ಎಷ್ಟರ ಷಕಾರ

ಮೃತ್-ಶಕಟಿಕಾ ನಾಟಕದ ಖಳನಾಯಕನಿಗೆ ಸ-ಕಾರ ಹೇಳಲು ಬಾರದೆ ಶ ಶ ಎಂದು ಹೇಳುತ್ತಿರುತ್ತಾನೆ. ಆ ಪಾತ್ರದ ಹೆಸರೇ “ಶಕಾರ”. ಕನ್ನಡದಲ್ಲಿ ಶಕಾರ ಷಕಾರಗಳನ್ನು ಸಾಕಾರ ಮಾಡುವ ಸಣ್ಣ ಪ್ರಯತ್ನ ಕೆಳಗಿದೆ.

ಅಡಿ ಟಿಪ್ಪಣಿಗಳಿಗೆ ಸಂಖ್ಯೆ1ಟಿಪ್ಪಣಿಯನ್ನು ಒತ್ತಿ

ಕನ್ನಡದಲ್ಲೇ ಹುಟ್ಟಿದ ಷಕಾರ ಶಬ್ದ

ಕನ್ನಡದಲ್ಲಿ ಕಾರ ಇರುವುದು ಸಂಸ್ಕೃತ ಮೂಲದ ಶಬ್ದಗಳಲ್ಲಿ ಮಾತ್ರ, ಕನ್ನಡ ಮೂಲದ ಶಬ್ದಗಳಲ್ಲಿ ಕಾರ ಮಾತ್ರ ಇದೆ. ಇದಕ್ಕೆ ಅಪವಾದ ಅಷ್ಟು ಇಷ್ಟು ಎಷ್ಟು ಎಂಬ ಮೂರು ಪದಗಳು 2 ಇದರಷ್ಟು, ಇನ್ನಷ್ಟು ಮತ್ತೆಷ್ಟು ಇತ್ಯಾದಿ ಸಂಧಿ ಸಮಾಸಗಳು ಕೂಡ. ಇವುಗಳಿಗೆ ಸಂಸ್ಕೃತ ಮೂಲ ಶಬ್ದ ಸಿಗುವುದಿಲ್ಲ. ಹಾಗಾದರೆ ಕನ್ನಡದಲ್ಲೇ ಹುಟ್ಟಿದ ಶಬ್ದಗಳಲ್ಲಿ ಪಟ್ಟೆ ಹೇಗೆ ಬಂತು ಎಂಬುದು ಪ್ರಶ್ನೆ (3ಕನ್ನಡ ಕಲಿ youtube channel). ಇದಕ್ಕೆ ಹಳಬರ ಸಂಸ್ಕೃತ ಪ್ರೇಮವೇ ಕಾರಣವೆಂದು ಹೇಳಿದ್ದಿದೆ. ಇದಲ್ಲದೆ ಹಲವೆಡೆ ಕನ್ನಡ ಪದಗಳಲ್ಲಿ ಇರುವ ಷಕಾರವನ್ನೆಲ್ಲ ತೆಗೆದು ಶಕಾರವನ್ನು ತುಂಬಿಸುವ ಕೆಲಸವೂ ನಡೆದಿದೆ. (ಇದು ಸರ್ವಥಾ ತಪ್ಪು, ಅಚ್ಚ ಕನ್ನಡದಲ್ಲಿ ಶಕಾರವೂ ಇಲ್ಲ.)

