಾಯಾಗಿ ಮಲಗಿದ್ದೆ, ಹತ್ತಿತ್ತು ನಿದ್ದೆ, ಸ್ವಪ್ನ ಪ್ರಪಂಚದಾ ಒಳಗೆ ಇದ್ದೆ
ನಡುಪದರ: ಸ್ವಪ್ನ ಸ್ಥಿತಿಯನ್ನು ಅದರೊಳಗಿಂದ ನೋಡಿದಾಗ, ಎಚ್ಚೆತ್ತಿರುವಂತೇ, ಹಗಲೆಂದೇ ಅನ್ನಿಸುತ್ತದೆ
ಒಳಪದರ: ಸುಖದಲಿದ್ದವನಿಗೇ ಸ್ವಪ್ನದಾ ಭ್ರಾಂತಿ ಬೇಕು/ಬರುವುದು. ಧ್ವನಿ: ಸುಖವಿಲ್ಲದವನಿಗೆ ಮಾತ್ರ ಕನಸಿನಿಂದ ಹೊರಬರುವ ತುಡಿತವೇ?

ಹೊತ್ತುಗೊತ್ತಿನ ಅರಿವು
ಇತ್ತು ಆ ಮತ್ತಿನಲು
ಎಚ್ಚರಿಸೆ ಅಚ್ಚರಿಯೆ ತಟ್ಟಿ ಹೆಗಲು2ಮೇಲ್ಪದರ:  ಎಚ್ಚರದಲ್ಲಿದ್ದಂತೆಯೇ ಇತ್ತು, ಕನಸೊಂದು ಹತ್ತಿತ್ತು, ಕಥೆ ವಿಚಿತ್ರವಾಗಿತ್ತು
ನಡುಪದರ: ಕನಸಿನಲಿ ಕನಸೆಂದರಿವಾದಾರೆ ಆದು ಕನಸೇ? ಹೌದಾದರೆ ?ಅಲ್ಲವಾದರೆ?
ಒಳಪದರ: ಸ್ವಪ್ನದೊಳಗೊಳಗೆ ಎಚ್ಚರಿಸಿದ್ದು ಯಾರು? ಅಚ್ಚರಿ/”conciousness is just pure wonder”


ಬೆನ್ನುಡಿಗು ಮುನ್ನುಡಿಗು
ಕನ್ನಡಿಯು ನಡುವಿತ್ತು
ಅಡಿಗಡಿಗು ಬುಡಮೇಲು ಗೊಜಲು ಗೊಜಲು3ಮೇಲ್ಪದರ: ಕನಸಿನ ಕಥೆ ಹಿಂದು ಮುಂದಾಗಿ, ತಲೆಕೆಳಗಾಗಿತ್ತು, ಹೋದ ಹಾದಿಯಲ್ಲೇ ವಾಪಾಸ್ ಬಂದಿತ್ತು
ನಡುಪದರ: ಈ ಸಾಲುಗಳು ಕನಸಿನ ಬಗ್ಗೆಯೇ? ಜಾಗೃತಾವಸ್ಥೆಯ ಬಗ್ಗೆಯೇ? ಇದು ನಿಜಜೀವನದಲ್ಲೂ ಅನ್ನಿಸುತ್ತದಲ್ಲಾ?
ಒಳಪದರ: self referential nature of thought.

ಉರುಳುತುರುಳುತ ಜಾವ
ಸುರುಳಿಸುತ್ತಿದೆ ಭಾವ
ಮುಗಿದಿತ್ತು ಕಥೆ ಮುನ್ನುಡಿಗು ಮೊದಲು4ಮೇಲ್ಪದರ: ಸಮಯ ಸರಿದಂತೆ, ಕನಸಿನ ಕಥೆ ಮುಗಿದೇ ಹೋಯ್ತು, ನೆನಪೂ ಉಳಿದಿಲ್ಲ
ನಡುಪದರ: ಕಥೆ ತನ್ನ ಮೇಲೇಯೇ ತಾನು ಸುತ್ತುಕೊಳ್ಳುತ್ತಿದೆ, ಭಾವವನ್ನು ಸುತ್ತಿಸುತ್ತಿದೇ?ಭಾವಗಳು ನನ್ನನ್ನು ಸುತ್ತಿಸುತ್ತಿವೇ? ಎಲ್ಲಿಗೂ ಮುಂದುವರಿಯುತ್ತಿಲ್ಲ.
ಒಳಪದರ: ಇದು ನಡೆಯುತ್ತಿರುವುದೆಲ್ಲಿ? ನಿಜದಲ್ಲೋ, ಸ್ವಪ್ನದಲ್ಲೋ? 


