ಕನ್ನಡದ ಅಂಕೆಗಳ ತಾರ್ಕಿಕ ಬುನಾದಿ

ಈ ಲೇಖನವನ್ನು ಕನ್ನಡ ಭಕ್ತಿ ಮಾಲಿಕೆಗಾಗಿ ಬರೆದದ್ದು, ಸುಲಭವಾಗಿ ಓದಲು ಮಂಜಟಿಯಲ್ಲೂ ಲಗತ್ತಿಸಿದ್ದೇನೆ

ಕನ್ನಡದ ಅಂಕೆಗಳಲ್ಲಿ ಅಡಗಿರುವ ವಿಭಕ್ತಿಗಳು

ಪರಿವಿಡಿ

ಪ್ರಸ್ತಾವನೆ

ಕನ್ನಡದ ಸಂಖ್ಯಾವಾಚಕಗಳಲ್ಲಿ, ಒಂದರಿಂದ ಹತ್ತರವರೆಗಿನ ಸಂಖ್ಯೆಗಳು ಸ್ವತಂತ್ರ ಪದಗಳು. ಆದರೆ ಹನ್ನೊಂದರ ನಂತರದ ಸಂಖ್ಯೆಗಳು ಸಮಸ್ತಪದಗಳು. ಅದರಲ್ಲೂ ಹನ್ನೊಂದರಿಂದ ಹದಿನೆಂಟರವರೆಗಿನವು ಬೇರೆಯವುಗಳಂತಿಲ್ಲ.

ಹಿಂದೀ, ಸಂಸ್ಕೃತ ಭಾಷೆಗಳಲ್ಲಿ ಇವು ಏಕರೂಪದಲ್ಲಿವೆ. ಉದಾಹರಣೆಗೆ,

ಸಂಖ್ಯೆ ಹಿಂದೀ ಸಂಸ್ಕೃತ ಅರ್ಥ
11 ಗ್ಯಾರಹ್ ಏಕಾದಶ 1 + 10
12 ಬಾರಹ್ ದ್ವಾದಶ 2 + 10
13 ತೇರಹ್ ತ್ರಯೋದಶ 3 + 10
14 ಚೌದಹ್ ಚತುರ್ದಶ 4 + 10

ಆದರೆ ಕನ್ನಡದ ಹನ್ನೊಂದು ಹನ್ನೆರಡು ಹದಿಮೂರು ಇತ್ಯಾದಿಗಳಲ್ಲಿ 10+1,2,3 ರೀತಿಯಲ್ಲಿ ಇರುವುದು ಮಾತ್ರವಲ್ಲದೇ ಹತ್ತರಭಾಗವೂ ಏಕರೂಪವಾಗಿಲ್ಲ, ಹನ್ನ ಮತ್ತು ಹದಿ ಎಂಬ ಎರಡು ರೂಪಗಳು ಕಾಣುತ್ತವೆ. ಹಾಗಾದರೆ ಕನ್ನಡ ಭಾಷೆಯ ಸಂಖ್ಯೆಗಳಿಗೊಂದು ತಾರ್ಕಿಕ ವ್ಯವಸ್ಥೆಯ ಮೂಲವಿಲ್ಲವೇ? ಇದೆಯೆಂದು ತೋರಿಸುವುದು ಈ ಲೇಖನದ ಉದ್ದೇಶ.

ಈ ಸಂಖ್ಯೆಗಳ ಹುಟ್ಟನ್ನು ಹಳಗನ್ನಡದ ಹಿನ್ನೆಲೆಯಿಟ್ಟುಕೊಂಡು ನೋಡಿದಾಗ 11-18 ರಲ್ಲಿ ಹುದುಗಿರುವ *ಪಂಚಮೀ ವಿಭಕ್ತಿ ಯು ನಮ್ಮಲ್ಲಿ ಮಾತ್ರ ಇರುವ ಸ್ವಾರಸ್ಯ ಎಂಬುದು ಕಾಣುತ್ತದೆ. ಉಳಿದಂತೆ 19ರ ಮೇಲಿನ ಸಂಖ್ಯೆಗಳ ಹಿಂದಿನ ತಾರ್ಕಿಕ ವ್ವವಸ್ಥೆಯನ್ನೂ ನೊಡೋಣ.