ಅದು ಬಿಡಿ, ಈ ಲೇಖನದ ಉದ್ದೇಶವೇ ಬೇರೆ. ಇಲ್ಲಿ ತೋರಿಸ ಹೊರಟಿರುವುದು ಇಷ್ಟೇ…
ಕನ್ನಡದ ಕಾರವು4 ಹೌದು ಟ! ಭಾರತೀಯ5ದ್ರಾವಿಡ ಸಮೇತ ಎಲ್ಲಾ ಭಾರತೀಯ ಭಾಷೆ ಭಾಷೆಗಳಲ್ಲಿನ ಮೂರ್ಧನ್ಯ ಅಕ್ಷರವೇ ಆಗಿದ್ದರೆ
ಪಂಪನು ಭೀಮನ ಬಾಯಲ್ಲಿ ಹೇಳಿಸಿದ “ಎನ್ನ ನುಡಿ ಟಾಠಡಾಢಣ” ಎಂಬುದು ಖಂಡತುಂಡವಾಗಿಸುವ ಗಂಡು ಶಬ್ದವೇ ಆಗಿದ್ದರೆ…,
ರಾಮಾರ್ಜುನರ ಬಿಲ್ಲಿನ ಹೆದೆ ಮೀಟನ್ನು ಬಣ್ಣಿಪ ಸದ್ದು ಠೇಂಕಾರವೇ ಆಗಿದ್ದರೆ 6 ಟಕಾರ ಇದರ ಅಲ್ಪಪ್ರಾಣ…,
ಈ ಟಕಾರದ ಮೊದಲು ಬರೆದ ಸಕಾರ ಶಕಾರಗಳೆಲ್ಲವೂ ಕಾರವೇ ಆಗಿ ಮಾನವನ ಬಾಯಲ್ಲಿ ಉಚ್ಚರಿಸಲ್ಪಡುತ್ತವೆ. ಇದಕ್ಕೆ ಮಾನವನ ಬಾಯಿಂದ ಶಬ್ದ ಹೊರಡುವ ತಾಂತ್ರಿಕ ರೀತಿ ಕಾರಣವೇ ಹೊರತು ಕನ್ನಡ, ಸಂಸ್ಕೃತ, ದ್ರಾವಿಡಗಳ ಪ್ರಶ್ನೆಯೇ ಇಲ್ಲಿ ಬರುವುದಿಲ್ಲ.

ಟಕಾರದ ಸದ್ದು

‘ಎಷ್ಟು’ ಪದದ ಹುಟ್ಟನ್ನು, ಅದರೊಳಗಿರುವ ಷಕಾರವನ್ನು ನೋಡಬೇಕಾದರೆ ಮೊದಲು ಕನ್ನಡದಲ್ಲಿನ ಟ-ಕಾರದ ಉಚ್ಚಾರಣೆಯನ್ನು ಗಮನಿಸಬೇಕಾದ್ದು ಮುಖ್ಯ. ಠೇಂಕಾರ ಎಂದು ಜೋರಾಗಿ ಹೇಳಿ ನೋಡಿ. ನಾಲಿಗೆ ಹಿಂದಕ್ಕೆ ಮಡಚಿ, ಹಿಂಭಾಗದಿಂದ ಬಾಯಿಯ ಮಾಡನ್ನು (ಸೂರನ್ನು)ಒತ್ತಿ ಮುಂದಕ್ಕೆ ಚಿಮ್ಮುತ್ತದೆ. ಚಿತ್ರ-1 ರಲ್ಲಿ 18 ಬಂದು 6-7 ಬರೆದಲ್ಲಿಗೆ ಒತ್ತುತ್ತದೆ. ಇದುವೇ ಟಠಡಢಣ ಗಳ ಉಚ್ಚಾರಣಾ ಸ್ಥಾನ.

