ಅರಿಝೋನದಲ್ಲೊಂದು ಸುಮಧುರ ಸ್ವರ ಸಂಜೆ

ಶುಕ್ರವಾರ ಜನವರಿ 25, 2019 ರಂದು ಸಂಜೆ ಅರಿಝೋನ ಟೆಂಪಿಯಲ್ಲಿರುವ ವೆಂಕಟಕೃಷ್ಣ ಕ್ಷೇತ್ರದಲ್ಲಿ ಕನ್ನಡ ಸಂಘ ಅರಿಝೋನದ ವತಿಯಿಂದ ಹೆಸರಾಂತ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ ವಿದುಷಿ ಶ್ರೀಮತಿ ನಂದಿನಿ ರಾವ್ ರ ಸಂಗೀತ ಕಾರ್ಯಕ್ರಮ `ಸಂಗೀತ ರಸಸಂಜೆ’ ಏರ್ಪಡಿಸಲಾಗಿತ್ತು.
ಸಂಗೀತದ ಹಿಮ್ಮೇಳದಲ್ಲಿ ಸ್ಥಳೀಯ ಕಲಾವಿದರಾದ ಶ್ರೀ ದೀಪಕ್ ಕುಲಕರ್ಣಿ ಅವರು ಹಾರ್ಮೋನಿಯಂ,ಶ್ರೀ ಸಂದೀಪ್ ಶಿರಾ ಅವರು ತಬಲಾ ಹಾಗೂ ಶ್ರೀಮತಿ ಲಕ್ಷ್ಮೀ ವೆಂಕಟ್ರಾಮು ಅವರು ತಾಳದೊಂದಿಗೆ ಸಹಕರಿಸಿ ಕಾರ್ಯಕ್ರಮನ್ನು ಇನ್ನಷ್ಟು ಸುಮಧುರವಾಗಿಸಿದರು.