ಬರೆಹಗಾರರು / Authors

ಪರವಾನಗಿ / License

ಈ ಲೇಖನವನ್ನು ಪೂರ್ಣವಾಗಿ ಅಥವಾ ಭಾಗಶಃ ಉದ್ಧರಿಸುವಾಗ (quote) ಲೇಖನದ ಕೊಂಡಿ ಹಾಗೂ ಲೇಖಕರ ಹೆಸರನ್ನು (ಗಣೇಶಕೃಷ್ಣ ಶಂಕರತೋಟ) ಕಡ್ಡಾಯವಾಗಿ ಹಾಕತಕ್ಕದ್ದು. Creative Commons Attribution-NonCommercial-NoDerivatives 4.0 International License

ಹದಿಮೂರು

ಈ ಅಧ್ಯಯನವನ್ನು ಹದಿಮೂರರಿಂದ ಆರಂಭಿಸೋಣ. ಹನ್ನೊಂದು ಹನ್ನೆರಡುಗಳು ಯಾಕಲ್ಲವೆಂದು ಮುಂದೆ ವಿಷದವಾಗುತ್ತದೆ. ಹದಿಮೂರರಲ್ಲಿ ಇರುವ ಹತ್ತು ಮತ್ತು ಮೂರು ಎಂಬ ಎರಡು ಭಾಗಗಳನ್ನು ನೋಡಬೇಕು. ಅವುಗಳ ಮಧ್ಯೆ ಇರುವ ಸಂಬಂಧ ನೋಡಬೇಕು. ಹತ್ತರ ಮೂರೇ, ಹತ್ತು ಮತ್ತು ಮೂರೇ, ಹತ್ತರ ನಂತರ ಮೂರೇ ?

ಹತ್ತು

ನಾಮಪದಗಳ ನಡುವಿನ ಸಂಬಂಧವನ್ನು ನಾವು ವಿಭಕ್ತಿಯಿಂದ ತೋರಿಸುತ್ತೇವೆ. ಪ್ರತ್ಯಯವನ್ನು ನೋಡಿ ವಿಭಕ್ತಿಯನ್ನು ತಿಳಿದು ಒಂದು ನಾಮ ಇನ್ನೊಂದರ ಮೇಲೆ ಹೇಗೆ ಅವಲಂಬಿಸಿದೆ ಎಂದು ಅರಿಯಬೇಕು. ಹದಿಮೂರರ ಹುಟ್ಟು ಹಳಗನ್ನಡದಲ್ಲಿ ಆದದ್ದು. ಹಳಗನ್ನಡದಲ್ಲಿ 10 = ಪತ್ ಅಥವಾ ಪತ್ತು. ಪತ್/ಪತ್ತು ಶಬ್ದಕ್ಕೆ ವಿಭಕ್ತಿ ಪ್ರತ್ಯಯಗಳನ್ನು ಜೋಡಿಸಿದಾಗ ಕೆಳಗಿನ ಪದಗಳು ಉಂಟಾಗುತ್ತವೆ

  1. ಪತ್/ಪತ್ತು
  2. ಪತ್ತಂ (ಹತ್ತನ್ನು)
  3. ಪತ್ತಿಂ (ಹತ್ತನ್ನು ಬಳಸಿ)
  4. ಪತ್ತಕ್ಕೆ (ಹತ್ತಕ್ಕೆ)
  5. ಪತ್ತಿನತ್ತಣಿಂ,ಪತ್ತರದೆಸೆಯಿಂದ, ಪತ್ತಿಂ (ಹತ್ತಿಂದ, ಹತ್ತರಿಂದ)
  6. ಪತ್ತರ (ಹತ್ತರ)
  7. ಪತ್ತೊಳ್ (ಹತ್ತಲ್ಲಿ)