ಚಿತ್ರ 1: ಇಲ್ಲಿಂದ

ಆಂಗ್ಲ ಭಾಷೆಯ T ಕನ್ನಡ (ಭಾರತೀಯ) ಟಿ ಅಲ್ಲ7“Indian English typically uses retroflex [ ʈ ] and [ ɖ ] where other dialects of English use alveolar [t] and [d].” reference! ಇದನ್ನು ತಿಳಿಯುವುದು ಮುಖ್ಯ. T ಗೆ ಎರಡು ಉಚ್ಚಾರಣೆಗಳಿವೆ, ಒಂದು ತ-ಕಾರ (therapy, third, path, three, pista), ಇನ್ನೊಂದು ಟ+ತ+ಚ ಗಳ ಮಿಶ್ರಣವಾದ, ಟಕಾರಕ್ಕಿಂತ ಕೋಮಲವಾದ ಸದ್ದು (Teeth, Tea,cuT, Tape). ಇಲ್ಲಿ ನಾಲಿಗೆ ತುದಿಯ ಮೇಲ್ಭಾಗ ಹಲ್ಲಿನ ಹಿಂಬಾಗಕ್ಕೆ ತಾಗುತ್ತದೆಯಷ್ಟೆ. ಚಿತ್ರ-1 ರಲ್ಲಿ 16-17 ಬಂದು 4 ಕ್ಕೆ ತಾಗುತ್ತದೆ. ಆಂಗ್ಲ ಲಿಪಿಯಲ್ಲಿ ಬರೆದ ಭಾರತೀಯ ಭಾಷೆಯನ್ನು ಓದಿದವರಿಗೆ ಇಲ್ಲಿ ಉಚ್ಚಾರಣೆ ಗೊಂದಲವಾಗುವುದು ಸಹಜ. ಅದೇ ರೀತಿ ಭಾರತೀಯ ಭಾಷೆಯನ್ನಾಡುತ್ತಾ ಬೆಳೆದವರ tea, tape, trust ಗಳು ಅಂಗ್ಲರಿಗೆ ಕರ್ಕಶವಾಗಿ ಕೇಳುವುದೂ ನಿಜ 8 ಭಾರತೀಯರ ಬಾಯಲ್ಲಿ ಬರುವ ಟ Retroflex Plosive, ಭಾರತೀಯ ಮಾತೃಭಾಷೆಯಲ್ಲದವರು ಉಚ್ಚರಿಸುವ ರೀತಿ Alveolar Plosive . ಒಂದು ಬಾರಿ “ಎನ್ನ ನುಡಿ TTDDN” ಎಂದು ಜೋರಾಗಿ ಹೇಳಿ ನೋಡಿ, ವ್ಯತ್ಯಾಸ ಸ್ಫುಟವಾಗುತ್ತದೆ. ಸರಿ ತಪ್ಪುಗಳ ವಿಚಾರವಲ್ಲ, T ಟಿ ಗಳ ವ್ಯತ್ಯಾಸಗಳನ್ನಷ್ಟೇ ಗಮನಿಸೋಣ. ಇದಕ್ಕೆ “ಎಷ್ಟ”ರ ಹುಟ್ಟಿನಲ್ಲಿ ಮಹತ್ವದ ಪಾತ್ರವಿದೆ.

ಅಂದು ಭೀಮನ ಬಾಯಲ್ಲಿ ಬಂದ “ಟಾಠಡಾಢಣ” ಖಚಿತತೆಯನ್ನು ಧ್ವನಿಸಿದವು 9ಗೂಡಾರ್ಥವನ್ನು. ಇಂದು ಅದೇ ಮಾತು ಟಕಾರದ ಉಚ್ಚಾರಣೆಯನ್ನು ತಿಳಿಸಿಕೊಡಬಲ್ಲುದು.

