ಭರತ

ಹಗಲೆಲ್ಲಾ ಮುಗಿದಿತ್ತು ಆಗಷ್ಟೇ, ಎಂದಿನಂತೆ ಕೇಕಯದ ಗಿಡ-ಮರ-ಬಳ್ಳಿ, ಪ್ರಾಣಿ-ಪಕ್ಷಿ-ಮನುಷ್ಯರು ಅಂದಿನ ರಾತ್ರಿಯ ನೀರವ ಕತ್ತಲೆಗೆ ಒಗ್ಗಿಕೊಳ್ಳುತ್ತಿದ್ದವು. ಈ ಕತ್ತಲು, ಮೌನ, ಅದಿನ್ನೊಂದಿಷ್ಟು ಹೊತ್ತು, ಮತ್ತೆ ಬೆಳಕು ಬಂದೇ ಬರುವುದಲ್ಲ ಎಂಬ ಭರವಸೆ ಅವರಿಗೆ ಇದ್ದೇ ಇತ್ತು. ಅದೊಂದು ಹಕ್ಕಿ ಮಾತ್ರ ಸಧ್ಯಕ್ಕೆ ಕತ್ತಲು ಎಲ್ಲವನ್ನೂ ನುಂಗುತ್ತಿದೆಯೇನೋ ಎಂಬ ಹಾಗೆ “ಮೀ.. ಮೀ..” ಎಂದು ಅರಚುತ್ತಿತ್ತು. ಯಾವುದ್ಯಾವುದೋ ಹಕ್ಕಿ ಕೂಗಿತೆಂದೂ, ಯಾವುದೋ ಕೆಟ್ಟ ಸುದ್ದಿ ಬರಲಿದೆಯೆಂದೂ ಮಂಥರೆ ಗೋಣಗಿಕೊಳ್ಳುತ್ತಿದ್ದುದು ನೆನಪಾಯಿತು ಭರತನಿಗೆ. ಅಷ್ಟು ಪ್ರಾಯವಾದರೂ ಹೇಗೆ ಮಂಥರೆಗೆ ತನಗೆ ಕೇಳಿಸದ ಹಕ್ಕಿ ಕೂಗು ಕೇಳುವುದೆಂದು ಅಲೋಚಿಸಿದ್ದಿದೆ, ಜೊತೆಗೆ ಮಂಥರೆಯನ್ನು ಅದೇ ವಿಷಯಕ್ಕೆ ತಮಾಷೆ ಮಾಡಿದ್ದೂ ಇದೆ. ಅಯೋಧ್ಯೆಯಲ್ಲಿದ್ದಾಗ ಯಾವತ್ತೂ ಕೇಳಿಸದ ಈ ವಿಚಿತ್ರ ಹಕ್ಕಿ ಕೂಗು ಕೇಕಯದಲ್ಲಿ ಕೇಳಿಸಿತ್ತು. ಆದರೆ ಅದರ ಕೂಗಿಗೆ ಅವನಿಗೆ ಯಾವುದೇ ಅರ್ಥ ಹೊಳೆದಿರಲಿಲ್ಲ, ಬದಲಾಗಿ ಅಯೋಧ್ಯೆಗಿಂತ ಭಿನ್ನವಾದ ಕೇಕಯದ ಜೈವ ಪರಿಸರದ ಬಗ್ಗೆ ಅಚ್ಚರಿಯಾಯಿತಷ್ಟೇ ಅವನಿಗೆ. ಸೊಡರಿನಲ್ಲಿ ಎಣ್ಣೆ ಬತ್ತುತ್ತಾ ಬಂದಿತ್ತು, ಹಾಗೆಯೇ ಉದ್ದುದ್ದಕ್ಕೆ ಬೆಂಕಿ ಎದ್ದು, ಗಾಳಿ ಬೀಸಿದ ದಿಕ್ಕಿಗೆ ಹೊಂದಿಕೊಂಡು ಓಲಾಡುತ್ತ ಗೋಡೆಯ ಮೇಲೆ ಹರಡಿದ ಸಣ್ಣ ಪುಟ್ಟ ನೆರಳುಗಳನ್ನೆಲ್ಲಾ ಏರಿಳಿಸಿ ಭಯಂಕರವಾಗಿಸಿತ್ತು. ಭರತನಿಗೆ ಅದ್ಯಾವುದರ ಮೇಲೂ ಗಮನ ಹರಿಯಲಿಲ್ಲ. ಬೇಗ ಮಲಗಿ ಮರುದಿನ ಬೆಳಗ್ಗೆಯೇ ಅಯೋಧ್ಯೆಗೆ ಮರಳುವ ಬಗ್ಗೆಯೇ ಆಗಿತ್ತು ಅವನ ಆಲೋಚನೆಗಳು. ಎಷ್ಟು ದಿನವಾಯ್ತು ನಾನು ರಾಮನನ್ನು ಬಿಟ್ಟು ಬಂದು! ಚಿನ್ನದೊಂದು ಆಭರಣಕ್ಕೆ, ಒಂದು ತುಂಡು ವಜ್ರ ಸಿಲುಕಿಸಿದರೆ ಅದರ ಬೆಲೆ ನೂರ್ಮಡಿಸಿದ ಹಾಗೆ, ನಾವು, ಆಯೋಧ್ಯೆಯವರೆಲ್ಲರೂ ರಾಮನೊಟ್ಟಿಗೆ ಇದ್ದರೆ ಮಾತ್ರ ನಮಗೆ ಬೆಲೆ! ಅವನನ್ನು ಬಿಟ್ಟು ಇಲ್ಲಿ ಹೀಗೆ ಇರುವುದರಿಂದ ಏನೆಲ್ಲಾ ಕಳಕೊಳ್ಳುತ್ತಿದ್ದೇನೆ! ಅಯೋಧ್ಯೆಯಲ್ಲಿಯಾಗಿರುತ್ತಿದ್ದರೆ ಇಷ್ಟೊತ್ತಿಗೆ ರಾಮ ಹೇಳುವ ಅರಸರ, ರಾಕ್ಷಸರ, ದೇವರುಗಳ, ಕಾಡಿನ ಕಥೆಗಳನ್ನು ಕಣ್ಣಗಲಿಸಿ ಕೇಳುತ್ತಿರುತ್ತಿದ್ದೆ. ದೀಪದ ಚಿನ್ನದಂಥಹ ಬೆಳಕಿನಲ್ಲಿ ರಾಮನನ್ನು ನೋಡುತ್ತಾ ಅವನ ಮಾತು ಕೇಳುತ್ತಾ ಕೂತರೆ ನನಗೆ ನಿದ್ದೆಯ ಬಗ್ಗೆ ಅಲೋಚನೆಯೇ ಇರುತ್ತಿರಲಿಲ್ಲ. ನನ್ನ ರಾಮನ ಮೋರೆಯನ್ನು ಯಾವ ಬದಿಯಿಂದ ನೋಡಿದರೂ ಅಲ್ಲಿ ನಗು ಮಾತ್ರವೆ ಕಾಣುವುದು. ಕಣ್ಣುಗಳಲ್ಲಿ ನೂರು ದೀಪಗಳ ಪ್ರಭೆ. ನಾನವನ್ನು ನೋಡಿದರೆ ನನ್ನ ಕಣ್ಣುಗಳಲ್ಲಿ ಅವನ ಬಿಂಬ ಮೂಡಿ ಅವು ಎರಡು ದೀಪಗಳೇ ಆಗುತ್ತಿದ್ದವು. ರಾಮನ ಮೇಲೆ ನೆಟ್ಟ ನಮ್ಮ ಎಲ್ಲರ ಕಣ್ಣುಗಳು ಅವನ ಪ್ರಭೆಯನ್ನು ಪ್ರತಿಫಲಿಸಿ ಅರಮನೆಯಲ್ಲಿ ಎಂದಿಗೂ ಆರದ ದೀಪಾವಳಿಯಾಗುತ್ತಿತ್ತು!!. ಈ ಕತ್ತಲು, ಅದಿನ್ನೊಂದಿಷ್ಟು ಹೊತ್ತು, ಅದು ಕಳೆದ ಕೂಡಲೆ ನಾನು ಅಯೋಧ್ಯೆಗೆ ಹೊರಟಿರುತ್ತೇನೆ. ಲಕ್ಷ್ಮಣ ಒಂದಿಷ್ಟೂ ಹೊತ್ತು ರಾಮನನ್ನು ಬಿಟ್ಟಿರುವುದಿಲ್ಲ. ನಾನು ಅವನನ್ನು ನೋಡಿ ಕಲಿಯಬೇಕಿತ್ತು, ಛೆ!. ಇಷ್ಟು ದಿನ ಇರುವುದಕ್ಕಾಗಿ ಕೇಕಯಕ್ಕೆ ಬರಲೇ ಬಾರದಿತ್ತು ಅನಿಸಿತು ಭರತನಿಗೆ. ರಾಮನನ್ನು ನೋಡುವ ತವಕ ಹೆಚ್ಚಾಗುತ್ತಿದ್ದಾಗ ಹಾಗೆ ಸೊಡರಿನಲಿ ಬತ್ತಿ ಪೂರ್ತಿಯಾಗಿ ಕರಟಿ ಹೋಗಿತ್ತು. ಭಯಾನಕ ನೆರಳುಗಳು ಹಿಗ್ಗಿ ಎಲ್ಲಾ ಗೋಡೆಗಳನ್ನೂ ನುಂಗಿ ಕಪ್ಪಾಗಿಸಿದ್ದವು. ಭರತನಿಗೆ ಮಲಗಿದಲ್ಲಿಂದವೇ ಕಿಟಿಕಿಯ ಮೂಲಕ ಚಂದಿರನೂ, ನಕ್ಷತ್ರಪುಂಜಗಳೂ ಕಾಣಿಸುತ್ತಿದ್ದವು. ರಾಮನೂ ಇವನ್ನೇ ನೋಡುತ್ತಿದ್ದರೆ ಅವನ ಬಿಂಬ, ಚಂದ್ರ ತಾರೆಯರ ಮೇಲೆ ಕಾಣಿಸುವುದೇನೋ ಎಂದೆನಿಸಿ ತಾರೆಗಳ ಮಿಣುಕಿನಲ್ಲಿ ರಾಮನನ್ನೇ ಅರಸುತ್ತಾ ಅರಸುತ್ತಾ ನಿದ್ದೆಗೆ ಈಗಷ್ಟೇ ಜಾರಿದ್ದಾನೆ ಭರತ.

