“ಬಾಳೇ ಬಂಗಾರವಾಯಿತು.. ” ಚಿಕ್ಕವಳಿದ್ದಾಗ ಶಾಲೆಯ ಭಜನೆಯಲ್ಲಿ ಮೊದಲ ಬಾರಿಗೆ ಕೇಳಿದಾಗ, ನನ್ನ ತಲೆಯೊಳಗೆ, ಕಾಣದ ದೇವರ ಕೈಯಿಂದ ಚಿನ್ನದ ಬೆಳಕು ಬಂದು ಬಾಳೆ ಸಸಿಯ ಮೇಲೆ ಬಿದ್ದು, ಬಾಳೆ ಗಿಡವೆ ಒಂದು ಚಿನ್ನದ ಗಿಡವಾಗಿ ಮಾರ್ಪಾಡಾಗುವ ಕಲ್ಪನೆ ಕಟ್ಟಿತ್ತು.
“ಬಾಳೆ ಚಿನ್ನದ್ದು ಯಾಕೆ ಬೇಕು?”,
“ಉಮ್ಮ..!!” ಎಷ್ಟೋ ಅರ್ಥ ಆಗದ ವಿಷಯದಲ್ಲಿ ಇದೂ ಒಂದು.
ಈಗಲೂ “ಬಾಳೆ ಬಂಗಾರವಾಯಿತು” ಪದ್ಯ ಕೇಳಿದಾಗ ಅಥವಾ ಹಾಡಿದಾಗ ಚಿನ್ನದ ಬಾಳೆಗಿಡವೇ ಬರುತ್ತದೆ ಕಣ್ಣಮುಂದೆ.
ತಪ್ಪಿಲ್ಲ , ಬಾಳೆ ನಿಜಕ್ಕೂ ಒಂದು ಬಂಗಾರದ ಗಿಡವೆ. ಎಲೆ, ಹೂವು, ಕಾಯಿ, ಹಣ್ಣು, ಕಾಂಡ ಎಲ್ಲವೂ ಉಪಯುಕ್ತ. ಕಲ್ಪವೃಕ್ಷಕ್ಕೂ ಮೇಲಿನ ಗೌರವ ಉಂಟು ಬಾಳೆಗೆ ನಮ್ಮ ಬಾಳಲ್ಲಿ. ನಮ್ಮಕಡೆ ದೇವಸ್ಥಾನಗಳಲ್ಲಿ ದೇವರ ಪ್ರಸಾದವನ್ನು ಒಂದು ಚಿಕ್ಕ ಬಾಳೆ ಎಲೆ ತುಂಡಿನಲ್ಲಿ ಹಾಕಿ ಕೊಟ್ಟರೆ ಅದು ಮಹಾ ಪ್ರಸಾದ. ಭಯ ಭಕ್ತಿಯಿಂದ, ಈಗಷ್ಟೇ ಹುಟ್ಟಿದ ಶಿಶುವನ್ನು ಎತ್ತಿಕ್ಕೊಳ್ಳುವ ರೀತಿಯಲ್ಲೆ ಅದನ್ನು ಎರಡೂ ಕೈಚಾಚಿ ಎತ್ತಿಕೊಳ್ಳುತ್ತೇವೆ.