ಅಷ್ಟು ಇಷ್ಟು ಎಷ್ಟರ ಹುಟ್ಟು

ಹಳಗನ್ನಡದಲ್ಲಿ ಈ ಶಬ್ದಗಳಿಲ್ಲ. ಸಂಸ್ಕೃತದಲ್ಲಿ ಇವಕ್ಕೆ ತತ್ಸಮಗಳಿಲ್ಲ, ಮೂಲ ಶಬ್ದಗಳಿಲ್ಲ. ಹಳಗನ್ನಡದಲ್ಲಿ ಆಸು ಈಸು ಏಸು ಎಂಬ ಶಬ್ದಗಳಿವೆ. ಅನಿತು ಇನಿತು ಎನಿತು ಎಂಬ ಅರ್ಥ. ಅಂತು ಇಂತು ಎಂತು ಎಂಬ ರೂಪಗಳೂ ಇವೆ. ಅಂತು ಇಂತು ಎಂತು ಗಳು ಹಳಗನ್ನಡದಲ್ಲಿ ಅಂತುಟು ಇಂತುಟು ಎಂತುಟು ರೂಪದಲ್ಲಿ ಹಲವು ಕಾವ್ಯಗಳಲ್ಲಿ ಕಾಣುತ್ತವೆ 10ಪಂಪ ಭಾರತ, ಧರ್ಮಾಮೃತ, ವಡ್ಡಾರಾಧನೆ ಇತ್ಯಾದಿಗಳನ್ನು ಚಂಪೂ ನುಡಿಗನ್ನಡಿ ಉದಾಹರಿಸುತ್ತದೆ. ಅಂತು <-> ಅಂತುಟು ಗಳಿಗಿರುವ ಸಂಬಂಧವೇ ಆಸು <-> ಆಸುಟು ಗಳ ನಡುವೆ ಇದೆ ಎಂದು ತಿಳಿಸಿ ಈ ಷಕಾರದ ರಹಸ್ಯ ಬಿಡಿಸುವ ಕೀಲಿ ಕೈ ಕೊಟ್ಟವರು ಶ್ರೀಯುತ ಪಾದೇಕಲ್ಲು ವಿಷ್ಣು ಭಟ್ಟರು (ಕ್ಲಬ್ ಹೌಸ್ ರಿಪ್ಲೇ 1:24:05). ಅಂತು ಎಂಬುದು ಅಂತುಟು ರೂಪ ಧರಿಸಿದಂತೆಯೇ, ಆಸು ಶಬ್ದ ಆಸುಟು ಎಂಬ ರೂಪ ಧರಿಸಿತು. ಆಸುಟು ಸಂಕ್ಷಿಪ್ತವಾಗಿ “ಅಷ್ಟು” ಆಯಿತು. ಈಸು, ಏಸು ಗಳು ಇಷ್ಟು ಎಷ್ಟು ಗಳಾದುವು.