  • ಶ್ವೇತಾ ಕಕ್ವೆ
    22-ನವೆಂಬರ್-2020

ನೀರವ ದೀಪಾವಳಿ?

ಬರದ ಭ್ರಾತನು ಕಲಿಸಿ ಕಳುಹಿರೆ
ಭರತ ಮುನಿಯದೆ ಬಾಹುಬಲನೊಳು
ಭರತರೊಳಗಿನ ಭಾವ ಭರತವು ನಮ್ಮದಾಗಿರಲಿ
ಭರವಸೆನರಸುತ್ತ ತಾರಾ
ಭರಣವಾಯಿತು ಕಲಿಯ ಬೆವರು ಸೊ
ಡರಿನ ಬತ್ತಿಯು ಹೊತ್ತೆ ಜ್ವಾಲೆಯ ನಗುವಿನೇರಿಳಿತ

ಬರದ ಭ್ರಾತನು = ಶ್ರೀರಾಮ, ಭರತ ಕರೆದರೂ ಬರಲಿಲ್ಲ
ಕಲಿಸಿ = ಕಶ್ಚಿತ್ ಸರ್ಗದಲ್ಲಿ ಕರ್ತವ್ಯ ಬೋಧನೆ
ಭರತ ಮುನಿಯದೆ = ಭರತ ಮುನಿಯ ನಾಟ್ಯಶಾಸ್ತ್ರದ sound based reminder
ಬಾಹುಬಲನೊಳು = ಶ್ರೀರಾಮನೊಳು, ಆಂತೆಯೇ ಬಾಹುಬಲಿಯ sound based reminder

ಭರತ ಚಕ್ರವರ್ತಿಯ ಕ್ಷಾತ್ರದ ಕೆಚ್ಚೂ
ಭರತನ ಕರ್ತವ್ಯ ಭಾವವೂ
ಭರತಮುನಿಯ ರಸಭಾವವೂ
ಅವರಲ್ಲಿ ಆದಂತೇ ನಮ್ಮಲ್ಲೂ ಉಕ್ಕಲಿ

ಭರತರು (ರಾಮನ ತಮ್ಮ, ಬಾಹುಬಲಿಯ ಅಣ್ಣ, ಶಕುಂತಲೆಯ ಮಗ) ಕಲಿಗಳು, ಅವರು ಹರಿಸಿದ ಬೆವರು ಮಿಂಚುವ ನಕ್ಷತ್ರದ ಆಭರಣಗಳಾದವು. ದೀಪದ ಬತ್ತಿ ಹೊತ್ತಿ ಉರಿದರೆ ಮಾತ್ರ ಬೆಳಕಿನ ನಗುವಿನ ಕುಣಿತ ಕಾಣಬಹುದು.
(ಹೊತ್ತೆ ಜ್ವಾಲೆ: ತ್ತೆ ಶಿಥಿಲ, ಅಥವಾ ಜ್ವಾಲೆ ಬದಲು ಕೀಲ ಎಂಬ ಸಮಾನಾರ್ಥಕ ಹಾಕಿಕೊಳುವುದು)

  • ಗಣೇಶ ಕೃಷ್ಣ ಶಂಕರತೋಟ

Leave a Reply

Your email address will not be published. Required fields are marked *