ಸಮೃದ್ಧವಾದ ಕನ್ನಡ ಜಾನಪದ ಸಾಹಿತ್ಯದಲ್ಲಿ ಎದ್ದು ಕಾಣುವ ಒಂದು ಪ್ರಕಾರ ಬೀಸೋ ಕಲ್ಲಿನ ಪದಗಳು. ದೈನಂದಿನ ಕೆಲಸಗಳ ಭಾಗವಾದ ರಾಗಿಯನ್ನು ಬೀಸಿ ಹಿಟ್ಟನ್ನಾಗಿಸುವ ಸಮಯದಲ್ಲಿ ಹಾಡಿಕೊಳ್ಳುತ್ತಿದ್ದ ಈ ಪದಗಳು ದಿನದಿಂದ ದಿನಕ್ಕೆ ಕೇಳುವುದು ಕಡಿಮೆಯಾಗುತ್ತಿದ್ದರೂ 4ನೆಯ ತರಗತಿಯ ಪಠ್ಯ ಪುಸ್ತಕದಲ್ಲಿ ಒಂದು ತ್ರಿಪದಿ ಇರುವುದು ಸಂತೋಷದ ವಿಷಯ. 1ತ್ರಿಪದಿಯನ್ನು ಒದುವ ರೀತಿಯನ್ನೂ, ಅಂಶಗಣ ತ್ರಿಪದಿಗಳಬಗ್ಗೆ ಈಗಾಗಲೆ ಸ್ನೇಹಿತ ಈ ಕೊಂಡಿಯಲ್ಲಿ ಬರೆದಿರುವುದರಿಂದ ಮತ್ತೆ ಬರೆಯುವುದಿಲ್ಲ ಹಾಡುವ ಧಾಟಿ “ಕೂಸು ಇದ್ದ ಮನೆಗೆ ಬೀಸಣಿಗೆ….”. ಈ ಹಾಡಿನ ಹಿಂದೆ ಇರಬಹುದಾದ ಪುಟ್ಟ ಕಥೆಯಿದು2ನನ್ನ ಕಲ್ಪನೆ. (ಟಿಪ್ಪಣಿಗಳಿಗಾಗಿ ಸಂಖ್ಯೆಗಳನ್ನು ಕ್ಲಿಕ್ಕಿಸಿ)
ಬೀಸೋಕಲ್ಲಿನ ಪದ ಕಲ್ಲಮ್ಮ ತಾಯಿ ಮೆಲ್ಲಮ್ಮ ರಾಗಿಯ ಜಲ್ಲ ಜಲ್ಲನೆ ಉದುರಮ್ಮ | ನಾನಿನಗೆ ಬೆಲ್ಲದಾರತಿಯ ಬೆಳಗೇನು|೧| ಅಂದುಳ್ಳ ಅಡಿಗಲ್ಲು ಚಂದುಳ್ಳ ಮೇಗಲ್ಲು ಚಂದ್ರಮತಿಯೆಂಬ ಹಿಡಿಗೂಟ|ಹಿಡಕೊಂಡು ತಂದೆ ತಾಯಿಗಳ ನೆನೆದೇನ|೨| ರಾಗಿಯು ಮುಗಿದಾವು ರಾಜಾನ್ನ ಹೆಚ್ಯಾವು ನಾನ್ಹಿಡಿದ ಕೆಲಸ ವದಗ್ಯಾವು |(ರಾಗಿ)ಕಲ್ಲೇ ನಾ ತೂಗಿ ಬಿಡುತೀನಿ ಬಲದೋಳು|೩| ಕಲ್ಲು ಬಿಟ್ಟೆನೆಂದು ಸಿಟ್ಯಾಕೆ ಸರಸತಿಯೆ ಕುಕ್ಕೇಲಿ ರಾಗಿ ಬೆಳೆಯಾಲಿ|ತಕ್ಕೊಂಡು ಮತ್ತೆ ರಾತ್ರಿಗೆ ಬರುತೀನಿ|೪| ಕಲ್ಲು ಕೊಟ್ಟಮ್ಮಗೆ ಎಲ್ಲಾ ಭಾಗ್ಯವು ಬರಲಿ ಪಲ್ಲಕಿ ಮ್ಯಾಲೆ ಮಗ ಬರಲಿ| ಆ ಮನೆಗೆ ಮಲ್ಲಿಗೆ ಮುಡಿಯೋ ಸೊಸಿ ಬರಲಿ|೫|
ಮೂರನೇ ಪದ್ಯದಲ್ಲಿ “ರಾಗಿಕಲ್ಲೇ” ಶಬ್ದ 7 ಮಾತ್ರೆಗಳಿದ್ದು ವಿಷ್ಣುಗಣವಲ್ಲ, ಅದನ್ನು 6 ಮಾತ್ರೆಗಳ ಕಾಲದಲ್ಲಿ ಹಾಡಲಾಗುವುದಿಲ್ಲ. ಆ ಜಾಗದಲ್ಲಿ “ಕಲ್ಲೇ” ಎಂದು ಹಾಡಬೇಕು. “ಕಲ್ಲೇss” ನಾಲ್ಕೇ ಮಾತ್ರೆಯಾದರೂ, ಎಳೆದು ತ್ರಿಪದಿಯ ಗತಿಯಲ್ಲಿ ಹಾಡಬಹುದು.