ಆಸುಟು ಎಂಬುದು ಅಸ್ಟು ಅಥವಾ ಅಶ್ಟು ಯಾಕಾಗಲಿಲ್ಲ ಎಂಬುದಕ್ಕೆ ನಮಗೆ ಮೇಲಿನ ಟಕಾರದ ಕಥೆ ಬೇಕು. ಸಕಾರ ಶಕಾರ ಷಕಾರ ಗಳ ಉಚ್ಚಾರಣಾ ಸ್ಥಾನ ನೋಡಬೇಕು. ಸಕಾರಕ್ಕೆ ನಾಲಿಗೆಯ ತುದಿ ಹಲ್ಲುಗಳ ಬಳಿ ಮಲಗಿರುತ್ತದೆ (ಚಿತ್ರ-1 ರಲ್ಲಿ 4)11Alveolar Fricative (sibilant), ಶಕಾರಕ್ಕೆ ಸ್ವಲ್ಪ ಹಿಂದೆ (4-5)12Post-alveolar Fricative (sibilant), ಷಕಾರಕ್ಕೆ ಇನ್ನೂ ಹಿಂದೆಕ್ಕೆಳೆದು ತುಸುಮೇಲಕ್ಕೆತ್ತಿ(6-7)13Retroflex Fricative (sibilant), retroflex ಎಂದರೆ ನಾಲಿಗೆ ಹಿಂದಕ್ಕೆ ಮಡಚುವುದು ಸೂರಿಗೆ ತಗುಲಿಸದೇ ಉಚ್ಚರಿಸಬೇಕಾಗುತ್ತದೆ. ಈಗ ನೋಡಿ, ಸ್ಟ ಎನ್ನಲು ನಾಲಿಗೆಯನ್ನು 3ರಿಂದ ಹಿಂದಕ್ಕೆಳೆದು, ಹಿಂದಕ್ಕೆ ಮಡಚಿ 6ಕ್ಕೆ ಒತ್ತಿ ಮುಂದಕ್ಕೆ ಚಿಮ್ಮಬೇಕು. ಇದು ಅಸಾಧ್ಯ. ಇದೇ ರೀತಿ ಶ್ಟ ಕೂಡ ಹೇಳಲು ಕಷ್ಟ. ಸ್ಟ-ದ ಕಷ್ಟಗಳೇ ಶ್ಟ ಕ್ಕೂ ಇದೆ, ಮುಂದಕ್ಕೆ ಮಲಗಿರುವ ನಾಲಿಗೆಯನ್ನು ಹಿಂದಕ್ಕೆಳೆದು ಮಡಚಿ ಮೇಲೆತ್ತಿ ಟ(ಠಡಢಣ)ಕಾರ ವನ್ನು ಉಚ್ಚರಿಸಲು ವಿಜಾತೀಯ ಒತ್ತಕ್ಷರದಲ್ಲಿ ಅಸಾಧ್ಯವಾಗುತ್ತದೆ, ಒಂದೋ ಅಶ್-ಟು ಎಂದು ನಿಲ್ಲಿಸಿ ಹೇಳಬೇಕಾಗುತ್ತದೆ. ಅಥವಾ ಟಕಾರವನ್ನು ತ-ಮಿಶ್ರಿತವಾಗಿ ಆಂಗ್ಲದ T ರೀತಿಯಲ್ಲಿ ಹೇಳಬೇಕಾಗುತ್ತದೆ. ಷಕಾರಕ್ಕೆ ಈ ತೊಂದರೆಗಳಿಲ್ಲ. ಷ್-ಟು ಎಂಬಾಗ ನಾಲಿಗೆಯು ಸಲೀಸಾಗಿ ಹಿಂದಿನಿಂದ ಮೇಲಕ್ಕೆ ಹೋಗಿ ಷ್ ಆದಕೂಡಲೇ ಮುಂದೆ 6ಕ್ಕೆ ಒತ್ತಿ ಟು ಎಂದು ಸಲೀಸಾಗಿ ವೇಗವಾಗಿ ಹೇಳಬಹುದು. ಇದು ಸ್ಪಷ್ಟವಾಗಲು ಧನುಷ್ಠೇಂಕಾರ14ಅಥವಾ ಧನುಷ್ಠಂಕಾರ ಎಂದು ಜೋರಾಗಿ ಹೇಳಿ ನೋಡಿ, ಷ್ಠ ಎಂದಾಗ ಷಕಾರದ ಅನಿವಾರ್ಯತೆ ಸ್ಪಷ್ಟವಾಗುತ್ತದೆ. ಯಾರಾದರೂ ಷಕಾರದ ಉಚ್ಚಾರಣೆ ಹೇಗೆ ಎಂದು ಕೇಳಿದರೆ ಧನುಷ್ಠಂಕಾರವೆಂದಾಗ ಬರುವ ಷ ಎಂದು ಮಾದರಿಯಾಗಿ ಹೇಳುವಷ್ಟು ಸ್ಪಷ್ಟ.