ಇವುಗಳಲ್ಲಿ ಕೆಲವು ಪದಗಳು ಸದ್ಯಕ್ಕೆ ಉಪಯೋಗಕ್ಕಿಲ್ಲ. ನಮಗೆ ಅವಶ್ಯವಾಗಿರುವವು 3, 5, 6 ನೇ ವಿಭಕ್ತಿಗಳು. ಇಲ್ಲಿ ಗಮನದಲ್ಲಿಟ್ಟುಕೊಳ್ಳಬೆಕಾದ ಅಂಶವೇನೆಂದರೆ ಪತ್ ಮೂಲಕ್ಕೆ 3ನೆ ವಿಭಕ್ತಿಯ ಇಂ ಪ್ರತ್ಯಯ ಹಚ್ಚಿದಾಗ ಪತಿಂ ಶಬ್ದ ಸಿಗುತ್ತದೆ, ಪತಿಂ ಅಪಭ್ರಂಶವಾಗಿ ಪದಿಂಆಗುತ್ತದೆ. ಪತ್+ಇಂ ಪದಿಂ ಆಗುವ ಪ್ರಕ್ರಿಯೆಯನ್ನು ಸಂಸ್ಕೃತದ ಜಶ್ತ್ವ ಸಂಧಿಗೆ ಹೋಲಿಸಬಹುದು, ಜಗತ್+ಈಶ ಜಗದೀಶ ಆದಂತೆ ಎಂದುಕೊಳ್ಳಬಹುದು. ಪತ್ ಪಕ್ತ್ ನಿಂದ ಬಂತು ಎನ್ನುತ್ತಾರೆ, ಹೀಗಿರುವಾಗ ನಿಖರವಾಗಿ ಯಾವ ಪದದಿಂದ ಯಾವುದು ಬಂತು ಎನ್ನುವುದು ಗೌಣ. ಪದಿಂ ಪ್ರಯೋಗದಲ್ಲಿರುವುದರಿಂದ ಅದಕ್ಕೆ ಅತ್ಯಂತ ನಿಕಟವಾದ ಪತ್+ಇಂ ಅಲ್ಲದೇ ಬೇರೆ ಜನಕ ಇರುವ ಸಾಧ್ಯತೆ ಇಲ್ಲ.

ತೃತಿಯೆಯೂ ಪಂಚಮಿಯೂ

ಕತ್ತಿಯಿಂ ಕಡಿದಂ, ಕತ್ತಿಯಿಂದ ಕಡಿದನು ಎಂಬಲ್ಲಿ ಕತ್ತಿ ಉಪಕರಣ. ಕತ್ತಿಯೊಳ್ ಕಡಿದಂ, ಕತ್ತಿಯಲ್ಲಿ ಕಡಿದನು ಎಂದಾಗಲೂ ಅಷ್ಟೆ, ಕತ್ತಿ ಉಪಕರಣ. ಪ್ರತ್ಯಯ ಏನೇ ಇದ್ದರೂ ವಿಭಕ್ತಿ ಕರಣಕಾರಕದ ತೃತಿಯಾ ವಿಭಕ್ತಿ. ಮರದಿಂ ಫಲ ಬೀೞ್ದುದು, ಮರದಿಂದ ಹಣ್ಣು ಬಿದ್ದುದು ಗುಡ್ಡದಿಂದ ಆಚೆ, ಈ ಕೋಲಿಂದ ಉದ್ದ ಎಂಬಲ್ಲಿ ಇಂ, ಇಂದ ಪ್ರತ್ಯಯಗಳಿದ್ದರೂ ಮರ, ಗುಡ್ಡ, ಕೋಲುಗಳು ಉಪಕರಣಗಳಲ್ಲ ಎಂಬುದು ಸ್ವಯಂ ವೇದ್ಯ. ಮರವಿದ್ದಲ್ಲಿ ಇದ್ದ ಹಣ್ಣು ಈಗ ಇಲ್ಲ. ಇದನ್ನು ಅಪಾದಾನ (ಒಂದು ವಸ್ತುವಿನಿಂದ ದೂರ ಸರಿಯುವುದು) ಕಾರಕ ಎನ್ನುತ್ತಾರೆ, ಇದುವೇ ಪಂಚಮೀ ವಿಭಕ್ತಿ. ಸೇಡಿಯಾಪು ಕೃಷ್ಣ ಭಟ್ಟರು ಪಂಚಮೀ ವಿಭಕ್ತಿ ಲೇಖನದಲ್ಲಿ ಈ ವಿಚಾರವನ್ನು ಪ್ರತಿಪಾದಿಸಿದ್ದಾರೆ[1]. ಇಂ ಮತ್ತು ಇಂದ ಪ್ರತ್ಯಯಗಳು ಮೂಲತಃ ಪಂಚಮೀ ವಿಭಕ್ತಿಗಳು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.ಅಲ್ಲಿಂದ ಎಂಬ ಶಬ್ದಕ್ಕೆ ಅಲ್ಲಿ-ಗೆ ಸಾಪೇಕ್ಷವಾಗಿ ಎಂಬ ಪಂಚಮೀ ಅರ್ಥವೇ ಹೊರತು ಅಲ್ಲಿ-ಯನ್ನುಪಯೋಗಿಸಿ ಎಂಬ ತೃತಿಯಾರ್ಥ ಬರುವುದೇ ಇಲ್ಲ.