ಇತ್ತೀಚೆಗೆ ಲೇಖಕ ಶ್ರೀ ವತ್ಸ ಜೋಶಿ ಎಂಬವರು ಬಾಳೆಲೆ ಬಗೆಗಿನ ಪ್ರಬಂಧದಲ್ಲಿ “ಬಾಳೆಲೆಯ ಮೇಲೆ ಶಕುಂತಲೆ ಪತ್ರ ಬರೆದಾಳು ಎಂದಿದ್ದರು”, ತಲೆಯಲ್ಲಿ ‘ಅದು ಹರಿಯಲಿಕ್ಕಿಲ್ಲವಾ’ ಎಂಬ ಸಂಶಯ ಬಂದಿತ್ತು. ಮುಂದೆ ಓದಿದಾಗ, ದಕ್ಷಿಣ ಭಾರತದಲ್ಲಿ ಬಾಳೆಲೆ ಮೇಲೆ ಬರೆಯುತ್ತಿದ್ದರಂತೆ, ಎಲೆ ಹರಿಯದಂತೆ ಬರೆಯಬೇಕಾದರೆ ಅಕ್ಷರಗಳು ಅಡ್ಡ ಉದ್ದ ಗೆರೆಗಳಂತಿರದೆ ಉರುಟಾಗಿರಬೇಕಿತ್ತು, ಹಾಗಾಗಿಯೇ ನಮ್ಮ ಈ ಕಡೆ ಭಾಷೆಗಳ ಲಿಪಿಗಳು ಉರುಟುರುಟಾಗಿ ಮುತ್ತಿನ ಹಾಗೆ ಇರಲು ಕಾರಣ ಎಂದು ಬರೆದಿದ್ದರು. ಎಲೆ ಹರಿಯದ ಹಾಗೆ ಬರೆಯುವ ಆ ಹುಮ್ಮಸ್ಸಿನಿಂದವೇ ಕನ್ನಡ ಅಕ್ಷರ ಇಷ್ಟು ಉರುಟುರುಟಾಗಿ ಹುಟ್ಟಿ ಬೆಳೆದದ್ದು ಎಂದು ಓದಿದ ಮೇಲೆ ನಮ್ಮ ಅಜ್ಜಂದಿರ ಮೇಲಿನ ಗೌರವ ಹೆಚ್ಚಾಗಿದೆ ನೋಡಿ.
“ರೊಟ್ಟಿ ಅಂಗಡಿ ಕಿಟ್ಟಪ್ಪ.. ನನಗೊಂದು ರೊಟ್ಟಿ ತಟ್ಟಪ್ಪ.. “, ನಾವು ಎಲ್ಲ ರೊಟ್ಟಿಯನ್ನೂ ಬಾಳೆಲೆ ಮೇಲೆಯೇ ತಟ್ಟುವುದು. ನಮ್ಮಲ್ಲಿ ಯಥೇಚ್ಛವಾಗಿ ಸಿಗುವ ಬಾಳೆಲೆಯಿಂದಾಗಿ ಕಾವಲಿ/ಬಾಣಲೆ ಬಿಸಿ ಮುಟ್ಟಿಸಿಕೊಂಡು ರೊಟ್ಟಿ ತಟ್ಟುವ ಅಗತ್ಯವೆ ಇಲ್ಲ ನಮಗೆ. ಎಂಥ ರೊಟ್ಟಿಯನ್ನೇ ಆಗಲಿ ಬಾಳೆಲೆ ಮೇಲೆ ತಟ್ಟಿ ಕಾವಲಿಗೆ ಮೇಲೆ ಮಲಗಿಸಿ, ಎಲೆ ಪರಪರ ಆಗುವಷ್ಟು ಕಾದು ಬೇಯಿಸಿದರೆ ಅದರ ರುಚಿಯೇ ಬೇರೆ. ಹಪ್ಪಳ ಸಂಡಿಗೆ ಒಣಗಿಸಲೂ ಬಾಳೆಲೆಯೇ ಬೇಕು. ಅಮ್ಮ ಅಂತೂ ಇಡ್ಲಿ ಬಟ್ಟಲುಗಳನ್ನು ತೊಳೆಯುವ ಗೌಜಿಯೇ ಬೇಡವೆಂದು ಇಡ್ಲಿ ಪಾತ್ರೆಯ ಒಳಗೆ ಒಂದು ದೊಡ್ಡ ಬಾಳೆಲೆ ಹರವಿ ಅದರ ಮೇಲೆ ಎಲ್ಲ ಹಿಟ್ಟು ಸುರಿದು ಹಬೆಯಲ್ಲಿ ಬೇಯಿಸುತ್ತಾರೆ. ಇಷ್ಟೇ ಅಲ್ಲ ಕೊಟ್ಟಿಗೆ-ಕಡುಬು ಬೇಯಿಸಲೂ ಬಾಳೆಲೆಯೇ ಆಗಬೇಕು.