ಸ್ವಾರಸ್ಯವೇನೆಂದರೆ ಷಕಾರಕ್ಕಿಂತ ಇಲ್ಲಿ ಟಕಾರವೇ ರಾಜ!. ಟ-ದ ಒತ್ತಾಯಕ್ಕೆ ಅದರ ಮೊದಲಿನ ಅಕ್ಷರ ಷ ವಾಗಿ ಬಂದಿದೆ. ಇದನ್ನು ಮನಗಂಡಾಗ ಕಶ್ಟ, ನಶ್ಟ ಇಶ್ಟ ವೆಂದೆಲ್ಲಾ “ಷ ಕನ್ನಡದಲ್ಲಿಲ್ಲ” ವೆಂದು “ತಿದ್ದಿದರೂ”, ಷಕಾರದ ಉಚ್ಚಾರಣೆಯೇ ಕೇಳಿ ಬರುತ್ತದೆಯೆಂಬುದು ನಿಶ್ಚಿತ. ಅಥವಾ ಪಂಪನದಲ್ಲದ ಯಾವುದೋ ಮೆದುವಾದ/ಸಪ್ಪೆ ಉಚ್ಚರಿಸಿಬೇಕಾದೀತು.ಈ ತಿದ್ದುವಿಕೆ “ಕನ್ನಡದಲ್ಲಿನ ಟಕಾರವೇ ಬೇರೆ, ಇತರ ಭಾರತೀಯ ಭಾಷೇಗಳ ಟಕಾರವೇ ಬೇರೆ” ಎಂದು ಪ್ರತಿಪಾದಿಸಿದ್ದಕ್ಕೆ ಸಮನಾದ ಅಸಂಬದ್ಧ ವಿಷಯ. ಸಂಸ್ಕೃತದಲ್ಲಿಯೂ ಶ ಷ ಗಳು ಉಚ್ಚಾರಣೆಯ ಅನುಕೂಲಕ್ಕೆ ಸರಿಯಾಗಿ ಬರುತ್ತವೆ, ಷಕಾರದ ಹೇರಿಕೆಯಿಲ್ಲ. ಟ-ವರ್ಗದ ಹಕ್ಕೊತ್ತಾಯಕ್ಕೆ ಹೆದರಿ ಷ ಬರುತ್ತದೆ. ಉದಾಹರಣೆಗೆ ದರ್ಶನ -> ದೃಷ್ಟಿ, ಸ್ಪರ್ಶ ->ಸ್ಪೃಷ್ಟ. ಒಂದೇ ಧಾತುವಿನಿಂದ ಹುಟ್ಟಿದರೂ ಪ್ರಕ್ರಿಯೆಯಲ್ಲಿ ಶ ಷ ಗಳು ಅದಲು ಬದಲಾಗುತ್ತವೆ. ಷ್ಟುತ್ವ ಸಂಧಿ ನೋಡಿಕೊಳ್ಳಬಹುದು. ಶ ಷ ಗಳು ಸಂಜ್ಞೆಗಳಷ್ಟೇ, ಶಬ್ದವನ್ನು ಉಚ್ಚರಿಸುವಾಗ ಬರುವ ಸದ್ದಿಗೆ ಸರಿಯಾದ ಸಂಜ್ಞೆ ಹಾಕುವುದು ಸೂಕ್ತವಲ್ಲವೇ? ಆಸುಟು ಅಷ್ಟು ಆದಾಗ ಷಕಾರ ಬರೆಯಲು ಅಷ್ಟೇ ಕಾರಣ.ಒತ್ತಾಯದಿಂದ ಅಶ್ಟು ಎಂದು ಬರೆದಿದ್ದರೂ ಉಚ್ಚರಿಸುವಾಗ ಅಷ್ಟು ಎಂದೇ ಕೇಳಿಸುತ್ತದೆ.

ಅವರೋಹಣ

ಮುಗಿಸುವ ಮುನ್ನ ಒಂದೆರಡು ಟಿಪ್ಪಣಿಗಳು. ಬೇರೆ ಕೆಲವು ಉದಾಹರಣೆಗಳನ್ನು ನೋಡಿದಾಗ ಶ ಷ ಗಳ ಔಚಿತ್ಯ ಸ್ಪಷ್ಟವಾಗುತ್ತದೆ. ಇವೆಲ್ಲಾ ಸಂಸ್ಕೃತ ಮೂಲ ಪದಗಳಾದರೂ ಉಚ್ಚಾರಣೆಯ ಸೌಲಭ್ಯಕ್ಕಾಗಿ ಅಕ್ಷರಗಳು ಹೇಗೆ ಕೂಡಿಬರುತ್ತವೆ ಎಂಬುದಕ್ಕೆ ಉದಾಹರಣೆಗಳು.