ದೇವಸ್ಥಾನದ ಬಾಗಿಲು ಹೊಕ್ಕ ತಕ್ಷಣವೇ ನಗುಮೊಗದಲಿ ಕನ್ನಡಿಗರು ಒಬ್ಬರನ್ನೊಬ್ಬರು ಸ್ವಾಗತಿಸುತ್ತಾ, ಮಕ್ಕಳು ದೊಡ್ಡವರು ಎಲ್ಲರೂ ಸೇರಿದ ಕನ್ನಡ ಕಲರವದಲ್ಲಿ ತಾಯ್ನೆಲದಲ್ಲಿದ್ದೇವೆಯೇನೋ ಎಂಬಂತೆ ಅನಿಸುತ್ತಿತ್ತು.
ಸಂಜೆಯಾಗುತ್ತಿದ್ದಂತೆಯೇ ಅನಿತಾ ಕೃಷ್ಣಪ್ಪ ಮತ್ತು ಕುಮಾರಿ ದಿಯಾ ವಿಶ್ವನಾಥ್ ಅವರು ಗಾಯಕಿ ನಂದಿನಿಯವರ ಹಾಗೂ ಹಿಮ್ಮೇಳದವರ ಕಿರುಪರಿಚಯದೊಂದಿಗೆ ಎಲ್ಲರನ್ನೂ ರಸ ಸಂಜೆ ಕಾರ್ಯಕ್ರಮಕ್ಕೆ ಸ್ವಾಗತಿಸಿದರು.
ಗಜವದನಾ ಬೇಡುವೆ ಎಂಬ ಪ್ರಾರ್ಥನೆಯೊಂದಿಗೆ ಶುರುವಾದ ಸಂಗೀತವು “ಗೌರೀತನಯ” ಎಂಬಲ್ಲಿಗೆ ಕೇಳುಗರ ಹೃದಯದೊಳಗೆ ಅಡಗಿದ ಭಕ್ತಿಗೆ ಶ್ರುತಿ ಮೀಟಿ ಒಮ್ಮೆಲೇ ಝಲ್ ಎಂದು ಭಕ್ತಿಯಲೋ, ಭಾವದಲೋ ಪರವಶವಾಗಿ ತಲೆಬಾಗಿ ಮನಸ್ಸಿನಲೇ ವಂದಿಸುವಂತೆ ಮಾಡಿದರು ಸಂಗೀತ ಶಾರದೆ!
ಶಾಸ್ತ್ರೀಯ ಸಂಗೀತ ಕಾರ್ಯಕ್ರಮ, ಮಕ್ಕಳು ಕೇಳರು, ದೊಡ್ಡವರಿಗೂ ಕೇಳಿಸಿಕೊಳ್ಳಲು ಬಿಡರು ಎಂಬುದಾಗಿ ಯೋಚಿಸಿದ್ದರೆ, ಈ ಸ್ವರ ಸಂಜೆ ಕಾರ್ಯಕ್ರಮದಲ್ಲಿ ನಂದಿನಿಯವರು ಎಲ್ಲಾ ಮಕ್ಕಳನ್ನು ಕರೆದು ವೇದಿಕೆಯ ಮುಂಭಾಗದಲ್ಲಿ ಸಾಲಾಗಿ ಕೂರಿಸಿ, ಮಕ್ಕಳು ತಾಳವನ್ನು ತಟ್ಟುತ್ತಾ ಒಂದಿಡೀ ಹಾಡನ್ನು ಹಾಡುವಂತೆ ಮಾಡಿ ಕಾರ್ಯಕ್ರಮವನ್ನು ವಿಶೇಷವನ್ನಾಗಿಸಿದ್ದರು.
ಸ್ವಾಗತಂ ಕೃಷ್ಣ, ಪವಮಾನ, ಕೊಡಗನ ಕೋಳಿ ನುಂಗಿತ್ತಾ, ವೆಂಕಟಾಚಲ ನಿಲಯಂ, ಜೋಗದ ಸಿರಿ ಬೆಳಕಿನಲ್ಲಿ ಮೊದಲಾಗಿ ಹಲವಾರು ಶಾಸ್ತ್ರೀಯ ಸಂಗೀತ, ಹಿಂದುಸ್ತಾನಿ ಸಂಗೀತ, ಜಾನಪದ, ಚಲನಚಿತ್ರಗಳ ಹಾಡುಗಳನ್ನು ಒಳಗೊಂಡು ಅದನ್ನೊಂದು ವೈವಿಧ್ಯಮಯವಾದ ಸಂಗೀತ ಕಾರ್ಯಕ್ರಮವನ್ನಾಗಿಸಿತ್ತು.
ಪ್ರತೀ ಹಾಡಿನ ನಂತರ ಅದರ ರಾಗದ ಬಗ್ಗೆ ವಿವರಿಸುತ್ತಾ ಅದೇ ರಾಗದಲ್ಲಿ ಪ್ರಸಿದ್ಧವಾಗಿರುವ ಹಲವು ಕೃತಿಗಳನ್ನು, ಚಲನಚಿತ್ರದ ಹಾಡುಗಳನ್ನು, ಜಾನಪದ ಗೀತೆಗಳನ್ನು ಹಾಡುತ್ತಾ ನಂದಿನಿಯವರು ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಿದ ರೀತಿ ಸುಂದರವಾಗಿತ್ತು. ಪ್ರೇಕ್ಷಕರಿಗೆ ಹಾಡಿನ ಬಗೆಗಿನ ಪ್ರಶ್ನೆಗಳನ್ನು ಎಸೆಯಿತ್ತಾ, ಅವರ ಕೋರಿಕೆಯ ಮೇರೆಗೆ ಹಲವು ಹಾಡುಗಳನ್ನು ಹಾಡುತ್ತಾ ಎಲ್ಲರನ್ನೂ ಒಂದಾಗಿಸಿದ ರೀತಿ ಅಪ್ಯಾಯಮಾನವಾಗಿತ್ತು.