ಹತ್ತು ಇದ್ದಲ್ಲಿಂದ, ಹತ್ತಕ್ಕೆ ಸಾಪೇಕ್ಷವಾಗಿ ಎಂಬ ಅರ್ಥಬರಲು ಪಂಚಮೀ ವಿಭಕ್ತಿ ಮತ್ತು ಅದರ ಪ್ರತ್ಯಯವನ್ನು ಪ್ರಯೋಗಿಸಬೇಕೆಂಬುದನ್ನು ನೋಡಿದೆವು. ಪಂಚಮೀ ಪ್ರತ್ಯಯವಾಗಿ -ದೆಸೆಯಿಂದ, -ಅತ್ತಣಿಂ ಗಳನ್ನು ನಾವು ಎಲ್ಲೂ ಪ್ರಯೋಗಿಸುವುದಿಲ್ಲ, ಇಂ, ಇಂದ ಗಳನ್ನೇ ಉಪಯೊಗಿಸುವುದು ಎಂದೂ ನೋಡಿದೆವು.ಆದ್ದರಿಂದ ಪತ್ತಿಂ ಶಬ್ದವು ಪತ್ತರತ್ತಣಿಂ ಹತ್ತರದೆಸೆಯಿಂದ ಕ್ಕೆ ಸಮಾನವಾದ ಪಂಚಮೀ ಪ್ರಯೋಗವೆಂಬುದು ನಿಸ್ಸಂಶಯ.

ಪತ್+ಇಂ+ಮೂರು

ಹತ್ತರತ್ತಣಿಂದ ಮೂರು, ಹತ್ತರಿಂದ ಆಚೆ ಮೂರು, ಹತ್ತಕ್ಕಿಂತ ಮೂರು (ಜಾಸ್ತಿ) ಎಂಬರ್ಥದಲ್ಲಿ ಹುಟ್ಟಿರುವ ಪದವಿದು. ಪತ್+ಇಂ+ಮೂರು = ಪತಿಮ್+ಮೂರು = ಪತಿಮ್ಮೂರು = ಪತಿಮೂರು (ಲಗಂ ವರ್ಜನೆ) ಪತ್+ಇಂ+ಮೂರು = ಪದಿಂ+ಮೂರು(ಮೇಲೆ ನೋಡಿದ ಅಪಭ್ರಂಶ) = ಪದಿಮ್ಮೂರು = ಪದಿಮೂರು (ಲಗಂ ವರ್ಜನೆ) ಪತ್ತು+ಇಂ+ಮೂರು = ಪತ್ತಿಮ್+ಮೂರು = ಪತ್ತಿಮ್ಮೂರು = ಪದಿಮೂರು (ಅಪಭ್ರಂಶ) ಈ ರೂಪಗಳೇ ಮೂಲರೂಪವಿರಬಹುದು. ಪಂಚಮೀ ವಿಭಕ್ತಿಯಿಂದ ಹುಟ್ಟಿದುದೇ ಕನ್ನಡ ಸಂಖ್ಯೆಗಳಲ್ಲಿರುವ ಸ್ವಾರಸ್ಯ

ಪದಿಂ, ಪಯಿಂ, ಪನ್

ಈ ಮೂರು ಪದಗಳೂ ಪತ್ತಿಂ ನ ವಿವಿಧ ಅಪಭ್ರಂಶ ರೂಪಗಳು ಎಂಬುದು ಈ ಲೇಖನದ ಮತ. ಆ ಕಾಲದ ಪ್ರಯೋಗಗಳನ್ನು ಗಮನಿಸಿ ಶಬ್ದಮಣಿದರ್ಪಣದಲ್ಲಿ ಕೇಶಿರಾಜನು ಇವುಗಳನ್ನು ಪತ್ತುವಿನ ಆದೇಶರೂಪಗಳು ಎಂದಷ್ಟೇ ಹೇಳಿದ್ದಾನೆ. ಯಾಕೆ ಎಂಬುದನ್ನು ವಿಶ್ಲೇಷಿಸಿಲ್ಲ. ಆದರೆ ಮೇಲೆ ನೋಡಿದಂತೆ ಪದಿಂ ಪತಿಂ ನ ಅಪಭ್ರಂಶ. ಪದಿಂ ನ ದಕಾರ ಶಿಥಿಲವಾಗಿ ಪಯಿಂ. ಅನುಸ್ವಾರದ ನಕಾರದಿಂದ ಪಯಿನ್ ಬಂದು ಅದರ ಯಕಾರ ಲೋಪವಾಗಿ ಪನ್ ಬಂದಿರಬೇಕು.

ಪತ್ತರ್ಕೆ ಪಯಿಂನೆದಾ ದತ್ತಾದೇಶ ಸಮುಂತು ಸಾಸಿರಮಿದಿರೊಳ್‌ ಪತ್ತುಗೆಗೊಳ್ ನೂಱರ್ಕಂ ಮತ್ತಂ ಸಾಸಿರಕಮಂತ್ಯಲೋಪಂ ವಿರಳಂ ||ಸೂತ್ರ 202||

ಪತ್ತರ್ಕೆ ಪನ್ನೆನಿಕ್ಕುಮ ದುತ್ತರಕೊಂದೆರಡು ನೆಲಸೆ ಪದಿಯೆಂದಕ್ಕುಂ ಮತ್ತೊದವಿ ಮೂಱು ನಾಲ್ಕಿರೆ ಸುತ್ತೇಂ ಸ್ವರಮಿರೆ ನಕಾರವಿಧಿ ಮುಂದೆಲ್ಲಂ ||ಸೂತ್ರ 203||

ಪತ್-ಇಗೆ ವಿಭಕ್ತಿಸೂಚಕವಾದ ಅನುಸ್ವಾರ ಸಮೇತವಾದ ಪದಿಂ ಇತ್ಯಾದಿಗಳು ಆದೇಶವಾಗಲಾರದು ಅನುಸ್ವಾರದ ಅನುಸಾರ ನೋಡಿ. ಪತಿಂ ಅಥವಾ ಪತ್ತಿಂ ಗೆ ವಿಭಕ್ತರೂಪದ ಅಂದರೆ ಪದಿಂ -ನ ಆದೇಶವಾಗಿರಬಹುದು ಅಷ್ಟೇ. ಅದಲ್ಲದೇ, ಅನುಸ್ವಾರವು ಮಕಾರ ನಕಾರ ಗಳ ಉಚ್ಚಾರಣೆಗಳನ್ನು ಧರಿಸುವುದನ್ನು ಬೇರೆಡೆಯೂ ನೋಡಿದ್ದೇವೆ.

ಲಗಂ ವರ್ಜನೆ

ಕನ್ನಡ ಭಾಷೆಯು ಶಬ್ದದಾರಂಭದಲ್ಲಿ ಲಗಂ ಜತಿಯನ್ನು ವರ್ಜಿಸುತ್ತದೆ. ಇದರ ಬಗ್ಗೆ ಇಲ್ಲಿ ಓದಬಹುದು. ಜಗಣ ಅಥವಾ ಲಗಂ ವರ್ಜಿಸಲು ಕೆಲವು ಆಗಮ ಆದೇಶ ಲೋಪಗಳು ದ್ವಿತ್ವಗಳು ಉಂಟಾಗುತ್ತವೆ.

ಅಂಕಿಗಳ ಅಟ್ಟಣೆ

  1. ಕನ್ನಡದಲ್ಲಿ ಜಗಣ/ಲಗಂ ವರ್ಜ್ಯ
  2. ಹಳಗನ್ನಡದಲ್ಲಿ 10 = ಪತ್
  3. ಇಂ ಪ್ರತ್ಯಯ ಪಂಚಮೀ ವಿಭಕ್ತಿಯ ಸಾಪೇಕ್ಷ ದೂರವನ್ನು ಕೊಡುತ್ತದೆ
  4. ಅನುಸ್ವಾರವು ಮಕಾರ ನಕಾರ ಗಳೆರಡನ್ನೂ ಹೊಂದಬಲ್ಲುದು. ಈ ಮೇಲಿನ ಅಂಶಗಳನ್ನು ಮನದಲ್ಲಿಟ್ಟುಕೊಂಡು 10 – 18 ಅಂಕಿಗಳ ಅಟ್ಟಿಯನ್ನು ಮಾಡಬಹುದು.