ಪಠ್ಯಪುಸ್ತಕದಲ್ಲಿ ಕೊನೆಯ ಪದ್ಯ ಇಲ್ಲ, ಬೇರೆಲ್ಲಾ ಕಡೆ ಇದೆ.ಬಹುಶಃ ವಸ್ತು ಸ್ವಲ್ಪ ಪ್ರೌಢವಾದ್ದರಿಂದ ಇರಬಹುದು. ನಮ್ಮ ಕಥೆ ಸಂಪೂರ್ಣವಾಗಲು ಈ ಪದ್ಯ ಬೇಕೇ ಬೇಕು.
ಪದ್ಯದ ಹಿಂದಿನ ಕಥೆ
ಕಲ್ಲಮ್ಮ ತಾಯಿ ಮೆಲ್ಲಮ್ಮ ರಾಗಿಯ
ಜಲ್ಲ ಜಲ್ಲನೆ ಉದುರಮ್ಮ | ನಾನಿನಗೆ
ಬೆಲ್ಲದಾರತಿಯ ಬೆಳಗೇನು|೧|
ಹೊಟ್ಟೆ ಪೋಷಿಸುವ ಹಿಟ್ಟಿನ ರೂವಾರಿ ಬೀಸುಕಲ್ಲು ತಾಯಿಯೇ. ಹೆತ್ತತಾಯಿ ತವರಿನಿಂದ ಬಳುವಳಿಯಾಗಿ ಕಳುಹಿಸಿದ ಕಲ್ಲಿದು 3 ೫ ನೇ ಪದ್ಯದಿಂದ. ಕಲ್ಲಿನಲ್ಲಿ ತಾಯಿಯನ್ನು ವಿಧವಿಧವಾಗಿ ಕಾಣುವ ಹೆಣ್ಮಗಳು ತಡರಾತ್ರಿಯೋ ಅಲ್ಲ ಮುಂಜಾವಕ್ಕೂ ಮುನ್ನ, ಒಟ್ಟಾರೆ ಕತ್ತಲ್ಲೇ ಕಲ್ಲ ಮುಂದೆ ಕುಳಿತು ಮುಂಜಾನೆ ಹೊಲಕ್ಕೆ ಹೋಗುವವರಿಗೆ ಮುದ್ದೆ ಮಾಡಲು ಅಣಿಯಾಗುತ್ತಿದ್ದಾಳೆ. ಕಲ್ಲು ರಾಗಿಯನ್ನು ಮೇಲಿಂದ ಮೆಲ್ಲುತ್ತಾ4 ಮೇಲಿನ ಕಲ್ಲಿನಲ್ಲಿ ಮಧ್ಯದಲ್ಲಿ ತೂತಿರುತ್ತದೆ, ಅದರೊಳಗೆ ಕಾಳುಗಳನ್ನು ಹಾಕಬೇಕು, ಕಲ್ಲು ಕಾಳನ್ನು ತಿಂದಂತೆ ಕಾಣುತ್ತದೆ ಕಾಳನ್ನು ಮೆಲ್ಲಿ(=ಕಡೆದು/ಅರೆದು/ಜಗಿದು) ಜಲ್ಲನೇ ಬದಿಯಿಂದ ಉದುರಿಸಿದರೆ ಹುಡಿ ಹಿಟ್ಟು ತಯಾರು. ಕಲ್ಲನ್ನು ನೂರುಸಲ ತಿರುವಿದರೆ ದಿನವೆಂಬ ಚಕ್ರ ಒಂದು ಸಲ ತಿರುಗುತ್ತದೆ. ಹಿಟ್ಟಿನ್ನು ಪ್ರಸಾದಿಸುವ ದೇವತೆಗೆ ಬೆಲ್ಲದಾರತಿಯ ಹರಕೆ. ಬೆಲ್ಲದಚ್ಚಲ್ಲೇ ಎಣ್ಣೆಯಲ್ಲದ್ದಿದ ಬತ್ತಿ ಉರಿಸಿ ಆರತಿಯೆತ್ತುವುದು ರೂಢಿ, ಹಬ್ಬಗಳಲ್ಲಿ ತಂಬಿಟ್ಟಿನ ಉಂಡೆಯಲ್ಲೂ ಮಾಡುತ್ತಾರೆ, ಅರತಿ ನೈವೇದ್ಯ ಜೊತೆಗೇ ಆದಂತಾಯಿತು. ಹೊಸದಾಗಿ ಗಂಡನಮನೆಗೆ ಬಂದ ಸೊಸೆಯಿರಬೇಕು, ಹೊಟ್ಟೆಯ ಜವಾಬ್ದಾರಿಕೊಟ್ಟಿದಾರೆ, ತನ್ನ, ತನ್ನ ತವರಿನ ಹೆಸರು ಉಳಿಸಿಕೊಡೆಂದು ಕಲ್ಲಿಮ್ಮನಿಗೆ ಆಮಿಷಗಳು… ಉಳಿಸಿಕೊಳ್ಳುವ ನಿಶ್ಚಯ ಇವಳದು5 ಅಂದಿನ ಮೌಲ್ಯಗಳು, ಇಂದೂ ಹಲವೆಡೆ ಚಲಾವಣೆಯಲ್ಲಿದೆ, ಸರಿಯೋ ತಪ್ಪೋ ಗುದ್ದಾಡಿ ಈ ಕಥೆಗೆ ಪ್ರಯೋಜನವಿಲ್ಲ.
ಅಂದುಳ್ಳ ಅಡಿಗಲ್ಲು ಚಂದುಳ್ಳ ಮೇಗಲ್ಲು
ಚಂದ್ರಮತಿಯೆಂಬ ಹಿಡಿಗೂಟ|ಹಿಡಕೊಂಡು
ತಂದೆ ತಾಯಿಗಳ ನೆನೆದೇನ|೨|
ಹರಿಶ್ಚಂದ್ರನ ಮಡದಿ ಚಂದ್ರಮತಿ. ಹರಿಃ-ಚಂದ್ರ ನ ಮತಿಯೇ ಮೂರ್ತೀಭವಿಸಿದಂತೆ ಐಕಮತ್ಯದಿಂದ ಬದುಕಿದ ದಂಪತಿಗಳು. ಕೌಶಿಕಕೃತ್ರಿಮದಿಂದ, ಬಾಳು ಕೊಟ್ಟವನೇ ಕೊರಳಿಗೆ ಬಾಳುಕತ್ತಿ ಬೀಸಹೊರಟಾಗಲೂ ಅಚಲಳಾಗಿ ಇವನೇ ನನಗೆ ಮುಂದೂ ಸಿಕ್ಕಲಿ ಎಂದವಳು. ನಮ್ಮ ನಾಯಕಿಯ ಮುಷ್ಠಿಯಲ್ಲಿ ಭದ್ರಳಾಗಿದ್ದಾಳೆ ಗೂಟವಾಗಿ, ಆಧಾರವಾಗಿ, ಆದರ್ಶವಾಗಿ. ಈ ಬಲದಲ್ಲೇ ಅಡಿಗಲ್ಲು ಮೇಲ್ಗಲ್ಲುಗಳ ಮಧ್ಯ ಗುದ್ದಾಟವಾಡಿ ಜೀವದ ಸಾರ್ಥಕತೆಯನ್ನು ಸುರಿಸಿಕೊಳ್ಳಬೇಕಿದೆ. ಬೆಂಗಾವಲಾಗಿ ತಂದೆ ತಾಯಿಯರ ಆಶೀರ್ವಾದ.