1. ನಿಷ್ಕರ್ಶ, ದುಷ್ಕರ, ನಿಷ್ಕಪಟ, ದುಷ್ಕರ್ಮ (ಶ್ಕ ಇರುವ ಶಬ್ದಗಳೇ ಇಲ್ಲ): ಕಕಾರಕ್ಕೆ ನಾಲಿಗೆಯ ಹಿಂಭಾಗವನ್ನು ಹಿಂದಕ್ಕೆಳೆದಿರಿವುದರಿಂದ ಷಕಾರವೇ ಸೂಕ್ತವೆನಿಸುತ್ತದೆ.
2. ನಿಶ್ಚಲ, ದುಶ್ಚಟ, ಪಶ್ಚಿಮ, ಆಶ್ಚರ್ಯ (ಷ್ಚ ಇರುವ ಶಬ್ದಗಳೇ ಇಲ್ಲ): ಚಕಾರಕ್ಕೆ ನಾಲಿಗೆ ಮುಂದಕ್ಕೆ ಹೋಗಿರುವುದರಿಂದ ಶಕಾರವೇ ಸೂಕ್ತ.
3. ಅಷ್ಟು, ಇಷ್ಟು, ಎಷ್ಟು, ಧನುಷ್ಠಂಕಾರ (ಶ್ಟ ಇರುವ ಶಬ್ದಗಳೇ ಇಲ್ಲ) : ಈ ಮೇಲೆ ನೋಡಿದ್ದೇವೆ.
4. ಶ್ತ, ಷ್ತ ಗಳಿರುವ ಪದಗಳೇ ಇಲ್ಲ; ಪುಸ್ತಕ, ಮಸ್ತಕ, ಬೆಸ್ತ, ಕುಸ್ತಿ, ಕಸ್ತೂರಿ… ಹೀಗೆ ಸಕಾರದಿಂದಲೇ ಕೆಲಸ ನಡೆಯುತ್ತದೆ! ಸಕಾರವೂ ತಕಾರವೂ ನಾಲಿಗೆಯ ತುದಿಯಿಂದ ಹೇಳುವ ಅಕ್ಷರಗಳಾದ್ದರಿಂದ ಒತ್ತಕ್ಷರ ಮಾಡಲು ಬಲುಸುಲಭ.
5. ಪುಷ್ಪ, ಭಾಷ್ಪ, ನಿಷ್ಫಲ, ಆಸ್ಪದ (ಶ್ಪ ಇರುವ ಶಬ್ದಗಳೇ ಇಲ್ಲ) : ಶ್ಪ ಮತ್ತು ಷ್ಪ ಗಳ ಮಧ್ಯೆ ಉಚ್ಚಾರಣೆಯ ಕಾಠಿಣ್ಯದಲ್ಲಿನ ವ್ಯತ್ಯಾಸ ಕಡಿಮೆಯೇ ಆದರೂ ಷ್ಪ ಇರುವ ಶಬ್ದಗಳು ಮಾತ್ರವೇ ಕಾಣಿಸುತ್ತವೆ. ಬಲ್ಲವರು ತಿಳಿಸಬೇಕು.

ಚಿತ್ರ-2: ಶ್ಟ ಇರುವ ಪದಗಳು ಒಂದೂ ಇಲ್ಲ15ಉಳಿದ ನಿಘಂಟುಗಳನ್ನು ಸೇರಿಸಿ ಹುಡುಕಿದರೂ ಷ ವನ್ನು ಶ ಮಾಡಿ ಬರೆದ ವಾಕ್ಯಗಳು ಕಾಣುತ್ತವೆ ಹೊರತು ನಿಘಂಟಿನ entry ಇಲ್ಲ