ಹನ್ನೊಂದು

ಪತ್ತಿಂ+ಒಂದು ->ಪದಿಂ+ಒಂದು -> ಪಯಿನ್+ಒಂದು -> ಪನ್+ಒಂದು -> ಪನೊಂದು -> ಪನ್ನೊಂದು (ಲಗಂ ವರ್ಜನೆ, ನಾನ ನಾನಾ ಜತಿಗಾಗಿ)

ಹನ್ನೆರಡು

ಪತ್ತಿಂ+ಎರಡು ->ಪದಿಂ+ಎರಡು -> ಪಯಿನ್+ಎರಡು -> ಪನ್+ಎರಡು -> ಪನೆರಡು -> ಪನ್ನೆರಡು ( ನಾನ ನಾನಾ ಜತಿಗಾಗಿ)

ಹದಿಮೂರು

ಪತ್ತಿಂ+ಮೂರು ->ಪದಿಂ+ಮೂರು -> ಪದಿಮ್+ಮೂರು -> ಪದಿಮ್ಮೂರು ->ಪದಿಮೂರು (ಲಗಂ ವರ್ಜನೆ)

ಹದಿನಾಲ್ಕು

ಪತ್ತಿಂ+ನಾಲ್ಕು ->ಪದಿಂ+ನಾಲ್ಕು -> ಪದಿನ್+ನಾಲ್ಕು (ಅನುಸ್ವಾರದ ನಕಾರ ಉಚ್ಚಾರಣೆ) -> ಪದಿನ್ನಾಲ್ಕು ->ಪದಿನಾಲ್ಕು (ಲಗಂ ವರ್ಜನೆ)

ಹದಿನೈದು

ಪತ್ತಿಂ+ಐದು ->ಪದಿಂ+ಐದು -> ಪದಿನ್+ಐದು (ಅನುಸ್ವಾರದ ನಕಾರ ಉಚ್ಚಾರಣೆ) -> ಪದಿನೈದು

ಹದಿನಾರು

ಪತ್ತಿಂ+ಆರು ->ಪದಿಂ+ಆರು -> ಪದಿನ್+ಆರು (ಅನುಸ್ವಾರದ ನಕಾರ ಉಚ್ಚಾರಣೆ) -> ಪದಿನಾರು

ಹದಿನೇಳು

ಪತ್ತಿಂ+ಏಳು ->ಪದಿಂ+ಏಳು -> ಪದಿನ್+ಏಳು (ಅನುಸ್ವಾರದ ನಕಾರ ಉಚ್ಚಾರಣೆ) -> ಪದಿನೇಳು

ಹದಿನೆಂಟು

ಪತ್ತಿಂ+ಎಂಟು ->ಪದಿಂ+ಎಂಟು -> ಪದಿನ್+ಎಂಟು (ಅನುಸ್ವಾರದ ನಕಾರ ಉಚ್ಚಾರಣೆ) -> ಪದಿನೆಂಟು

ಹತ್ತೊಂಬತ್ತು +

ಇಲ್ಲಿಂದ ಮುಂದೆ ಷಷ್ಠೀ ತತ್ಪುರುಷ ಸಮಾಸಗಳೇ ಕಾಣುತ್ತವೆ, ಪಂಚಮೀ ಇಲ್ಲ ಪತ್ತ+ಒಂಬತ್ತು -> ಪತ್ತೊಂಬತ್ತು ಪತ್ತರ+ಒಂಬತ್ತು -> ಪತ್ತ್ರೊಂಬತ್ತು ಉತ್ತರ ಕರ್ನಾಟಕದಲ್ಲಿ ಪ್ರಯೋಗದಲ್ಲಿದೆ ಇರ್+ಪತ್+ಅ +ಒಂದು -> ಇರ್ಪತ್ತೊಂದು -> ಇಪ್ಪತ್ತೊಂದು ರಲ್ಲಿ ಕೂಡಾ ಷಷ್ಠೀ ವಿಭಕ್ತಿಯ ಪ್ರತ್ಯಯ ಕಾಣುತ್ತದೆ. ಇಪತ್ತೊಂದನ್ನು ಇಪ್ಪತ್ತು+ಒಂದು ಎಂದು ಬಿಡಿಸುವುದು ಸರಿಯಾಗದು, ಇಪ್ಪತ್ತ ಒಂದು ಎಂಬ ಪ್ರಯೋಗ ಆಡುಮಾತಿನಲ್ಲಿ ಇದ್ದೇ ಇದೆ. ನೂರ ಇಪ್ಪತ್ತೊಂದು ರಲ್ಲಿ ನೂರೂ ಇಪ್ಪತ್ತೂ ಷಷ್ಠೀ ವಿಭಕ್ತಿಯಲ್ಲಿರುವುದು ಇದಕ್ಕೆ ಪುಷ್ಠಿ ಕೊಡುತ್ತದೆ. ಪಂಚಮಿಯ ಚೋದ್ಯ ಹನ್ನೊಂದರಿಂದ ಹದಿನೆಂಟರವರೆಗೆ ಮಾತ್ರ. ಬಹುಶಃ ಆಕಾಲದಲ್ಲಿ ಇಪ್ಪತ್ತರೊಳಗಿನ ಅಂಕಿಗಳು ಸಾಕಾಗಿದ್ದವೇನೋ. ಇಲ್ಲಾ ಹತ್ತೊಂಬತ್ತರಲ್ಲಿ ಬಂದ ಷಷ್ಠೀ ವಿಭಕ್ತಿ ಮುಂದಕ್ಕೂ ಹಾಗೇ ಮುಂದುವರಿದಿರಬಹುದು.

