ಚಕ್ರ

ಮಡಿಯಿಂದ ಬಂದಳು, ಮುಡಿತೊಳೆದು ಬಂದಳು
ಕುಡುತುಂಬಿದಾ ಮೊರದ ಮೊರೆಗೆ.
ಒಡಲ ತುಂಬಿಸುವಮ್ಮ, ಕೆಡ್ಡಾಸ ಮುಗಿಸಮ್ಮ
ಬಿಡಿಸಮ್ಮ ಮೊಗ್ಗಿನ ನಗುವ.

ಚಳಿಗಲ್ಲು ಹರಿದಾವು, ಬಿಳಿಮಲ್ಲೆ ಬಿರಿದಾವು
ನಳನಳಿಸೋ ಸುರಗಿಯ ಸೆರಗು.
ಕಳಕಳಿಯ ಕಣ್ಣೋಟ, ಚಿಲಿಪಿಲಿಯ ಚೆಲ್ಲಾಟ,
ಒಳಗೆಲ್ಲೋ ಹುಟ್ಟಿನ ಬೆರಗು.

ಕೊರಡಲ್ಲಿ ಚಿಗುರೊಡೆಸು, ಬರದಲ್ಲೇ ಮಳೆ ಬರಿಸು
ಮರಳಲ್ಲೇ ಕಾದಿದೆ ಸೃಷ್ಟಿ.
ಮರದಲ್ಲಿ ಹಣ್ಣಿಡಿಸು, ಮರಿಗಳ ಕಣ್ಬಿಡಿಸು,
ಭರವಸೆ ಅಮ್ಮನ ದೃಷ್ಟಿ.


ಗಣೇಶಕೃಷ್ಣ ಶಂಕರತೋಟ
Feb 27 2022

ಕೆಡ್ಡಾಸ = ಕೆಡ್ವಾಸ, ಭೂತಾಯಿ ಮುಟ್ಟಿನಿಂದ ಎದ್ದುಬರುವ ದಿನ, ತುಳುನಾಡ ಹಬ್ಬ
ಕುಡು = ಹುರುಳಿ ಬೀಜ, ಕೆಡ್ವಾಸದಂದು ಮೊರದಲ್ಲಿ ಹುರುಳಿ ಇಡುವುದು ವಾಡಿಕೆ
ಮಲ್ಲೆ= ಮಲ್ಲಿಗೆ

Creative Commons License
This work is licensed under a Creative Commons Attribution-NonCommercial-NoDerivatives 4.0 International License.

I tweet @ganeshkrishna

Leave a Reply

Your email address will not be published. Required fields are marked *