‘ಬಂಧನ’ ಚಲನ ಚಿತ್ರದ ಹಾಡನ್ನು ಹಾಡುತ್ತಾ ಅವರು ಅವರ ತಂದೆಯವರು ಆ ಚಲನಚಿತ್ರದಿಂದ ಪ್ರಭಾವಿತರಾಗಿ ಹೆಣ್ಣುಮಗು ಹುಟ್ಟಿದಲ್ಲಿ ‘ನಂದಿನಿ’ ಎಂಬ ಹೆಸರನ್ನಿಡುತ್ತೇನೆಂದು ಅಂದುಕೊಂಡಿದ್ದೂ ಮರುದಿನ ತಾವು ಹುಟ್ಟಿದ್ದು, ತಮಗೆ ‘ನಂದಿನಿ’ ಎಂಬ ಹೆಸರು ಬರಲು ಆ ಚಲನ ಚಿತ್ರ ಹೇಗೆ ಕಾರಣವಾಯಿತು ಎಂಬುದನ್ನು ಹಂಚಿಕೊಂಡರು. ಸಂಗೀತದ ಮಾಧುರ್ಯ ಕೇಳುಗರ ಮನಸನ್ನು ತುಂಬಿಸುತ್ತ ಇದ್ದರೆ, “ತುಂಬಿದ ಕೊಡ ತುಳುಕುವುದಿಲ್ಲ” ಎಂಬಂತೆ ನಂದಿನಿಯವರ ವ್ಯಕ್ತಿತ್ವ ನಮ್ಮೆಲರ ಹೃದಯದ ತುಂಬಾ ಸಜ್ಜನೆಯ ಹೆಜ್ಜೇನ ಎರೆಸಿಕೊಂಡಿತ್ತು.ಸುಶ್ರಾವ್ಯ ಹಾಡುಗಾರಿಕೆಯೊಂದಿಗೆ ಸುಹಾಸಿನಿಯಾದ ನಂದಿನಿಯವರು ನಮ್ಮೆಲ್ಲರ ಹೃದಯದಲ್ಲಿ ಸುಂದರವಾದ ಛಾಪು ಮೂಡಿಸುತ್ತಾ ಅಂದಿನ ಸ್ವರ ಸಂಜೆ ಶಾಶ್ವತವಾಗಿ ನಮ್ಮ ನೆನಪಿನಲ್ಲಿ ಉಳಿಯುವಂತೆ ಮಾಡಿದರು.
ಕಾರ್ಯಕ್ರಮದ ಕೊನೆಯಲ್ಲಿ ಕನ್ನಡ ಸಂಘದ ಅಧ್ಯಕ್ಷರಾದ ಅನಿಲ್ ಭಾರದ್ವಾಜರು ಎಲ್ಲರಿಗೂ ಧನ್ಯವಾದಗಳನ್ನು ಸಮರ್ಪಿಸುತ್ತಾ ಸಂಘದ ಸದಸ್ಯರ ಕೋರಿಕೆಗೆ ಅನುಗುಣವಾಗಿ ಇನ್ನೂ ಹಲವು ಉತ್ತಮ ಕಾರ್ಯಕ್ರಮಗಳನ್ನು ಕನ್ನಡ ಸಂಘದ ಮುಖಾಂತರ ಆಯೋಜಿಸುವ ಬಗ್ಗೆ ಮಾತಾಡುತ್ತ ಅಂದಿನ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿದರು.
ಕನ್ನಡ ಸಂಘ ಅರಿಝೋನ ಈ ವರ್ಷದ ತನ್ನ ಚೊಚ್ಚಲ ಕಾರ್ಯಕ್ರಮವನ್ನು ಸಮರ್ಥವಾಗಿ ಆಯೋಜಿಸಿ ಕನ್ನಡಿಗರನ್ನು ಒಂದುಗೂಡಿಸುತ್ತಾ ಕನ್ನಡದ ಕಂಪನ್ನು ಪಸರಿಸಿದ ಪರಿ ಶ್ಲಾಘನೀಯ. ಇಂಥಹ ಇನ್ನಷ್ಟು ಕಾರ್ಯಕ್ರಮಗಳೊಂದಿಗೆ ಕೆ.ಎಸ್.ಎ ತಂಡ ಅರಿಝೋನದಲ್ಲಿ ಕನ್ನಡವನ್ನು, ಕರ್ನಾಟಕದ ಸಂಸ್ಕೃತಿಯನ್ನು ಬೆಳೆಸುವಂತಾಗಲಿ ಎಂದು ಹಾರೈಸುವ.

-ಶ್ವೇತಾ ಕಕ್ವೆ

Creative Commons License
This work is licensed under a Creative Commons Attribution-NonCommercial-NoDerivatives 4.0 International License.

Leave a Reply

Your email address will not be published. Required fields are marked *