ಸಮಾರೋಪ

ಕನ್ನಡದ ಪದಗಳು ಈ ಕೆಳಗಿನ ತಾರ್ಕಿಕ ನೆಲೆಯನ್ನು ಹೊಂದಿವೆ.

  1. ಹತ್ತನ್ನು ಮೂಲವಾಗಿಟ್ಟು ಅಲ್ಲಿಂದ ಮುಂದೆ ಎಷ್ಟು ದೂರ ಎಂದು ಅಳೆಯುತ್ತದೆ.
  2. ಲಗಂ ನ ತಿರಸ್ಕಾರವು ಸಂಖ್ಯೆಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರವನ್ನುವಹಿಸುತ್ತದೆ.
  3. ಸಂಖ್ಯೆಗಳಲ್ಲಿರುವ ಇಂ ಪ್ರತ್ಯಯವು ಸಾಪೇಕ್ಷ ದೂರ ಸೂಚಿಸುವುದರಿಂದ, ಸೇಡಿಯಾಪು ಅವರ ಇಂದ ಪ್ರತ್ಯಯವು ಪಂಚಮಿಯದ್ದೆಂಬ ಪ್ರತಿಪಾದನೆಗೆ ಪೂರಕ ಸಾಕ್ಷಿಯಾಗಿ ತೆಗೆದುಕೊಳ್ಳಬೇಕಾಗುತ್ತದೆ. ವೈಯ್ಯಾಕರಣರು ಕಾಣುವ ಮೊದಲೇ ಕನ್ನಡಿಗರು ಇಂದವನ್ನು ಪಂಚಮಿಯದ್ದಾಗಿಸಿದ್ದಾರೆ.

  1. ಮರದತ್ತಣಿಂ, ಮರದಿಂ, ಮರದಿಂದ: ಪಂಚಮೀ – ಹೊಸಗನ್ನಡದಲ್ಲಿ "ಮರದ ದೆಸೆಯಿಂದ" ಎಂದು ವ್ಯಾಕರಣ ಪಾಠದಲ್ಲಿ ಕಂಡುಬಂದರೂ ಈ ಪ್ರಯೋಗ ಅಷ್ಟಾಗಿ ಕಾಣಿಸುವುದಿಲ್ಲ. ಈ ಬಗೆಗೆ ಆಳವಾದ ವಿವೇಚನೆಗಾಗಿ ಶ್ರೀ ಸೇಡಿಯಾಪು ಕೃಷ್ಣಭಟ್ಟರ "ಪಂಚಮೀ ವಿಭಕ್ತಿ" ಎಂಬ ಲೇಖನವನ್ನು ನೋಡಬಹುದು. ಡಾ|| ಶ್ರೀ ಪಾದೆಕಲ್ಲು ವಿಷ್ಣುಭಟ್ಟರು ತಾವು ಸಂಪಾದಿಸಿದ "ವಿಚಾರಪ್ರಪಂಚ" ಎಂಬ ಸೇಡಿಯಾಪು ಕೃಷ್ಣಭಟ್ಟರ ಲೇಖನಗಳ ಸಂಪುಟದಲ್ಲಿ ಈ ಲೇಖನವನ್ನೂ ಸೇರಿಸಿದ್ದಾರೆ. ↩︎

Leave a Reply

Your email address will not be published. Required fields are marked *