ಕಾಲೇಜು ಪರೀಕ್ಷೆಯ ದಿನಗಳಲ್ಲಿ ಕಾಲೇಜು ಜಗಲಿಯ ಮುಂದೆ ಇಟ್ಟ ಬೆಂಚಿನ ಮೇಲೆ ಕುಳಿತು ಅಂಗಳದ ಕಸ ಗುಡಿಸುವುದನ್ನು ತನ್ಮಯವಾಗಿ ನೋಡುವುದು ಭಾರೀ ಇಷ್ಟದ ಕೆಲಸ. ಪದವಿ ಪಡೆದು ಮಾಡುವ ಕೆಲಸಕ್ಕಿಂತ ಕಸಗುಡಿಸುವ ಕೆಲಸ ಎಷ್ಟು ಚೆಂದ ಅಂತೆನಿಸಿದ್ದೂ ಉಂಟು. ಪರೀಕ್ಷಾ ವೈರಾಗ್ಯ! ಹೇಳಲು ಹೊರಟ ವಿಷಯವೆ ತಪ್ಪಿತು ನೋಡಿ, ಬಾಳೆಲೆ ಬಾಡಿಸುವುದನ್ನು ನೋಡುವುದೂ ಅಷ್ಟೇ ಕಣ್ಣು-ಮನಸ್ಸಿಗೆ ಸಾರ್ಥಕವಾಗುವ ವಿಷಯ. ಹಸಿಹಸಿ ಎಲೆಯನ್ನು ಬಿಸಿ ಬಿಸಿ ಒಲೆಯ ಮೇಲೆ ಹಿಡಿದ ಕೂಡಲೇ ಅದು ಬಾಡುತ್ತ ಬಂದು ಇಡೀ ಎಲೆಯನ್ನು ಆವರಿಸುವುದನ್ನು ನೋಡುತ್ತಾ ಇದ್ದರೆ ಎಷ್ಟು ಎಲೆ ಕೊಟ್ಟರೂ, ನಾವೇ ಬಾಡುತ್ತಿದ್ದರೂ ಬಾಡಿಸಲು ಉದಾಸೀನ ಆಗುವುದೇ ಇಲ್ಲ .
ಕಥೆ ಬರೆಯುವವರಂತೂ ಕಥಾಪಾತ್ರಗಳನ್ನು ಧೊಪ್ಪನೆ ನೆಲಕ್ಕೆ ಕುಸಿದು ಬೀಳಿಸಲು “ಬುಡ ಕಡಿದ ಬಾಳೆ” ಯ ಮೊರೆ ಹೋಗುತ್ತಾರೆ. ಎರಡನೇ ಕ್ಲಾಸಿನಲ್ಲಿ ನಮ್ಮಲ್ಲಿ “ಬಾಳೆ ಮರ”ದ ಪಾಠವೋ ಪ್ರಬಂಧವೋ ಇದ್ದ ಹಾಗೆ ನೆನಪು. ಗೊನೆಯನ್ನು ಕಡಿದ ಮೇಲೆ ನಮಗೆ ಬಾಳೆ ಬದುಕಿರುವ ಅವಶ್ಯಕತೆ ಇಲ್ಲ ಅಥವಾ ಅದು ಬದುಕುವುದಿಲ್ಲವೋ ಏನೋ, ಅದನ್ನು ಕೊಚ್ಚಿ ಕಡಿದು ಬೀಳಿಸುವುದೇ! ಆಮೇಲೆ ಅದರಿಂದ ಬಾಳೆದಿಂಡು ತೆಗೆದು ಉಳಿದಿದ್ದನ್ನು ಕೊಚ್ಚಿ ಹಸುಗಳಿಗೆ ಕೊಟ್ಟರೆ, ಅವು ಅದನ್ನು “ಮ್ಮ್ ರ ಪ ರ ಕರ” ಸದ್ದು ಮಾಡುತ್ತಾ ತಿನ್ನುವುದನ್ನು ನೋಡುವುದು ಕಣ್ಣು-ಕಿವಿ ಸಾರ್ಥಕವಾಗುವ ಮತ್ತೊಂದು ನೋಟ. ಅದರ ರುಚಿ ನೋಡುವ ಆಸೆ ಆದದ್ದೂ ಇದೆ!!!