ಅಳಿಸದಪಕ್ವ ಚಿತ್ತು56,4 ಮಾತ್ರೆಗಳ ಛಂದೋಭಂಗ
ಹಿಡಿ ಬಳಪ ಕ್ವಚಿತ್ತು6ಪಕ್ವಚಿತ್ತು ಎಂಬ ಯಮಕಾಲಂಕಾರ, ಸ್ವಲ್ಪ ಒತ್ತಾಯದ್ದು
ಎಳೆದೆಳೆದು ಗೆರೆಯನ್ನು ಮಡಿಸಿ ಬೆರಳು7ಮೇಲ್ಪದರ: ಆಯ್ಯೋ, ಕನಸೇ ?? ಮರೆತು ಬಿಡಿ, ಎದ್ದು ನೇರ ನಡೆ
ನಡುಪದರ: ಅಳಿಸದ ಅಪಕ್ವ ಮನಸ್ಸಿಗೆ ಬರುವ ಮೌಢ್ಯ ಎಂದು ತಿಳಿದು ಸರಿಪಡಿಸಲು ಹೊರಟೆ [ಧ್ಯಾನ, ಯೋಗಾದಿಗಳು] ಕಥೆ/ಜೀವನ ಕ್ರಮದ ಅಕ್ಷರಗಳನ್ನು ಗೀಟಿನ ಮಧ್ಯೆ ಬರೆಯಲೋ ಎಂಬಂತೆ, ಹಲಗೆಯ ಮೇಲೇ ಗೆರೆಯೆಳೆದೆ
ಒಳಪದರ: ಬೆರಳುಗಳನ್ನು ಮಡಚುವುದು ಮುಷ್ಠಿ ಮಾಡಲು, ಪ್ರಯತ್ನ ಪೂರ್ವಕ, ಹಠ ಕಟ್ಟಿ

ಮೂಡಿತ್ತು ಉರುಟುರುಟೆ
ಎಡಕೆ ಬಲಕೆಳೆದ ಗೆರೆ
ಹಲಗೆಯೇ ಒಡಕೊಡಕು ಮಲಗು ಮರಳು8ಮೇಲ್ಪದರ: ಎಷ್ಟಾದರೂ ಕನಸು, ಅಡ್ಡಾದಿಡ್ಡಿಯೇ ಬಂತು ನೇರಮಾಡಲು ನೋಡಿದ್ದು ದಂಡ
ನಡುಪದರ: ಗೀಟು ನೇರವಾಗಿ ಬರಲೇ ಇಲ್ಲ, ತಳಪಾಯವೇ ಸರಿಯಿಲ್ಲ, ಮನಸ್ಸೆಂಬ ಹಲಗೆಯೇ ಪೂರ್ಣವಲ್ಲ
ಒಳಪದರ: ಏನು ಮನಕೆಟಕುವ ತಳಪಾಯ? ಅದು ಒಡಕಾದರೆ, ಒಡಕ ತೋರಿದುದಾರು?



-ಗಣೇಶಕೃಷ್ಣ ಶಂಕರತೋಟ
ಏಪ್ರಿಲ್ ೨೪ ೨೦೧೯

ಆರ್ಥಗಳಿಗೆ ಟಿಪ್ಪಣಿ ಸಂಖ್ಯೆ9ಟಿಪ್ಪಣಿಯನ್ನು ಒತ್ತಿ
Creative Commons License
This work is licensed under a Creative Commons Attribution-NonCommercial-NoDerivatives 4.0 International License.

Leave a Reply

Your email address will not be published. Required fields are marked *