ರಾಗಿಯು ಮುಗಿದಾವು ರಾಜಾನ್ನ ಹೆಚ್ಯಾವು
ನಾನ್ಹಿಡಿದ ಕೆಲಸ ವದಗ್ಯಾವು |(ರಾಗಿ)ಕಲ್ಲೇ
ನಾ ತೂಗಿ ಬಿಡುತೀನಿ ಬಲದೋಳು|೩|
ದಿನಗಳು ಉರುಳಿದಂತೇ ಒಂದೊಂದಾಗಿ ಋತುಗಳೂ ಉರುಳಿದವು, ಋತುಗಳೊಂದಿಗೆ ಸಂವತ್ಸರ. ರಾಗಿ ಬುಟ್ಟಿಯಲ್ಲಿ ಶ್ರಿಮಂತರು ಉಣ್ಣುವ ಅಕ್ಕಿಯೇ ಹೆಚ್ಚಾಗಿ ಕಾಣುತ್ತಿದೆ. ಕುಟುಂಬದ ಅಭ್ಯುದಯದಕ್ಕೆ ತನ್ನ ಕೆಲಸದಲ ಸಾಫಲ್ಯವೂ ಪೂರಕ ಕಾರಣವೆಂದು ನಮ್ಮ ನಾಯಕಿಗೆ ಸಂತಸ. ಬೀಸಿ ಬೀಸಿ ಬಲವಾದ ಬಲಗೈಯನ್ನು ತೂಗಿ ಬಿಟ್ಟು ವಿರಮಿಸುವೆ ಎನ್ನುತ್ತಾಳೆ. ಸ್ವಾರಸ್ಯವೆಂದರೆ ಕಲ್ಲುಬೀಸುವಾಗಲೂ ಮೈಯಿಡೀ ತೂಗಿ ತೂಗಿ ಬೀಸಬೇಕು6 ತೋಳು ತೂಗುವಲ್ಲಿ ಬೇರೇನಾದರೂ ಸ್ವಾರಸ್ಯ ಕಂಡರೆ ದಯಮಾಡಿ comment ಮಾಡಿ.
ಕಲ್ಲು ಬಿಟ್ಟೆನೆಂದು ಸಿಟ್ಯಾಕೆ ಸರಸತಿಯೆ
ಕುಕ್ಕೇಲಿ ರಾಗಿ ಬೆಳೆಯಾಲಿ|ತಕ್ಕೊಂಡು
ಮತ್ತೆ ರಾತ್ರಿಗೆ ಬರುತೀನಿ|೪|
ಯಾಕೆ ಕಲ್ಲಲ್ಲಿ ಸರಸ್ವತಿಯನ್ನು ಕಂಡಳೋ ಗೊತ್ತಿಲ್ಲ. ಜೀವನದ ಪಾಠ ಕಲ್ಲಿನ ಬುಡದಲ್ಲಿ ಕುಳಿತು ಕಲಿತದ್ದಕ್ಕಿರಬಹುದು. ಪದಕುಸಿದು7ಪದಕುಸಿಯೆ ನೆಲವಿಹುದು ಮಂಕುತಿಮ್ಮ ರಾಗಿಯನ್ನೇ ಬೀಸಬೇಕಾಗಿ ಬಂದರೆ ನೀನು ಆಸರೆಗೆ ಇದ್ದೇ ಇದ್ದೀಯಲ್ಲ ಕಲ್ಲೇ!
ಕಲ್ಲು ಕೊಟ್ಟಮ್ಮಗೆ ಎಲ್ಲಾ ಭಾಗ್ಯವು ಬರಲಿ
ಪಲ್ಲಕಿ ಮ್ಯಾಲೆ ಮಗ ಬರಲಿ| ಆ ಮನೆಗೆ
ಮಲ್ಲಿಗೆ ಮುಡಿಯೋ ಸೊಸಿ ಬರಲಿ|೫|
ತಾನು ಬಿಟ್ಟು ಬಂದ ತಾಯಿಯ ಮನೆಯಲ್ಲೂ (ತನ್ನಂತೇ) ಸಂಸಾರ ಮುನ್ನಡೆಸುವ ಸೊಸೆ ಬರಲಿ, ಅಭ್ಯುದಯ ತರಲಿ ಎಂಬ ಪ್ರಾರ್ಥನೆಯೊಂದಿಗೆ ನಮ್ಮ ಕಥೆಗೆ ಮುಕ್ತಾಯ. ಬಹುಶಃ ತನ್ನ ತಾಯಿಗೆ ಸಿಕ್ಕದ್ದು ತನಗೂ ತನ್ನ ಮುಂದಿನ ಪೀಳಿಗೆಗೂ ಸಿಗಬಹುದೆಂಬ ನಂಬಿಕೆ, ಆಸೆ. ರಾಗಿಕಲ್ಲೇ ತಿರುಗಿಸಿ ಮುನ್ನಡೆಸಿದೆ ಇವಳ ಪ್ರಪಂಚವನ್ನು.
ರಾಗಿ ಕಲ್ಲು ತಿರುಗಿದರೆ ದಿನ ಕಳೆದೀತು, ದಿನಗಳು ತಿರುಗಿದರೆ ಋತು/ಸಂವತ್ಸರ, ಅವು ತಿರುಗುತ್ತಾ ಪೀಳಿಗೆ ಮುಂದುವರಿದಿದೆ (ಇಲ್ಲಿಂದ).