ನಮ್ಮ ಮನೆಯಲ್ಲಿ ಮಳೆಗಾಲದಲ್ಲಿ ಮನೆಯಿಂದ ಕೊಟ್ಟಿಗೆ ಅಥವಾ ಬಚ್ಚಲಿಗೆ ಹೋಗುವ ಬಾಗಿಲ ಬಳಿಯಲ್ಲಿ ಒಂದು ದೊಡ್ಡ ಬಾಳೆಲೆ ಇದ್ದೇ ಇರುತ್ತಿತ್ತು. ಮಳೆ ಬರುವಾಗ ಅದನ್ನು ಹಿಡಿದು ಬಚ್ಚಲಿನ ಕಡೆ ಹೆಜ್ಜೆ ಹಾಕುವಾಗ ನಾನೂ ಒಂದು ರಾಣಿಯೇ ಎಂಬ ಹೆಮ್ಮೆ ಮತ್ತು ಗತ್ತು ಆ ನಡೆಯಲ್ಲಿ. ಆ ಬಾಳೆಲೆ ಮೇಲೆ ಸ್ವಲ್ಪವೆ ಬೀಳುವ ಬೆಳಕಿನಲ್ಲಿ ಮಳೆ ಹನಿಗಳ ನೆರಳು ಆಕಾಶದಿಂದ ಬೀಳುವ ಮುತ್ತಿನ ಹಾಗೆ ಕಂಡಾವು. ಇಷ್ಟೆಲ್ಲ ನೋಡಿಕೊಂಡು ಬಚ್ಚಲಿಗೆ ತಲುಪುವಾಗ ಅರ್ಧ ಚೆಂಡಿಯೇ..
ಕರಾವಳಿಯಲ್ಲಿ ಕಸ್ತೂರಿ ಮಲ್ಲಿಗೆ ನೀವು ಮುಡಿದಿದ್ದರೆ, ಅಥವಾ ಮುಡಿಸಿದ್ದರೆ ಕರಾವಳಿಯ ಬಾಳೆಯ ನಾರಿನ ಬಳ್ಳಿ ಕೂಡ ಆ ಮುಡಿಗೇರಿರುತ್ತದೆ. ಹೂವಿನೊಂದಿಗೆ ಹೂವನ್ನು ಕಟ್ಟಿಕೊಂಡ ಬಳ್ಳಿಗೂ ಭಾಗ್ಯ ಮುಡಿಗೇರುವುದು. ಕೊನೆಗೆ ಹೂವೆಲ್ಲ ಒಣಗಿಯೋ ಉದುರಿಯೋ ಹೋದಾಗ ಅದು ಮಾತ್ರ ಒಂದು ಬಿಳಿ ಕೂದಲಿನಂತೆ ಜಡೆಯಲ್ಲಿ ನೇಲುತ್ತಿರುತ್ತದೆ ಕೂಡ. ಈಗ ಬಾಳೆಯ ನಾರಿನಿಂದ ಮಾಡಿದ ಚಾಪೆಯೂ ಸಿಗುತ್ತದೆ. ಯೋಗ ಮ್ಯಾಟ್ ಎಂದು ಹೊಸ ಹೆಸರು ಅದಕ್ಕೆ.