ಉಪಸಂಹಾರ

ಫ್ರೆಂಚರಿಗೆ “ದ”-ಕಾರ ದಕ್ಕಿಲ್ಲ. ಎಷ್ಟು ಪ್ರಯತ್ನ ಪಟ್ಟರೂ ಅವರು the ವನ್ನು za/la ಎಂದು ಉಚ್ಚರಿಸುತ್ತಾರೆ, ಬೆಳೆಯುವಾಗ ಆಡದ ಸ್ವರ ಮುಂದೆ ಬರದು. ಮೊದಲೇ ನೋಡಿದಂತೆ ಕನ್ನಡದಲ್ಲಿ T-ಯನ್ನು ಬರೆಯಲು, ಹೇಳಲು ಅಸಾಧ್ಯ (cut ≠ಕಟ್). ಹಾಗೇ ಆಂಗ್ಲದಲ್ಲಿ ಟ/ಠ ಬರೆಯಲು ಅಸಾಧ್ಯ (ಟಗರು ≠ Tagaru), ಟಕಾರ ಇಲ್ಲದ ಕಾರಣ ಆಂಗ್ಲದಲ್ಲಿ ಷಕಾರವೂ ಇಲ್ಲ, ಷಕಾರ ಹೋದಾಗ ಟಕಾರಕ್ಕೂ ಸಂಚಕಾರ 16English is not present in list of languages with a retroflec fricative or retroflex plosive ! ಆದರೆ ಕನ್ನಡದಲ್ಲಿ ಸ ಶ ಷ ಸದ್ದುಗಳನ್ನು ಸೂಚಿಸುವ 3 ಸಂಜ್ಞೆಗಳಿವೆ17IPA ಪ್ರಕಾರ ಜಗತ್ತಿನಲ್ಲಿ “ಸ್ z ಶ್ ʒ ಷ್ ʐ ç ʝ” ಎಂಬ 8 ಸದ್ದುಗಳಿವೆ. ನಮ್ಮ ಭಾಷೆಯಲ್ಲಿ ಸಂಜ್ಞೆಗಳಿರುವುದು ಸ ಶ ಷ, ಮೂರೇ. ಈ ಮೂರರ ಉಚ್ಚಾರಣೆ ಕನ್ನಡಿಗನ ಬಾಯಿಗೆ ಅಯಾಚಿತವಾಗಿ ಸಿದ್ಧಿಸಿದೆ. ಆಯಾ ಸದ್ದುಗಳಿಗೆ ಅವುಗಳದೇ ಸಂಜ್ಞೆಯನ್ನು ಉಪಯೋಗಿಸುವುದು ಸರಿಯಲ್ಲವೇ.

ಗಣೇಶ ಕೃಷ್ಣ ಶಂಕರತೋಟ
೮ ಡಿಸೆಂಬರ್ ೨೦೨೧

ಪರಿಷ್ಕರಣೆಗಳು
೧. T-ಟ ಗಳ ವ್ಯತ್ಯಾಸ ನೆನಪಿಸಿದ್ದು ಹಾಗೂ ಕಾಗುಣಿತ ತಿದ್ದುಪಡಿ. ಕೃಪೆ ಅಂಶುಮಾನ್ ಕೆ ಅರ್
೨. ಕೆಲವು ತಿದ್ದುಪಡಿಗಳು, ಸೇರ್ಪಡೆಗಳು, ಕೃಪೆ ಶ್ವೇತಾ ಕಕ್ವೆ.
೩. Added qualifier Sibilant to super set Fricative; to reduce scope of sounds ( “V”, “F” etc sounds are not of interest)

I tweet @ganeshkrishna

Creative Commons License
This work is licensed under a Creative Commons Attribution-NonCommercial-NoDerivatives 4.0 International License.

Quote this blog with author name and link. ex: “ಎಷ್ಟರ ಷಕಾರ by ಗಣೇಶಕೃಷ್ಣ ಶಂಕರತೋಟ, manjati.net/eshtu “

6 Replies to “ಎಷ್ಟರ ಷಕಾರ”

  1. ಪದ ಅಕ್ಷರ ಇತಿಹಾಸ ವಿಜ್ಞಾನ ಅದೆಷ್ಟು ಸೊಗಸಾಗಿ ತಿಳಿಸಿ ಕೊಟ್ಟಿರುವಿರಿ ಗಣೇಶ 🙏 ಇನ್ನಷ್ಟು ಮತ್ತಷ್ಟು ಇಂತಹ ಬರಹ ಹೊರಬರಲಿ ಅಷ್ಟೇ ಆಶಯ 👍👏🙏

    1. ಧನ್ಯವಾದ ಮುಕುಂದರೆ🙏

  2. ಓದಿ ಖುಷಿಯಾಯ್ತು. , ಅಕ್ಷರಗಳ ಬಗ್ಗೆ ನಮ್ಮ ಜ್ಞಾನ ವಿಸ್ತಾರವಾಯಿತು. ತಮಗೂ ನಮಗಿದನ್ಬು , ಪರಿಚಯಿಸಿದ ಶ್ರೀ ಶ್ರೀವತ್ಸ ಜೋಶಿ ಅವರಿಗೂ ವಂದನೆಗಳು

Leave a Reply

Your email address will not be published. Required fields are marked *