ಎಲ್ಲ ಕಡೆಯ ಹಾಗೆ ಕರಾವಳಿಯಲ್ಲೂ ಊಟಕ್ಕೆ, ತಿಂಡಿಗೆ ಬಾಳೆಲೆಯಲ್ಲಿ ಬಡಿಸುವುದು ಒಂದು ಸಂಪ್ರದಾಯ. ಹೆಚ್ಚಿನ ಮನೆಗಳಲ್ಲಿ ನಿತ್ಯದ ಊಟ ತಿಂಡಿಯೂ ಬಾಳೆಲೆಯ ಮೇಲೆಯೇ. ಊಟಕ್ಕೆ ಉಪಯೋಗಿಸುವ ತುದಿಯಿರುವ ಬಾಳೆ ಎಲೆ ಇಡುವ ರೀತಿಯಲ್ಲೂ ಒಂದು ರಿವಾಜಿದೆ. ತುದಿಯನ್ನು ನಮ್ಮ ಎಡದ ಬದಿಗೆ ಇಡುವುದು ವಿಶೇಷ, ಹಾಗೂ ಈ ತುದಿಯಲ್ಲಿ ಉಪ್ಪು ಬಡಿಸುವುದು ಶಾಸ್ತ್ರ. ಬೇರೆ ಬೇರೆ ಕಾರ್ಯದಲ್ಲಿ ಎಲೆಯನ್ನು ಇಡುವ ಕ್ರಮವೂ ಬೇರೆ ಬೇರೆ.
ಅಮೆರಿಕಕ್ಕೆ ಬಂದಾಗ ಇಲ್ಲಿ ಹಾಲಿಗೆ ಹೆಪ್ಪಾಕಲು ಹೆಪ್ಪು ಇಲ್ಲದಾಗ ನಮ್ಮಪ್ಪ ಹೇಳಿದ್ದು, ಒಂದು ಚಿಕ್ಕ ಬಾಳೆಲೆ ತುಂಡನ್ನು ಹಾಲಿಗೆ ಹಾಕಿ ಕೊದಿಸು, ಹೆಪ್ಪು ತಯಾರಾಗ್ತದೆ ಎಂದು. ಆದರೆ ಇಲ್ಲಿ ಮೊಸರು ಸಿಕ್ಕಿದರೂ ಬಾಳೆಲೆ ಮಾತ್ರ ಕಷ್ಟ.. ಇಲ್ಲಿ ದೇವಸ್ಥಾನದಲ್ಲಿಯೂ ಪ್ರಸಾದ ಭೋಜನಕ್ಕೆ ಬಾಳೆಲೆ ಸಿಗದೇ, ಕಾಗದದಲ್ಲಿ ಮಾಡಿದ ಬಾಳೆಲೆ ಮಾದರಿ ಎಲೆ ಮೇಲೆ ಉಂಡು ಕೃತಾರ್ಥರಾಗುತ್ತೇವೆ.
ಅದೆಷ್ಟು ಸಂಪ್ರದಾಯ,ವಿಚಾರಗಳು ಬಾಳೆಲೆಯ ಮೇಲೆ ಬೆಳೆದು ಬಂದಿವೆ!! ಹೇಳಿದಷ್ಟೂ ಇನ್ನೂ ನೆನಪಿಗೆ ಬರುವ ರಾಶಿ ವಿಷಯಗಳು, ಅಡುಗೆ ತಿನಸುಗಳು, ಸಂಪ್ರದಾಯಗಳು… ಮುಗಿಯುವುದೇ ಇಲ್ಲ.. ನಮ್ಮ ಬಾಳು ಕೂಡಾ ಬಾಳೆಲೆಯ ಹಾಗೆ; ಸರಿಯಾದ ಬದಿಗೆ ಇಟ್ಟುಕೊಂಡು ಹಿತವಾಗಿ ಮಿತವಾಗಿ, ಹುಳಿ ಸಿಹಿ ಎಲ್ಲವನ್ನೂ ಸವಿದು ಉಂಡರೆ ಬಾಳೇ ಬಂಗಾರವಾಗುವುದು.
- ಶ್ವೇತಾ ಕಕ್ವೆ, ಜೂನ್ ೨೮, ೨೦೧೯
This work is licensed under a Creative Commons Attribution-NonCommercial-NoDerivatives 4.0 International License.
ಅದ್ಭತವಾಗಿದೆ. ಒಮ್ಮೆ ಓದಲು ಶುರು ಮಾಡಿದರೆ ತಾನಾಗಿಯೇ ಓದಿಸಿಕೊಂಡು ಹೋಗುತ್ತದೆ
🙂 ಧನ್ಯವಾದಗಳು..
ಬಾಳೆ ಎಲೆ ಕುರಿತ ಲಲಿತ ಬರಹ, ಬಾಳೆಲೆಯಲ್ಲಿ ಭೂರಿಭೋಜನ ಸವಿದಷ್ಟೇ ಸೊಗಸಾಗಿದೆ.
ಅಂದ ಹಾಗೆ ಬಾಳೆ ಎಲೆಯನ್ನು ಪ್ರಕೃತಿ ಚಿಕಿತ್ಸೆಯಲ್ಲೂ ಪರಿಣಾಮಕಾರಿಯಾಗಿ ಬಳಸುತ್ತಾರೆ. ವ್ಯಕ್ತಿಯನ್ನು ಬಾಳೆ ಎಲೆಗಳ ಮೇಲೆ ಅಂಗಾತವಾಗಿ ಮಲಗಿಸಿ, ಎಲ್ಲ ಭಾಗಗಳೂ ಸಂಪೂರ್ಣವಾಗಿ ಆವರಿಸುವಂತೆ ಶರೀರದ ಮೇಲ್ಭಾಗದಲ್ಲೂ ಮತ್ತಷ್ಟು ಬಾಳೆ ಎಲೆಗಳಿಂದ ಹೊದಿಸಿ (ಮುಚ್ಚಿ), ಸೂರ್ಯನ ಕಿರಣಗಳು ಬಾಳೆ ಎಲೆಗಳ ಮೂಲಕ ಹಾದು ಹೋಗುವಂತೆ ಮಾಡುತ್ತಾರೆ. ಸುಮಾರು ಅರ್ಧ ಗಂಟೆ ಕಾಲ ಹೀಗೆ ಮಾಡುವುದರಿಂದ, ವ್ಯಕ್ತಿಯು ವಿಪರೀತ ಬೆವರುತ್ತಾನೆ. ತನ್ಮೂಲಕ ವಿಷಕಾರಿ ಕಲ್ಮಶಗಳು ಬೆವರಿನ ಮೂಲಕ ಹೊರದೂಡಲ್ಪಡುತ್ತವೆ.
ಹೀಗೆ, ಶರೀರದಿಂದ ಹೊರಬಂದು, ಬಾಳೆ ಎಲೆ ಸೇರುವ ವಿಷವಸ್ತುಗಳು ಎಷ್ಟಿರುತ್ತದೆಂದರೆ, ಅದನ್ನು ದನಗಳು ತಿಂದರೆ ಅವು ಸತ್ತೇ ಹೋಗುತ್ತವಂತೆ.
ನಮ್ಮ ಶರೀರದ ನಿರ್ವಿಷೀಕರಣಕ್ಕೆ ಪ್ರಕೃತಿದತ್ತ ಬಾಳೆ ಎಲೆ ಎಂತಹ ಪರಿಣಾಮಕಾರೀ ಕೊಡುಗೆಯಲ್ಲವೇ?